ಎರಡನೇ ಟೆಸ್ಟ್‌ನಲ್ಲೂ ಭರ್ಜರಿ ಗೆಲುವು; ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಇತಿಹಾಸ ಬರೆದ ಬಾಂಗ್ಲಾದೇಶ-bangladesh cricket team wins historic test series against pakistan after beating pak by 6 wickets in 2nd test jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಎರಡನೇ ಟೆಸ್ಟ್‌ನಲ್ಲೂ ಭರ್ಜರಿ ಗೆಲುವು; ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಇತಿಹಾಸ ಬರೆದ ಬಾಂಗ್ಲಾದೇಶ

ಎರಡನೇ ಟೆಸ್ಟ್‌ನಲ್ಲೂ ಭರ್ಜರಿ ಗೆಲುವು; ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಇತಿಹಾಸ ಬರೆದ ಬಾಂಗ್ಲಾದೇಶ

ಬಾಂಗ್ಲಾದೇಶವು ಪಾಕಿಸ್ತಾನವನ್ನು ಅದರದ್ದೇ ನೆಲದಲ್ಲಿ ಮಣಿಸಿದೆ. ಆ ಮೂಲಕ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. 2022ರ ಸರಣಿಯಲ್ಲಿ ಇಂಗ್ಲೆಂಡ್ 3-0 ಅಂತರದಿಂದ ಪಾಕ್‌ ತಂಡವನ್ನು ವೈಟ್‌ವಾಶ್‌ ಮಾಡಿತ್ತು. ಇದೀಗ ಈ ಸಾಧನೆ ಪುನರಾವರ್ತಿಸಿದ ಎರಡನೇ ತಂಡ ಬಾಂಗ್ಲಾದೇಶ.

ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಇತಿಹಾಸ ಬರೆದ ಬಾಂಗ್ಲಾದೇಶ
ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ ಮಾಡಿ ಇತಿಹಾಸ ಬರೆದ ಬಾಂಗ್ಲಾದೇಶ (AFP)

ಪಾಕಿಸ್ತಾನ ನೆಲದಲ್ಲಿ ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ. ಆತಿಥೇಯ ತಂಡವನ್ನು ಅವರದ್ದೇ ನೆಲದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಪಾಕ್‌ ವಿರುದ್ಧ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿದೆ. ಹದಿನೈದು ದಿನಗಳ ಹಿಂದೆ ಬಾಂಗ್ಲಾದೇಶದಿಂದ ರಾವಲ್ಪಿಂಡಿಗೆ ಬಂದಿಳಿದಾಗ, ಬಾಂಗ್ಲಾದೇಶ ಈ ಸರಣಿ ಗೆಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಮೊದಲ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹುಲಿಗಳು, 10 ವಿಕೆಟ್‌ಗಳಿಂದ ಗೆದ್ದು ದಾಖಲೆ ನಿರ್ಮಿಸಿದ್ದರು. ಆ ಬಳಿಕ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 6 ವಿಕೆಟ್‌ಗೆ 26 ರನ್ ಗಳಿಸಿದ್ದ ತಂಡವು, ಪಂದ್ಯ ಮಾತ್ರವಲ್ಲದೆ ಸರಣಿ ಗೆಲ್ಲುತ್ತದೆ ಎಂದು ಬಹುತೇಕ ಹೆಚ್ಚಿನವರು ನಿರೀಕ್ಷಿಸಿರಲಿಲ್ಲ. ಆದರೆ, ಬಾಂಗ್ಲಾದೇಶ ಅದನ್ನ ಸಾಧಿಸಿದೆ. ಪಾಕಿಸ್ತಾನವನ್ನು ಎರಡನೇ ಟೆಸ್ಟ್‌ನಲ್ಲಿ 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ತಂಡವು ಪಾಕಿಸ್ತಾನವನ್ನು 274 ರನ್‌ಗಳಿಗೆ ಆಲೌಟ್ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾ, ಖುರ್ರಂ ಶಹಜಾದ್ ಮತ್ತು ಮಿರ್ ಹಮ್ಜಾ ಮಾರಕ ದಾಳಿಗೆ ನಲುಗಿ ಕೇವಲ 26 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಈ ವೇಳೆ ತಂಡಕ್ಕೆ ನೆರವಾದವರು ಲಿಟ್ಟನ್ ದಾಸ್ ಮತ್ತು ಮೆಹಿದಿ‌ ಹಸನ್. ರೋಚಕ ಜೊತೆಯಾಟದ ಮೂಲಕ ತಂಡದ ಪುನರಾಗಮನಕ್ಕೆ ಕಾರಣರಾದರು. ಲಿಟನ್ ದಾಸ್‌ ಶತಕ (138) ಬಾರಿಸಿದರು.

ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗದ ಬೌಲರ್‌ಗಳಾದ ನಹೀದ್ ರಾಣಾ ಮತ್ತು ಹಸನ್ ಮಹಮೂದ್ ಒಟ್ಟು 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಬ್ಬರಿಸಿದರು. ಇದರೊಂದಿಗೆ ಪಾಕಿಸ್ತಾನವು ತನ್ನ ಅಲ್ಪ ಮುನ್ನಡೆಯನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಹೀಗಾಗಿ ಕೊನೆಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶಕ್ಕೆ ಅಲ್ಪ ಟಾರ್ಗೆಟ್‌ ದೊರಕಿತು.

ಆರಂಭಿಕ ಆಟಗಾರ ಝಾಕಿರ್ ಹಸನ್ ಬಾಂಗ್ಲಾದೇಶಕ್ಕೆ ವೇಗದ ಹಾಗೂ ಆತ್ಮವಿಶ್ವಾಸದ ಆರಂಭವನ್ನು ನೀಡಿದರು. ಕೊನೆಯ ದಿನದಾಟದಲ್ಲಿ ಕೆಲವು ವಿಕೆಟ್‌ಗಳನ್ನು ಪಡೆದ ಪಾಕಿಸ್ತಾನವು ಪುಟಿದೇಳುವ ಸುಳಿವು ನೀಡಿತು. ಆದರೆ ಅದು ಸಾಧ್ಯವಾಗಲಿಲ್ಲ. ಅನುಭವಿ ಆಟಗಾರರಾದ ಶಕೀಬ್ ಅಲ್ ಹಸನ್ ಮತ್ತು ಮುಷ್ಫಿಕರ್ ರಹೀಮ್ ಬಾಂಗ್ಲಾದೇಶವನ್ನು ಐತಿಹಾಸಿಕ ಸರಣಿ ಗೆಲುವಿನತ್ತ ಮುನ್ನಡೆಸಿದರು.

14 ಪಂದ್ಯಗಳಲ್ಲಿ ಪಾಕ್‌ ವಿರುದ್ಧ ಮೊದಲ ಟೆಸ್ಟ್ ಗೆಲುವು

ಆಗಸ್ಟ್ 25ರಂದು ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನ ವಿರುದ್ಧ 10 ವಿಕೆಟ್‌ ಗೆಲುವು ಸಾಧಿಸಿತ್ತು. ಆಡಿದ 14 ಪಂದ್ಯಗಳಲ್ಲಿ ಪಾಕ್‌ ವಿರುದ್ಧ ಬಾಂಗ್ಲಾದೇಶದ ಮೊದಲ ಟೆಸ್ಟ್ ಗೆಲುವು. ಅದಾದ ಒಂದು ವಾರದ ನಂತರ, ಬಾಂಗ್ಲಾದೇಶವು ಟೆಸ್ಟ್ ಇತಿಹಾಸದಲ್ಲಿ ನಾಲ್ಕನೇ ಸರಣಿ ವೈಟ್‌ವಾಶ್ ಮತ್ತು ಪಾಕಿಸ್ತಾನ ವಿರುದ್ಧ ಮೊಟ್ಟ ಮೊದಲ ಬಾರಿಗೆ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತು. 2022ರ ಪಂದ್ಯದಲ್ಲಿ ಇಂಗ್ಲೆಂಡ್ 3-0 ಅಂತರದಿಂದ ಗೆದ್ದ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ದಾಖಲಿಸಿದ ಎರಡನೇ ತಂಡ ಎಂಬ ದಾಖಲೆಯನ್ನು ಬಾಂಗ್ಲಾದೇಶ ನಿರ್ಮಿಸಿದೆ.