ಮುಂದಿನ ವಾರವೇ ಅಜಿತ್ ಅಗರ್ಕರ್​ ಭೇಟಿಯಾಗಲಿದ್ದಾರೆ ಗೌತಮ್ ಗಂಭೀರ್​; ಏಕದಿನ ಕ್ರಿಕೆಟ್​ಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂದಿನ ವಾರವೇ ಅಜಿತ್ ಅಗರ್ಕರ್​ ಭೇಟಿಯಾಗಲಿದ್ದಾರೆ ಗೌತಮ್ ಗಂಭೀರ್​; ಏಕದಿನ ಕ್ರಿಕೆಟ್​ಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್

ಮುಂದಿನ ವಾರವೇ ಅಜಿತ್ ಅಗರ್ಕರ್​ ಭೇಟಿಯಾಗಲಿದ್ದಾರೆ ಗೌತಮ್ ಗಂಭೀರ್​; ಏಕದಿನ ಕ್ರಿಕೆಟ್​ಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್

Team India Squad: ನೂತನ ಕೋಚ್ ಗೌತಮ್ ಗಂಭೀರ್ ಅವರು ಮುಂದಿನ ವಾರ ಆಯ್ಕೆದಾರರನ್ನು ಭೇಟಿಯಾಗಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಅಂತಿಮಗೊಳಿಸಲಿದ್ದಾರೆ.

ಮುಂದಿನ ವಾರವೇ ಅಜಿತ್ ಅಗರ್ಕರ್​ ಭೇಟಿಯಾಗಲಿದ್ದಾರೆ ಗೌತಮ್ ಗಂಭೀರ್​; ಏಕದಿನ ಕ್ರಿಕೆಟ್​ಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್
ಮುಂದಿನ ವಾರವೇ ಅಜಿತ್ ಅಗರ್ಕರ್​ ಭೇಟಿಯಾಗಲಿದ್ದಾರೆ ಗೌತಮ್ ಗಂಭೀರ್​; ಏಕದಿನ ಕ್ರಿಕೆಟ್​ಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್

ಭಾರತ ತಂಡದ ನೂತನ ಮುಖ್ಯಕೋಚ್ ಗೌತಮ್ ಗಂಭೀರ್ (Gautam Gambhir) ಅವರು ಮುಂದಿನ ವಾರ ಅಜಿತ್ ಅಗರ್ಕರ್ (Ajit Agarkar) ನೇತೃತ್ವದ ಆಯ್ಕೆ ಸಮಿತಿಯನ್ನು ಭೇಟಿಯಾಗಲಿದ್ದಾರೆ. ಶ್ರೀಲಂಕಾದಲ್ಲಿ ನಡೆಯಲಿರುವ ತಲಾ 3 ಪಂದ್ಯಗಳ ಟಿ20ಐ ಮತ್ತು ಏಕದಿನ ಸರಣಿಗಳಿಗೆ (T20I & ODI) ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಲಿದ್ದಾರೆ. ಜುಲೈ 27ರಿಂದ ಟಿ20ಐ ಸರಣಿ ಆರಂಭವಾಗಲಿದೆ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಈ ಸರಣಿಗೆ ವಿಶ್ರಾಂತಿ ಪಡೆಯಲಿದ್ದಾರೆ. ಹಾಗಾಗಿ ಹಾರ್ದಿಕ್ ಪಾಂಡ್ಯ ಟಿ20ಐ ಸರಣಿಗೆ ಕ್ಯಾಪ್ಟನ್, ಕೆಎಲ್ ರಾಹುಲ್ ಏಕದಿನ ಸರಣಿಗೆ ನಾಯಕನಾಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಾಯಕರನ್ನು ಮತ್ತು ಆಟಗಾರರನ್ನು ಅಂತಿಮಗೊಳಿಸಲು ಗಂಭೀರ್​, ಸೆಲೆಕ್ಷನ್ ಕಮಿಟಿಯನ್ನು ಭೇಟಿಯಾಗಲಿದ್ದಾರೆ.

ಈ ಭೇಟಿಯಲ್ಲಿ ಹಾರ್ದಿಕ್ ಅವರನ್ನು ಬಿಸಿಸಿಐ ಖಾಯಂ ಟಿ20ಐ ನಾಯಕನನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಟಿ20ಐಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾಗೆ 2024ರ ಟಿ20 ವಿಶ್ವಕಪ್​ನಲ್ಲಿ ಉಪನಾಯಕನಾಗಿದ್ದರು. ಬಿಸಿಸಿಐ ವಲಯದಲ್ಲೂ ಅವರನ್ನೇ ಕ್ಯಾಪ್ಟನ್​ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿದೆ.

