ಜೈಸ್ವಾಲ್ 93, ಗಿಲ್ 58; ಆರಂಭಿಕರ ಅಬ್ಬರಕ್ಕೆ ಜಿಂಬಾಬ್ವೆ ತತ್ತರ, 10 ವಿಕೆಟ್ ಜಯದೊಂದಿಗೆ ಸರಣಿಗೆ ಮುತ್ತಿಕ್ಕಿದ ಭಾರತ
IND beat ZIM: ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೆ, ಸರಣಿಯನ್ನೂ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಜಿಂಬಾಬ್ವೆ ವಿರುದ್ಧದ 4ನೇ ಟಿ20ಐ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ, ಒಂದು ಪಂದ್ಯ ಬಾಕಿ ಇರುವಂತೆಯೇ 3-1ರಲ್ಲಿ ಚುಟುಕು ಸರಣಿಯನ್ನು ವಶಪಡಿಸಿಕೊಂಡಿದೆ. ಆತಿಥೇಯ ಜಿಂಬಾಬ್ವೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ ಯುವ ಭಾರತ, 153 ರನ್ಗಳ ಸುಲಭ ಗುರಿ ಬೆನ್ನಟ್ಟಲು ನೆರವಾಯಿತು. ಮೊದಲ ಪಂದ್ಯದಲ್ಲಿ ಹೀನಾಯ ಸೋಲುಂಡಿದ್ದ ಮೆನ್ ಇನ್ ಬ್ಲ್ಯೂ ಅಮೋಘ ಪುನರಾಗಮನದ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ಭಾರತೀಯ ಯುವ ಪಡೆ, ಬೌಲಿಂಗ್ನಲ್ಲೂ ಅಸಾಧಾರಣ ಪ್ರದರ್ಶನ ನೀಡಿತು. ಖಲೀಲ್ ಅಹ್ಮದ್ 2 ವಿಕೆಟ್ ಪಡೆದು ಜಿಂಬಾಬ್ವೆ ವಿರುದ್ಧ ಪರಾಕ್ರಮ ಮೆರೆದಿದ್ದಾರೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ, 7 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತು. ಸಿಕಂದರ್ ರಾಜಾ ಮಾತ್ರ 46 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಈ ಗುರಿ ಬೆನ್ನಟ್ಟಿದ ಭಾರತ ತಂಡ, ಇನ್ನೂ 28 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ನಗೆ ಬೀರಿದೆ. ಜೈಸ್ವಾಲ್ ಅಜೇಯ 93, ಗಿಲ್ ಔಟಾಗದೆ 58 ರನ್ ಬಾರಿಸಿ 15.2 ಓವರ್ಗಳಲ್ಲೇ ತಂಡ ಗೆಲುವಿನ ದಡ ಸೇರಿಸಿದರು.
ಗಿಲ್, ಭರ್ಜರಿ ಬ್ಯಾಟಿಂಗ್
4ನೇ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭರ್ಜರಿ ಪ್ರದರ್ಶನ ತೋರಿತು. 153 ರನ್ಗಳ ಗುರಿ ಹಿಂಬಾಲಿಸಿದ ಭಾರತ, ಜಿಂಬಾಬ್ವೆ ಬೌಲರ್ಗಳ ವಿರುದ್ಧ ರೌದ್ರಾವತಾರ ತೋರಿತು. ಆತಿಥೇಯ ತಂಡವು ವಿಕೆಟ್ ಪಡೆಯಲು ಪರದಾಟ ನಡೆಸಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಬೌಲರ್ಗಳಿಗೆ ಬೆಂಡೆತ್ತಿ ತಲಾ ಅರ್ಧಶತಕ ಸಿಡಿಸಿದರು. ಆದರೆ ಅಜೇಯರಾಗಿ ಉಳಿದ ಜೈಸ್ವಾಲ್ 53 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಿತ 93 ರನ್ ಗಳಿಸಿದರು. ಆದರೆ, ಶತಕ ವಂಚಿತರಾದರು.
ಜೈಸ್ವಾಲ್ಗೆ ಭರ್ಜರಿ ಸಾಥ್ ಕೊಟ್ಟ ನಾಯಕ ಕೂಡ ಅಮೋಘ ಫಿಫ್ಟಿ ಬಾರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿರುವುದರ ಜೊತೆ ವಿಕೆಟ್ ಕೂಡ ಕಾಪಾಡಿಕೊಂಡರು. 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 59 ರನ್ ಗಳಿಸಿದರು. ಈ ಸರಣಿಯಲ್ಲಿ ಗಿಲ್ ಅವರ 2ನೇ ಅರ್ಧಶತಕವಾಗಿದೆ. ಬ್ಯಾಟಿಂಗ್ ಜೊತೆಗೆ ನಾಯಕನಾಗಿ ಯಶಸ್ಸು ಕಂಡಿದ್ದು, ಬಿಸಿಸಿಐಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಆದರೆ ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ, ತನ್ನ ತವರಿನ ಪಿಚ್ನಲ್ಲಿ ಉತ್ತಮ ಮೊತ್ತ ಕಲೆ ಹಾಕಲು ವಿಫಲವಾಗಿತ್ತು.
ಸಿಕಂದರ್ ರಾಜಾ ಉತ್ತಮ ಆಟ
ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ವೆಸ್ಲಿ ಮಾಧೆವೆರೆ (25) ಮತ್ತು ಟಿ ಮರುಮಣಿ (32) ಅವರು ಮೊದಲ ವಿಕೆಟ್ಗೆ 61 ರನ್ಗಳ ಕಾಣಿಕೆ ನೀಡಿದರು. ಆದರೆ, ಆ ನಂತರ ಟೀಮ್ ಇಂಡಿಯಾ ಬೌಲರ್ಗಳು ಪಾರಮ್ಯ ಮೆರೆದರು. ಬ್ರಿಯಾನ್ ಬೆನ್ನೆಟ್ 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಈ ವೇಳೆ ಸಿಕಂದರ್ ರಾಜಾ ಅವರು 46 ರನ್ ಗಳಿಸಿ ಚೇತರಿಕೆ ನೀಡಿದರು. ಆದರೆ ಉಳಿದ ಆಟಗಾರರಿಂದ ಸಹಕಾರ ಸಿಗಲಿಲ್ಲ. ಜೊನಾಥನ್ ಚಾಂಪೆಲ್ 3, ಡೆಯೊನ್ ಮೇಯರ್ಸ್ 12, ಕ್ಲೈವ್ ಮಡಾಂಡೆ 7 ರನ್ ಗಳಿಸಲಷ್ಟೆ ಶಕ್ತರಾದರು. ಖಲೀಲ್ ಅಹ್ಮದ್ 2 ವಿಕೆಟ್, ಪದಾರ್ಪಣೆಗೈದ ತುಷಾರ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ, ಶಿವಂ ದುಬೆ ತಲಾ 1 ವಿಕೆಟ್ ಪಡೆದರು.