ಕೆಕೆಆರ್ ಗೆಲುವಿನ ನಂತರ ಗೌತಮ್ ಗಂಭೀರ್ ಹಣೆಗೆ ಮುತ್ತಿಟ್ಟ ಶಾರುಖ್ ಖಾನ್; ಆಟಗಾರರ ತಬ್ಬಿಕೊಂಡು ಸಂಭ್ರಮ -video
ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಎಸ್ಆರ್‌ಎಚ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ನಂತರ, ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಅವರು ಗೌತಮ್ ಗಂಭೀರ್ ಹಣೆಗೆ ಮುತ್ತಿಟ್ಟು ಸಂಭ್ರಮಿಸಿದ್ದಾರೆ. ಅಲ್ಲದೆ ಎಲ್ಲಾ ಆಟಗಾರರನ್ನು ತಬ್ಬಿಕೊಂಡು ಅಭಿನಂದಿಸಿದ್ದಾರೆ.
ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಸುಲಭ ತುತ್ತಾಯಿತು. ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಕೆಕೆಆರ್, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರನೇ ಟ್ರೋಫಿ ಗೆದ್ದಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ ಕೋಲ್ಕತ್ತಾ, ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಸನ್‌ರೈಸರ್ಸ್ ನೀಡಿದ 114 ರನ್‌ಗಳ ಸುಲಭ ಗುರಿಯನ್ನು ಕೇವಲ 10.3 ಓವರ್‌ಗಳಲ್ಲಿ ಬೆನ್ನಟ್ಟಿದ ತಂಡವು, ದಾಖಲೆಯ ಜಯಭೇರಿ ಬಾರಿಸಿತು. ಗೆಲುವಿನ ಬೆನ್ನಲ್ಲೇ ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
2012ರಲ್ಲಿ ಗೌತಮ್ ಗಂಭೀರ್ ಚತುರ ನಾಯಕತ್ವದಲ್ಲಿ ಕೆಕೆಆರ್ ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿತ್ತು. ಕೋಲ್ಕತ್ತಾ ಫ್ರಾಂಚೈಸಿಗೆ ಮೊಟ್ಟಮೊದಲ ಟ್ರೋಫಿ ಗೆದ್ದು ಕೊಟ್ಟ ಹಿರಿಮೆ ಗಂಭೀರ್‌ಗೆ ಸಲ್ಲುತ್ತದೆ. ಅದು ಕೂಡಾ ಇದೇ ಚೆನ್ನೈನಲ್ಲಿ. ಇದೀಗ ಬರೋಬ್ಬರಿ 12 ವರ್ಷಗಳ ನಂತರ ಇದೇ ಚೆಪಾಕ್ ಮೈದಾನದಲ್ಲಿ ಕೆಕೆಆರ್ ಮೂರನೇ ಕಪ್ ಗೆದ್ದಿದೆ. ಈಗಲೂ ತಂಡದ ಜೊತೆಗೆ ಗಂಭೀರ್ ಇದ್ದಾರೆ. ಮೆಂಟರ್ ಆಗಿ ಆಕ್ರಮಣಕಾರಿ ಆಟದ ಸೂತ್ರದೊಂದಿಗೆ ತಂಡವನ್ನು ಮುನ್ನಡೆಸಿದ್ದಾರೆ. ಗಂಭೀರ್ ಅವರ ತೆರೆಮರೆಯ ಕಾರ್ಯತಂತ್ರವು ಕೆಕೆಆರ್ ತಂಡಕ್ಕೆ ಮತ್ತೊಂದು ಐಪಿಎಲ್ ಪ್ರಶಸ್ತಿ ಗೆಲುವಿಗೆ ದಾರಿ ಮಾಡಿಕೊಟ್ಟಿತು ಎಂಬುದು ಅತಿಶಯೋಕ್ತಿ ಅಲ್ಲವೇ ಅಲ್ಲ.