ಸೂರ್ಯಕುಮಾರ್ ಯಾದವ್ ಅವರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ. ರೋಹಿತ್, ಕೊಹ್ಲಿ, ಜಡೇಜಾ, ಬುಮ್ರಾ ಅವರನ್ನು ಹೊರತುಪಡಿಸಿ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರನ್ನು ಶ್ರೀಲಂಕಾ ಸರಣಿಗೆ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಅಥವಾ ಮುಕೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ರಿಷಭ್ ಪಂತ್ ಅವರ ಕೆಲಸದ ಹೊರೆಯ ಬಗ್ಗೆಯೂ ಚರ್ಚಿಸಬಹುದು. ಎಡಗೈ ಬ್ಯಾಟರ್​ ಐಪಿಎಲ್ 2024 ರಿಂದ ನಿರಂತರ ಕ್ರಿಕೆಟ್ ಆಡುತ್ತಿದ್ದಾರೆ.ಟೆಸ್ಟ್​ನಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್​ ಆಗಿರುವ ಪಂತ್​ ಅವರಿಗೆ ಶ್ರೀಲಂಕಾ ಸರಣಿಗೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗುತ್ತಿದೆ. ಆಯ್ಕೆದಾರರು ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಅವರನ್ನು ಟಿ20ಐ ಸರಣಿಗೆ ಆಯ್ಕೆ ಮಾಡಬಹುದು.

ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಕಂಬ್ಯಾಕ್

ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಗಂಭೀರ್, ಇಬ್ಬರನ್ನೂ ಏಕದಿನ ಕ್ರಿಕೆಟ್​​ಗೆ ಕರೆ ತರುತ್ತಿದ್ದಾರೆ. ಕಳೆದ ಐಪಿಎಲ್​ನಲ್ಲಿ ಗಂಭೀರ್ ಕೆಕೆಆರ್ ಪರ ಮೆಂಟರ್​ ಆಗಿ ಸೇವೆ ಸಲ್ಲಿಸಿದ್ದರು. ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತಾ 10 ವರ್ಷಗಳ ನಂತರ ಟ್ರೋಫಿ ಗೆದ್ದು ಬೀಗಿತ್ತು. ಬಿಸಿಸಿಐ ಜತೆಗೆ ಕಾಂಟ್ರ್ಯಾಕ್​ ಕಳೆದುಕೊಂಡ ಬಳಿಕ ಅಯ್ಯರ್​​ಗೆ ಇದು ಮೊದಲ ಸರಣಿಯಾಗಲಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕ-ನಾಯಕರಾಗಿ ಗಂಭೀರ್ ಮತ್ತು ರಾಹುಲ್ ಒಟ್ಟಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಹುಲ್ ಅವರನ್ನು ಟೆಸ್ಟ್ ಸ್ವರೂಪದಲ್ಲಿ ರೋಹಿತ್​​ ಶರ್ಮಾಗೆ ಉಪನಾಯಕನಾಗಿ ನೇಮಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಆದರೆ ಜಸ್ಪ್ರೀತ್ ಬುಮ್ರಾ ಕೂಡ ಈ ರೇಸ್​​ನಲ್ಲಿದ್ದಾರೆ.

ಬಿಸಿಸಿಐ ಮಾತು ಕೇಳದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿತ್ತು. ಆದರೆ, ಅಯ್ಯರ್​​ ಕೊನೆಯ ಘಟ್ಟದಲ್ಲಿ ರಣಜಿ ಆಡುವ ಮೂಲಕ ಬಿಸಿಸಿಐ ಕೋಪವನ್ನು ತಣ್ಣಗಾಗಿಸಿದ್ದಾರೆ. ಹೀಗಾಗಿ ಅಯ್ಯರ್​ ಮತ್ತೆ ತಂಡಕ್ಕೆ ಮರಳುತ್ತಾರೆಂದು ವರದಿಯಾಗಿದೆ. ಆದರೆ, ಇಶಾನ್ ಕಿಶನ್​​ಗೆ ಅವಕಾಶ ಸಿಗುವ ಕಷ್ಟ ಎಂದೇ ಹೇಳಬಹುದು.

Whats_app_banner