WPL 2025 Auction: 1.60 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದ 16 ವರ್ಷದ ಜಿ ಕಮಲಿನಿ ಯಾರು? ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
Who is G Kamalini: 10 ಲಕ್ಷ ಮೂಲ ಬೆಲೆ ಹೊಂದಿದ್ದ 16 ವರ್ಷದ ಜಿ ಕಮಲಿನಿ 1.60 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಸಿಮ್ರಾನ್ ಶೇಖ್ ಭಾರತದ ದುಬಾರಿ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025 ಮಿನಿ ಹರಾಜಿನಲ್ಲಿ 16 ವರ್ಷದ ಭಾರತೀಯ ಆಟಗಾರ್ತಿಯೊಬ್ಬರು ಬಂಪರ್ ಲಾಟರಿ ಹೊಡೆದಿದ್ದಾರೆ. ತಮಿಳುನಾಡಿನ ಜಿ ಕಮಲಿನಿ ಅವರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಏಕ್ದಮ್ 1.60 ಕೋಟಿ ರೂಪಾಯಿಗೆ ಏರಿಸಿಕೊಂಡಿದ್ದಾರೆ. ಈ ಯುವ ಆಟಗಾರ್ತಿಯನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ. 10 ಲಕ್ಷ ರೂ ಮೂಲ ಬೆಲೆಗೆ ಹರಾಜು ಅಖಾಡಕ್ಕೆ ಪ್ರವೇಶಿಸಿದ ಕಮಲಿನಿ ಖರೀದಿಗೆ ಮುಂಬೈ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ಪೈಪೋಟಿ ನಡೆಯಿತು. ಆದರೆ ಈ ಬಿಡ್ಡಿಂಗ್ ವಾರ್ನಲ್ಲಿ ಮುಂಬೈ ಮೇಲುಗೈ ಸಾಧಿಸಿತು.
ಜಿ ಕಮಲಿನಿ ಯಾರು?
ತಮಿಳುನಾಡಿನ ಕಮಲಿನಿ ಮುಂದಿನ ವರ್ಷ ಮಲೇಷ್ಯಾದಲ್ಲಿ ನಡೆಯಲಿರುವ ಮಹಿಳೆಯರ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕಮಲಿನಿ ಪ್ರಸ್ತುತ ನಡೆಯುತ್ತಿರುವ ಅಂಡರ್ 19 ಏಷ್ಯಾ ಕಪ್ 2024 ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಮಲಿನಿ ಪಾಕಿಸ್ತಾನ ಅಂಡರ್ 19 ತಂಡದ ವಿರುದ್ಧ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೌಲಾಲಂಪುರ್‌ನ ಬೇಯುಮಾಸ್ ಕ್ರಿಕೆಟ್ ಓವಲ್ ಮೈದಾನದಲ್ಲಿ ಪಾಕ್ ವಿರುದ್ಧದ 68 ರನ್‌ಗಳ ಅಲ್ಪ ರನ್-ಚೇಸ್‌ನಲ್ಲಿ ಕೇವಲ 29 ಎಸೆತಗಳಲ್ಲಿ 44 ರನ್ ಗಳಿಸಿದರು.
ಕೆಲವು ತಿಂಗಳುಗಳ ಹಿಂದೆ ತಮಿಳುನಾಡು ಅಂಡರ್-19 ದೇಶೀಯ ಟೂರ್ನಿ ಗೆಲ್ಲುವಲ್ಲಿ ಯುವ ಆಟಗಾರ್ತಿ ಪ್ರಮುಖ ಪಾತ್ರವಹಿಸಿದ್ದರು. ಆ ಟೂರ್ನಿಯಲ್ಲಿ ಕೇವಲ 8 ಪಂದ್ಯಗಳಲ್ಲಿ 311 ರನ್‌ಗಳನ್ನು ಸಿಡಿಸಿದ್ದರು. ಕಮಲಿನಿ ಅವರು ದಕ್ಷಿಣ ಆಫ್ರಿಕಾ ಎ ವಿರುದ್ಧದ ಅಂಡರ್ 19 ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಬಿ ಪರ 79 ರನ್ ಗಳಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು. ಒಟ್ಟಾರೆಯಾಗಿ ಕಮಲಿನಿ 3 ಟಿ20 ಪಂದ್ಯಗಳಲ್ಲಿ 89.69 ಸ್ಟ್ರೈಕ್ ರೇಟ್‌ನಲ್ಲಿ 87 ರನ್ ಗಳಿಸಿದ್ದಾರೆ.