2008ರಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದ ಬಾಲಿವುಡ್ ನಟ ಶಾರುಖ್ ಖಾನ್ ಕೆಕೆಆರ್ ತಂಡದ ಸಹ ಮಾಲೀಕರಾಗಿದ್ದಾರೆ. ಪ್ರತಿ ಬಾರಿಯೂ ತಂಡವನ್ನು ಹುರಿದುಂಬಿಸುವ ಶಾರುಖ್, ಫೈನಲ್‌ನಲ್ಲಿ ತಂಡದ ಗೆಲುವಿನ ನಂತರ ಆಟಗಾರರನ್ನು ತಬ್ಬಿಕೊಂಡು ಸಂಭ್ರಮಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಮೈದಾನಕ್ಕಿಳಿದ ಎಸ್‌ಆರ್‌ಕೆ, ಗಂಭೀರ್ ಅವರೊಂದಿಗೆ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡರು. ತಂಡದ ಫೈನಲ್ ಗೆಲುವಿನಲ್ಲಿ ಗಂಭಿರ್ ಪಾತ್ರ ಏನೆಂಬುದು ಶಾರುಖ್‌ಗೆ ಸ್ಪಷ್ಟವಾಗಿ ಗೊತ್ತಿದೆ. ಹೀಗಾಗಿ ಮೈದಾನದಲ್ಲಿ ಗಂಭೀರ್ ಅವರನ್ನು ತಬ್ಬಿಹಿಡಿದ ಶಾರುಖ್, ಅವರ ಹಣೆಗೆ ಮುತ್ತಿಟ್ಟರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ…
ಗಂಭೀರ್ ಮಾತ್ರವಲ್ಲದೆ ತಂಡದ ಎಲ್ಲಾ ಆಟಗಾರರನ್ನು ಭೇಟಿಯಾದ ಶಾರುಖ್ ಅವರಿಗೆ ವೈಯಕ್ತಿಕವಾಗಿ ಅಭಿನಂದಿಸಿದರು. ರಾಣಾ ಬಳಿ ಬಂದ ಅವರು, ಫ್ಲೈಯಿಂಗ್ ಕಿಸ್ ಸಂಭ್ರಮಾಚರಣೆ ಕುರಿತು ಹೇಳಿದರು. ಟ್ರೋಫಿ ಫೋಟೋಶೂಟ್ ಸಮಯದಲ್ಲಿಯೂ ಫ್ಲೈಯಿಂಗ್ ಕಿಸ್ ಸನ್ನೆ ಮಾಡುವಂತೆ ಎಲ್ಲರಿಗೂ ಹೇಳಿದರು. ಲೀಗ್ ಹಂತದಲ್ಲಿ ಇದೇ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಔಟಾದಾಗ ಫ್ಲೈಯಿಂಗ್ ಕಿಸ್ ಸನ್ನೆ ಮಾಡಿದ್ದ ಹರ್ಷಿತ ದಂಡ ಕಟ್ಟಿದ್ದರು. ಇದೀಗ ಫೈನಲ್ ಗೆದ್ದ ಬಳಿಕ ಆ ಸನ್ನೆಯನ್ನು ಎಸ್‌ಆರ್‌ಕೆ ನೆನಪಿಸಿದ್ದಾರೆ.
ಗಂಭೀರ್‌ಗೆ ಬಿಸಿಸಿಐ ಆಫರ್
ಕಳೆದ ವರ್ಷ ಎಲ್‌ಎಸ್‌ಜಿ ಮೆಂಟರ್ ಆಗಿದ್ದ ಗೌತಮ್ ಗಂಭೀರ್, ಈ ವರ್ಷವಷ್ಟೇ ಕೆಕೆಆರ್ ತಂಡಕ್ಕೆ ಮರಳಿದ್ದರು. ಈ ನಡುವೆ ಅವರನ್ನು ಬಿಸಿಸಿಐ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸುವ ಚಿಂತನೆಯಲ್ಲಿದೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಬಳಿಕ, ರಾಹುಲ್ ದ್ರಾವಿಡ್ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ನಂತರ ಅವರ ಸ್ಥಾನವನ್ನು ತುಂಬಲು ಗಂಭೀರ್ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಆದರೆ, ಈ ಆಫರ್‌ಗೆ ಗೌತಿ ಒಪ್ಪಿದ್ದಾರಾ ಎಂಬ ಕುರಿತು ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)