logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರೆಂಜ್ ಕ್ಯಾಪ್ ಗೆದ್ರೆ ಕಪ್‌ ಗೆದ್ದಂತಾಗಲ್ಲ; ವಿರಾಟ್‌ ಟೀಕಿಸಿ ಮತ್ತೆ ನಾಲಗೆ ಹರಿಬಿಟ್ಟ ರಾಯುಡು

ಆರೆಂಜ್ ಕ್ಯಾಪ್ ಗೆದ್ರೆ ಕಪ್‌ ಗೆದ್ದಂತಾಗಲ್ಲ; ವಿರಾಟ್‌ ಟೀಕಿಸಿ ಮತ್ತೆ ನಾಲಗೆ ಹರಿಬಿಟ್ಟ ರಾಯುಡು

Jayaraj HT Kannada

May 27, 2024 01:50 PM IST

google News

ವಿರಾಟ್‌ ಟೀಕಿಸಿ ಮತ್ತೆ ನಾಲಗೆ ಹರಿಬಿಟ್ಟ ರಾಯುಡು

    • ಕೆಕೆಆರ್ ತಂಡವು ಐಪಿಎಲ್‌ ಟ್ರೋಫಿ ಗೆಲ್ಲುತ್ತಿದ್ದಂತೆಯೇ, ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು, ಆರ್‌ಸಿಬಿ ತಂಡವನ್ನು ಟೀಕಿಸಲು ಶುರು ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ತಂಡಕ್ಕೆ ಅಭಿನಂದನೆ ಸಲ್ಲಿಸುವ ಸಮಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ವಿರುದ್ಧ ಹೊಸ ವ್ಯಂಗ್ಯವಾಡಿದ್ದಾರೆ.
ವಿರಾಟ್‌ ಟೀಕಿಸಿ ಮತ್ತೆ ನಾಲಗೆ ಹರಿಬಿಟ್ಟ ರಾಯುಡು
ವಿರಾಟ್‌ ಟೀಕಿಸಿ ಮತ್ತೆ ನಾಲಗೆ ಹರಿಬಿಟ್ಟ ರಾಯುಡು

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇಆಫ್‌ ಕನಸಿಗೆ ಆರ್‌ಸಿಬಿ ತಂಡ ತಣ್ಣೀರೆರಚಿತ್ತು.‌ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲೀಗ್‌ ಹಂತದ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಆರ್‌ಸಿಬಿ ಪ್ಲೇಆಫ್‌ ಹಂತಕ್ಕೆ ಲಗ್ಗೆ ಹಾಕಿತು. ಆ ಮೂಲಕ ಮಾಜಿ ಚಾಂಪಿಯನ್‌ಗಳನ್ನು ಆರ್‌ಸಿಬಿ ಟೂರ್ನಿಯಿಂದಲೇ ಹೊರಹಾಕಿತು. ಅಂದಿನಿಂದ ಸಿಎಸ್‌ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನಾಲಗೆ ಹರಿಬಿಡುತ್ತಲೇ ಇದ್ದಾರೆ. ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋಲನ್ನು ಅರಗಿಸಲಾಗದ ರಾಯುಡು, ಸೋಷಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿ ತಂಡವನ್ನು ಟೀಕಿಸುತ್ತಿದ್ದಾರೆ. ಅಲ್ಲದೆ ಐಪಿಎಲ್‌ ನೇರಪ್ರಸಾರ ಸಮಯದಲ್ಲೂ ಅಪ್ರಬುದ್ಧ ಹೇಳಿಕೆ ನೀಡುತ್ತಾ ಅಣಕಿಸುತ್ತಿದ್ದಾರೆ. ಇದೀಗ ಕೆಕೆಆರ್‌ ತಂಡ ಐಪಿಎಲ್‌ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಮತ್ತೊಮ್ಮೆ ಆರ್‌ಸಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೇ 26ರ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿತು. ಕೇವಲ 10.3 ಓವರ್‌ಗಳಲ್ಲಿ ಚೇಸ್ ಮಾಡಿ ಮುಗಿಸಿದ ಕೆಕೆಆರ್‌ ಮೂರನೇ ಬಾರಿ ಕಪ್‌ ಗೆದ್ದಿತು.

ಕೆಕೆಆರ್‌ ತಂಡದ ಗೆಲುವಿನ ನಂತರ, ಭಾರತದ ಮಾಜಿ ಬ್ಯಾಟರ್‌ ಅಂಬಾಟಿ ರಾಯುಡು, ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ತಂಡವನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಉದ್ದೇಶಪೂರಕವಾಗಿ ವ್ಯಂಗ್ಯವಾಡಿದ್ದಾರೆ.

ಚೆಪಾಕ್‌ನಲ್ಲಿ ನಡೆದ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಮಾತನಾಡಿದ ರಾಯುಡು, ತಂಡದ ಗೆಲುವಿನಲ್ಲಿ ಸಾಂಘಿಕ ಕೊಡುಗೆಯ ಮಹತ್ವವನ್ನು ಎತ್ತಿ ತೋರಿಸಿದರು. ಕಪ್‌ ಗೆಲ್ಲಲು ಆರೆಂಜ್ ಕ್ಯಾಪ್‌ನಂಥ ವೈಯಕ್ತಿಕ ಮೈಲಿಗಲ್ಲುಗಳು ಮುಖ್ಯವಲ್ಲ ಎಂದು ವಿರಾಟ್‌ ಕೊಹ್ಲಿಯನ್ನು ಗುರಿಯಾಗಿಸಿ ಟೀಕಿಸಿದರು.

ಆರೆಂಜ್ ಕ್ಯಾಪ್ ಗೆದ್ದರೆ ಕಪ್‌ ಗೆದ್ದಂತಲ್ಲ

“ನರೈನ್, ರಸೆಲ್ ಮತ್ತು ಸ್ಟಾರ್ಕ್ ಅವರಂಥ ದಿಗ್ಗಜರ ಪರ ನಿಂತಿದ್ದಕ್ಕಾಗಿ ಕೆಕೆಆರ್ ತಂಡಕ್ಕೆ ಅಭಿನಂದನೆಗಳು. ಅವರು ತಮ್ಮ ತಂಡದ ಗೆಲುವಿಗೆ ಕೊಡುಗೆ ನೀಡಿದರು. ತಂಡವೊಂದು ಐಪಿಎಲ್ ಟ್ರೋಫಿ ಗೆಲ್ಲುವುದು ಹೀಗೆ. ನಾವು ಇದನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಆರೆಂಜ್ ಕ್ಯಾಪ್ ಗೆದ್ದರೆ ಐಪಿಎಲ್ ಟ್ರೋಫಿ ಗೆದ್ದಂತೆ ಅಲ್ಲ. ತಂಡದ ಪ್ರತಿಯೊಬ್ಬರೂ ತಲಾ 300 ರನ್‌ಗಳ ಕೊಡುಗೆ ನೀಡಿದರೆ ಮಾತ್ರ ಕಪ್‌ ಗೆಲುವು ಸಾಧ್ಯ” ಎಂದು ರಾಯುಡು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ರಾಯುಡು ಟೀಕೆಯು ನೇರವಾಗಿ ವಿರಾಟ್‌ ಕೊಹ್ಲಿಗೆ ಮಾಡಿದ್ದು ಎಂಬುದು ಖಚಿತವಾಗುತ್ತಿದೆ. ಏಕೆಂದರೆ ಈ ಬಾರಿ ಆರ್‌ಸಿಬಿ ಆಟಗಾರ ವಿರಾಟ್‌ ಕೊಹ್ಲಿ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. 15 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ ಅವರು 61.75ರ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ. 2016ರಲ್ಲಿ 973 ರನ್ ಗಳಿಸುವ ಮೂಲಕ ವಿರಾಟ್‌ ಮೊದಲ ಆರೆಂಜ್‌ ಕ್ಯಾಪ್‌ ಗೆದ್ದಿದ್ದರು.‌

ಕೆಕೆಆರ್‌ ನಾಲ್ವರು ಬ್ಯಾಟರ್‌ಗಳಿಂದ 350ಕ್ಕೂ ಅಧಿಕ ರನ್

ಪ್ರಸಕ್ತ ಆವೃತ್ತಿಯಲ್ಲಿ ಕೋಲ್ಕತಾ ತಂಡದ ನಾಲ್ವರು ಆಟಗಾರರು 350ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರ ಸುನಿಲ್ ನರೈನ್ 15 ಪಂದ್ಯಗಳಲ್ಲಿ 488 ರನ್ ಗಳಿದರೆ, ಫಿಲ್ ಸಾಲ್ಟ್ 435, ವೆಂಕಟೇಶ್ 370, ಹಾಗೂ ನಾಯಕ ಶ್ರೇಯಸ್ 354 ರನ್ ಗಳಿಸಿದ್ದಾರೆ.‌

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