ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್; ಪಾಕಿಸ್ತಾನ ಮಣಿಸಿ ಚೊಚ್ಚಲ ಆವೃತ್ತಿಯಲ್ಲೇ ಭಾರತ 'ಚಾಂಪಿಯನ್'
Jul 14, 2024 02:00 AM IST
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್; ಪಾಕಿಸ್ತಾನ ಮಣಿಸಿ ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್
- Pakistan Champions vs India Champions Final: ಚೊಚ್ಚಲ ಆವೃತ್ತಿಯ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್-2024 ಲೀಗ್ ಫೈನಲ್ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಗೆದ್ದ ಭಾರತ ಚಾಂಪಿಯನ್ಸ್, ಪ್ರಶಸ್ತಿ ಗೆದ್ದಿದೆ.
ನಿವೃತ್ತ ಕ್ರಿಕೆಟಿಗರು ಆಡಿದ ಚೊಚ್ಚಲ ಆವೃತ್ತಿಯ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್-2024 ಲೀಗ್ನಲ್ಲಿ (World Championship of Legends 2024) ಭಾರತ ಚಾಂಪಿಯನ್ಸ್, ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜುಲೈ 13ರಂದು ಶನಿವಾರ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಜರುಗಿದ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಪಡೆ 5 ವಿಕೆಟ್ಗಳಿಂದ ಸೋಲಿಸಿ ಲೆಜೆಂಡ್ಸ್ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಫೈನಲ್ನಲ್ಲೂ ಪಾಕಿಸ್ತಾನವನ್ನೇ ಸೋಲಿಸಿದ್ದ ಭಾರತ ತಂಡ ಚಾಂಪಿಯನ್ ಆಗಿದ್ದನ್ನು ಲೆಜೆಂಡ್ಸ್ ಲೀಗ್ ನೆನಪಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಬ್ಬರಿಸಿದ ಭಾರತ, ಬದ್ಧವೈರಿ ಪಾಕ್ಗೆ ಮಣ್ಣು ಮುಕ್ಕಿಸಿತು. 2007ರಲ್ಲೂ ಇದೇ ರೀತಿ ಸೋಲಿಸಿ ಎಂಎಸ್ ಧೋನಿ ನಾಯಕತ್ವದಲ್ಲಿ ಮೆನ್ ಇನ್ ಗ್ರೀನ್ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ಅಂಬಾಟಿ ರಾಯುಡು ಅವರು ಭರ್ಜರಿ ಅರ್ಧಶತಕ (50) ಸಿಡಿಸಿ ಪಾಕಿಸ್ತಾನ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ನೆರವಾದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಚಾಂಪಿಯನ್ಸ್, ತನ್ನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 19.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು ಗಮನ ಸೆಳೆಯಿತು.
ಭಾರತ ಟ್ರೋಫಿ ಗೆದ್ದಿದ್ದೇ ರೋಚಕ
ಭಾರತ ಟೂರ್ನಿಯ ಲೀಗ್ನಲ್ಲಿ ಗೆದ್ದಿದ್ದೇ 2 ಪಂದ್ಯ. ಆಡಿದ ಪಂದ್ಯಗಳಲ್ಲಿ 3ರಲ್ಲಿ ಸೋತಿದ್ದ ಯುವಿ ಪಡೆ, ಅಂಕಪಟ್ಟಿಯಲ್ಲಿ ನೆಟ್ರೇಟ್ ಆಧಾರದಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯಿತು. ಸೌತ್ ಆಫ್ರಿಕಾ ಚಾಂಪಿಯನ್ಸ್ಗಿಂತಲೂ ಕೊಂಚ ರನ್ರೇಟ್ ಅಧಿಕ ಪಡೆದ ಭಾರತ ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಬಳಿಕ ಭರ್ಜರಿ ಫಾರ್ಮ್ನಲ್ಲಿದ್ದ ಆಸೀಸ್ ತಂಡವನ್ನು ಸೆಮೀಸ್ನಲ್ಲಿ 86 ರನ್ಗಳಿಂದ ಗೆದ್ದು ಬೀಗಿತು. ಇದೀಗ ಫೈನಲ್ನಲ್ಲೂ ನೆರೆಯ ರಾಷ್ಟ್ರವನ್ನು ಮಣಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಅಂಬಾಟಿ ರಾಯುಡು ಭರ್ಜರಿ ಅರ್ಧಶತಕ
157 ರನ್ಗಳ ಗುರಿ ಹಿಂಬಾಲಿಸಿದ ಭಾರತ ಮೊದಲ ವಿಕೆಟ್ಗೆ 34 ರನ್ ಪೇರಿಸಿತು. ಆರಂಭಿಕ ರಾಬಿನ್ ಉತ್ತಪ್ಪ 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮತ್ತೊಬ್ಬ ಓಪನರ್ ಅಂಬಾಟಿ ರಾಯುಡು ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಾಯುಡು 30 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 50 ರನ್ ಬಾರಿಸಿದರು. ಆದರೆ ಸುರೇಶ್ ರೈನಾ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ರಾಯುಡುಗೆ ಗುರುಕೀರತ್ ಸಿಂಗ್ 34 ರನ್ ಸಿಡಿಸಿ ಸಖತ್ ಸಾಥ್ ಕೊಟ್ಟರು. 3ನೇ ವಿಕೆಟ್ಗೆ 60 ರನ್ಗಳ ಪಾಲುದಾರಿಕೆ ನೀಡಿದರು. ಅದಾಗಲೇ ಭಾರತ ಗೆಲುವಿನತ್ತ ಹೆಜ್ಜೆಹಾಕಿತ್ತು. ಅಂತಿಮ ಹಂತದಲ್ಲಿ ಯೂಸುಫ್ ಸ್ಫೋಟಕ 30 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯುವಿ ಅಜೇಯ 15 ರನ್ಗಳ ಕಾಣಿಕೆ ನೀಡಿದರು.
ಶಾಹೀದ್ ಅಫ್ರಿದಿ ಪಡೆಯು ಮೊದಲು ಬ್ಯಾಟಿಂಗ್ ನಡೆಸಿ ಉತ್ತಮ ಮೊತ್ತ ಗಳಿಸಿತು. ಶೋಯೆಬ್ ಮಲಿಕ್ 41 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಕಮ್ರಾನ್ ಅಕ್ಮಲ್ 24, ಶಾರ್ಜೀಲ್ ಖಾನ್ 12, ಶೋಯೆಬ್ ಮಕ್ಸೂದ್ 21, ಮಿಸ್ಬಾ ಉಲ್ ಹಕ್ 18 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮಿಸ್ಬಾ ಆಟದ ಮಧ್ಯೆ ಗಾಯಗೊಂಡು ರಿಟೈರ್ಡ್ ಹರ್ಟ್ ಆದರು. ಪಾಕಿಸ್ತಾನ ಬ್ಯಾಟರ್ಗಳನ್ನು ಭಾರತೀಯ ಬೌಲರ್ಗಳು ಕಟ್ಟಿ ಹಾಕಿದರು. ಅನುರೀತ್ ಸಿಂಗ್ 3 ವಿಕೆಟ್ ಕಿತ್ತಿದರೆ, ಪವನ್ ನೇಗಿ, ವಿನಯ್ ಕುಮಾರ್, ಇರ್ಪಾನ್ ಪಠಾಣ್ ತಲಾ ಒಂದು ವಿಕೆಟ್ ಕಬಳಿಸಿ ಮಿಂಚಿದರು.