ಸಿಮ್ರಾನ್ ಶೇಖ್ಗೆ 1.90 ಕೋಟಿ ರೂಪಾಯಿ
ಇದೇ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ತಂಡವು ಸಿಮ್ರಾನ್ ಶೇಖ್ ಅವರನ್ನು 1.9 ಕೋಟಿ ರೂ.ಗೆ ಖರೀದಿಸಿದೆ. ಪ್ರಸ್ತುತ ಅವರು ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ 1.60 ಕೋಟಿ ಬಿಡ್‌ನೊಂದಿಗೆ ಮುನ್ನಡೆ ಸಾಧಿಸಿತು. ಆದರೆ ಗುಜರಾತ್ ಜೈಂಟ್ಸ್ ಬಿಡ್ ಅನ್ನು 1.7 ಕೋಟಿ ರೂ.ಗೆ ಹೆಚ್ಚಿಸಿತು. ಆದರೂ ನಿರಾಸೆಗೊಳ್ಳದ ಡೆಲ್ಲಿ 1.8 ಕೋಟಿ ರೂಪಾಯಿಗೆ ಏರಿಸಿತು. ಉಭಯ ಫ್ರಾಂಚೈಸಿಗಳ ಪೈಪೋಟಿಯಿಂದಾಗಿ ಅನ್ಕ್ಯಾಪ್ಟ್ ಬ್ಯಾಟರ್ ಬಿಡ್ ಮೊತ್ತ 1.9ಕ್ಕೆ ತಲುಪಿತು. ಕೊನೆಗೆ ಗುಜರಾತ್ 1.90 ಕೋಟಿ ರೂ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು.
ಮುಂಬೈನ 22 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್, ಮುಂಬೈ ಗೆದ್ದ ಹಿರಿಯ ಮಹಿಳಾ ಟಿ20 ಟ್ರೋಫಿ ಮತ್ತು ಚಾಲೆಂಜರ್ ಟ್ರೋಫಿ ಗೆದ್ದ ಭಾರತ ಇ ತಂಡದ ಸದಸ್ಯರಾಗಿದ್ದರು. ಸಿಮ್ರಾನ್ ಶೇಖ್ ಅವರು ಡಬ್ಲ್ಯುಪಿಎಲ್ ಆಡಿದ ಅನುಭವವನ್ನೂ ಹೊಂದಿದ್ದಾರೆ. ಮೊದಲ ಎರಡು ಆವೃತ್ತಿಗಳಲ್ಲಿ ಯುಪಿ ವಾರಿಯರ್ಸ್ ಪರ 9 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ಉದ್ಘಾಟನಾ ಡಬ್ಲ್ಯುಪಿಎಲ್ ಹರಾಜಿನಲ್ಲಿ 10 ಲಕ್ಷ ರೂಪಾಯಿಗೆ ಸೇಲ್ ಆಗಿದ್ದರು.
ಡಿಯಾಂಡ್ರಾ ಡಾಟಿನ್ಗೆ 1.7 ಕೋಟಿ
ವೆಸ್ಟ್ ಇಂಡೀಸ್‌ನ ಬಿಗ್-ಹಿಟ್ಟಿಂಗ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಅವರು 1.7 ಕೋಟಿಗೆ ಗುಜರಾತ್ ಜೈಂಟ್ಸ್ಗೆ ಸೋಲ್ಡ್ ಆಗಿದ್ದಾರೆ. ಇವರ ಖರೀದಿಗೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸಿದವು.