Jay Shah: ಗೌತಮ್ ಗಂಭೀರ್ ಅಲ್ಲ; ಜಿಂಬಾಬ್ವೆ ಟಿ20ಐ ಸರಣಿಗೆ ಹೊಸ ಹೆಡ್ಕೋಚ್ ಖಚಿತಪಡಿಸಿದ ಜಯ್ ಶಾ
Jul 01, 2024 04:46 PM IST
ಗೌತಮ್ ಗಂಭೀರ್ ಅಲ್ಲ; ಜಿಂಬಾಬ್ವೆ ಟಿ20ಐ ಸರಣಿಗೆ ಹೊಸ ಹೆಡ್ಕೋಚ್ ಖಚಿತಪಡಿಸಿದ ಜಯ್ ಶಾ
- Jay Shah: ಜುಲೈ 6ರಿಂದ ಶುರುವಾಗುವ ಐದು ಪಂದ್ಯಗಳ ಟಿ20ಐ ಸರಣಿಗೆ ಹೆಡ್ಕೋಚ್ ಯಾರೆಂಬುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಖಚಿತಪಡಿಸಿದ್ದಾರೆ.
2024ರ ಟಿ20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರ ಕೊನೆಗೊಂಡಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ರೋಹಿತ್ ಪಡೆ 2ನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ ರೋಹಿತ್ ಶರ್ಮಾ ನೇತೃತ್ವದ ತಂಡ ಎರಡೂ ಫೈನಲ್‌ಗಳಲ್ಲಿ ಸೋತಿತ್ತು.
ಭಾರತ ತಂಡವು ಟಿ20 ವಿಶ್ವಕಪ್‌ನಲ್ಲಿ ತಮ್ಮ ಐಸಿಸಿ ಟ್ರೋಫಿ ಬರ ಕೊನೆಗೊಳಿಸಿತು. ಕೊನೆಯ ಓವರ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಏಳು ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ದ್ರಾವಿಡ್ ಅವರ ಅಧಿಕಾರವಧಿ ಇಲ್ಲಿಗೆ ಕೊನೆಗೊಂಡಿತು. ಆದರೆ ದ್ರಾವಿಡ್ ಉನ್ನತ ಹುದ್ದೆಗೆ ಮರು ಅರ್ಜಿ ಸಲ್ಲಿಸಿಲ್ಲ. ಅವರ ಅವಧಿ ಮುಗಿದ ನಂತರ ಸ್ಥಾನವನ್ನು ತೊರೆಯುವುದಾಗಿ ಈಗಾಗಲೇ ದೃಢಪಡಿಸಿದ್ದರು.ಆದರೆ ಮುಂದಿನ ಕೋಚ್ ಯಾರು ಎಂಬುದು ಇನ್ನೂ ಅಧಿಕೃತಗೊಂಡಿಲ್ಲ.
ಜಿಂಬಾಬ್ವೆ ಸರಣಿಗೆ ಕೋಚ್ ಯಾರು?
ಗೌತಮ್ ಗಂಭೀರ್ ಹೆಸರು ಭಾರತ ತಂಡದ ಹೊಸ ಮುಖ್ಯಕೋಚ್ ಆಗಲು ಸಿದ್ಧರಾಗಿದ್ದಾರೆ. ಆದರೆ, ಅದರ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಗಂಭೀರ್ ಹುದ್ದೆಯನ್ನು ಸ್ವೀಕರಿಸುವ ವರದಿಗಳ ನಡುವೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜಿಂಬಾಬ್ವೆ ಸರಣಿಗೆ ಭಾರತದ ಕೋಚ್ ಅನ್ನು ಖಚಿತಪಡಿಸಿದ್ದಾರೆ. ಬಾರ್ಬಡೋಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯ್ ಶಾ, ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಕೋಚ್ ಆಗಲಿದ್ದಾರೆ ಎಂದಿದ್ದಾರೆ.
ಲಕ್ಷ್ಮಣ್ ಅವರು ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಅಧ್ಯಕ್ಷರಾಗಿದ್ದಾರೆ. 2021ರಲ್ಲಿ ಎನ್ಸಿಎಗೆ ಸೇರ್ಪಡೆಗೊಂಡ ಲಕ್ಷ್ಮಣ್ ಅವರು ದ್ರಾವಿಡ್ ಅನುಪಸ್ಥಿತಿಯಲ್ಲಿ ಕೆಲವು ಸರಣಿಗಳಲ್ಲಿ ಭಾರತ ತಂಡವನ್ನು ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. 'ಶೀಘ್ರದಲ್ಲೇ ಕೋಚ್ ಮತ್ತು ಸೆಲೆಕ್ಟರ್ಗಳ ನೇಮಕ ಮಾಡಲಾಗುವುದು. ಕ್ರಕೆಟ್ ಸಲಹಾ ಸಮಿತಿ ಇಬ್ಬರು ಹೆಸರನ್ನು ಸಂದರ್ಶಿಸಿ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಜಯ್ ಶಾ ಹೇಳಿದ್ದಾರೆ.
ಮುಂಬೈ ತಲುಪಿದ ನಂತರ ಸಮಿತಿ ಏನು ನಿರ್ಧರಿಸುತ್ತೋ ಅದನ್ನೇ ಅಂತಿಮಗೊಳಿಸುತ್ತೇವೆ. ವಿವಿಎಸ್ ಲಕ್ಷ್ಮಣ್ ಅವರು ಜಿಂಬಾಬ್ವೆ ಟಿ20 ಸರಣಿಗೆ ತರಬೇತುದಾರರಾಗಿ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಶ್ರೀಲಂಕಾ ಸರಣಿಯಿಂದ ಹೊಸ ಕೋಚ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ. ದ್ರಾವಿಡ್ ಬದಲಿಗೆ ಮುಂದಿನ ಮುಖ್ಯ ಕೋಚ್ ಆಗಲು ಆಫರ್ ನೀಡಲಾಗಿತ್ತು. ಆದರೆ, ಉನ್ನತ ಹುದ್ದೆ ಅಲಂಕರಿಸಲು ಹಿಂದೇಟು ಹಾಕಿದರು.
ಎನ್ಸಿಎ ಅಧ್ಯಕ್ಷರಾಗಿ ಅವರ ಅವಧಿಯು 2024ರಲ್ಲಿ ಕೊನೆಗೊಳ್ಳುತ್ತದೆ. ಲಕ್ಷ್ಮಣ್ ಅವರು 2021ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಲು ಬಯಸಿದ್ದರು. ಆದರೆ ಎನ್ಸಿಎ ಪಾತ್ರವನ್ನು ನೀಡಲಾಯಿತು. ದ್ರಾವಿಡ್ 2019 ರಿಂದ 2021 ರವರೆಗೆ ಎನ್ಸಿಎ ಅಧ್ಯಕ್ಷರಾಗಿದ್ದರು.