ಶಮಿ ಅಲ್ಲ: ಬಾಂಗ್ಲಾ ವಿರುದ್ಧದ ಟೆಸ್ಟ್ ಮೂಲಕ 1 ವರ್ಷದ ಬಳಿಕ ಭಾರತಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಈ ಬೌಲರ್
Sep 04, 2024 09:40 AM IST
ಭಾರತ ಟೆಸ್ಟ್ ಕ್ರಿಕೆಟ್ ತಂಡ.
- Umesh Yadav: ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಲ ಆಟಗಾರರ ಮೇಲೆ ಆಯ್ಕೆದಾರರು ಕಣ್ಣಿಟ್ಟಿದ್ದಾರೆ. ಈ ಹೋಮ್ ಸರಣಿಯಲ್ಲಿ ಅನೇಕ ಹೊಸ ಆಟಗಾರರನ್ನು ಸಹ ನೋಡಬಹುದು. ಆದಾಗ್ಯೂ, ಆಯ್ಕೆದಾರರು ಭಾರತದಲ್ಲಿ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರನ್ನು ಮರಳಿ ಕರೆತರುವ ಯೋಜನೆ ಹಾಕಿಕೊಂಡಿದೆಯಂತೆ.
ಬಾಂಗ್ಲಾದೇಶ ವಿರುದ್ಧ ಶೀಘ್ರದಲ್ಲೇ ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಆಡಲು ಭಾರತ ಸಜ್ಜಾಗಿದೆ. ಇದರಲ್ಲಿ ಭಾರತ ತವರಿನಲ್ಲಿ ಎರಡು ಟೆಸ್ಟ್ ಹಾಗೂ ಮೂರು ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ದೇಶೀಯ ಅಂತರಾಷ್ಟ್ರೀಯ ಸೀಸನ್ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದೆ. ಈ ಟೆಸ್ಟ್ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದರೀಗ ಭಾರತದ ಪಿಚ್‌ಗಳಲ್ಲಿ ಎದುರಾಳಿಗೆ ಅಪಾಯವನ್ನುಂಟುಮಾಡುವ ಭಯಾನಕ ವೇಗಿ ಒಂದು ವರ್ಷದ ನಂತರ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಲ ಆಟಗಾರರ ಮೇಲೆ ಆಯ್ಕೆದಾರರು ಕಣ್ಣಿಟ್ಟಿದ್ದಾರೆ. ತವರಿನ ಸರಣಿಯಲ್ಲಿ ಅನೇಕ ಹೊಸ ಆಟಗಾರರನ್ನು ಸಹ ನೋಡಬಹುದು. ಆದಾಗ್ಯೂ, ಆಯ್ಕೆದಾರರು ಭಾರತದಲ್ಲಿ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರನ್ನು ಮರಳಿ ಕರೆತರುವ ಯೋಜನೆ ಹಾಕಿಕೊಂಡಿದೆಯಂತೆ. ಇದರಲ್ಲಿ ಒಂದು ಹೆಸರು ಉಮೇಶ್ ಯಾದವ್. ತನ್ನ ವೇಗದ ವೇಗ ಮತ್ತು ಸ್ವಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ಕಾಟ ನೀಡಿದ ದಂತಕಥೆ, ಭಾರತದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಿದಾಗ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ.
1 ವರ್ಷದಿಂದ ಟೆಸ್ಟ್ ಆಡಿಲ್ಲ ಉಮೇಶ್ ಯಾದವ್
ಉಮೇಶ್ ಯಾದವ್ ಜೂನ್ 2023 ರಿಂದ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ರೆಡ್ ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಉಮೇಶ್, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 57 ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ. ಭಾರತದ ಪಿಚ್‌ಗಳಲ್ಲಿ ಬೌಲಿಂಗ್ ಮಾಡಿ 101 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದಲ್ಲಿ 32 ಪಂದ್ಯಗಳನ್ನು ಆಡಿದ್ದಾರೆ.
ತವರಿನಲ್ಲಿ ಉಮೇಶ್ ಎರಡು ಬಾರಿ 5 ವಿಕೆಟ್ ಮತ್ತು ಒಮ್ಮೆ 10 ವಿಕೆಟ್ ಕಿತ್ತ ಅಮೋಘ ರೆಕಾರ್ಡ್ ಹೊಂದಿದ್ದಾರೆ. ಇದರಿಂದ ಭಾರತದ ಪಿಚ್‌ಗಳಲ್ಲಿ ಉಮೇಶ್ ಅಪಾಯಕಾರಿ ಬೌಲರ್ ಎಂಬುದನ್ನು ಗಮನಿಸಿ ಬಿಸಿಸಿಐ ಇವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. 2023 ರಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಂತರ ಉಮೇಶ್ ಯಾದವ್‌ಗೆ ಅವಕಾಶ ಸಿಗಲಿಲ್ಲ. ಇದೀಗ, ಆಯ್ಕೆದಾರರು ಇವರ ಪುನರಾಗಮನವನ್ನು ನೋಡುವ ಸಾಧ್ಯತೆಯಿದೆ.
ಉಮೇಶ್ ಯಾದವ್ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಕೂಡ ಹೊಂದಿದ್ದಾರೆ. ಈ ದೇಶದ ವಿರುದ್ಧ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವೇಗದ ಬೌಲರ್ ಪೈಕಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಉಮೇಶ್ 22 ವಿಕೆಟ್ ಪಡೆದಿದ್ದರು. ಅದುಕೂಡ ಕೇವಲ 6 ಪಂದ್ಯಗಳಲ್ಲಿ. ಅಲ್ಲದೆ ಎರಡು ಬಾರಿ 4 ಮತ್ತು ಒಮ್ಮೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಭಾರತ-ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 19 ರಿಂದ ಮತ್ತು ಎರಡನೇ ಟೆಸ್ಟ್ ಪಂದ್ಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿದೆ. ದುಲೀಪ್ ಟ್ರೋಫಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ಬಿಸಿಸಿಐ ಆಯ್ಕೆಗಾರರು ತಮ್ಮ ಕಣ್ಣುಗಳನ್ನು ನೆಟ್ಟಿದ್ದಾರೆ ಎಂದುಕೂಡ ಹೇಳಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಸಂಭಾವ್ಯ ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರಿಷಭ್ ಪಂತ್, ಧ್ರುವ ಜುರೆಲ್, ಕುಲ್ದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.
(ವರದಿ: ವಿನಯ್ ಭಟ್)
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಆಡಬೇಕೆಂದ ಸೂರ್ಯಕುಮಾರ್ ಯಾದವ್ ಕನಸು ನುಚ್ಚುನೂರು: ಅಷ್ಟಕ್ಕು ಏನಾಯಿತು ನೋಡಿ