ಐಪಿಎಲ್ ಸಕ್ಸಸ್; ಎಲ್ಲಾ ಮೈದಾನಗಳ ಸಿಬ್ಬಂದಿ ಹಾಗೂ ಕ್ಯುರೇಟರ್‌ಗಳಿಗೆ ಭರ್ಜರಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ
ಐಪಿಎಲ್ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸುವಲ್ಲಿ ತೆರೆಮರೆಯಲ್ಲಿ ಸತತ ಶ್ರಮ ಹಾಕಿದವರು ಮೈದಾನದ ಸಿಬ್ಬಂದಿ. ಮಳೆ ಬಂದಾಗ ಪಿಚ್ ನೆನೆಯದಂತೆ ಹಾಗೂ ಆಟವು ಸುಸೂತ್ರವಾಗಿ ನಡೆಯುವಂತೆ ಪಿಚ್ ರೂಪಿಸಿದ ಮೈದಾನಗಳ ಕ್ಯುರೇಟರ್‌ಗಳು ಹಾಗೂ ಸಿಬ್ಬಂದಿಗೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.
ಐಪಿಎಲ್ 2024ರ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಕೆಕೆಆರ್ ತಂಡ ನೂತನ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಂದ್ಯಾವಳಿಯು ಯಶಸ್ವಿಯಾಗಿ ನಡೆಯುವಲ್ಲಿ ದೇಶದ ವಿವಿಧ ಕ್ರೀಡಾಂಗಣಗಳು ನಿರ್ಣಾಯಕ ಪಾತ್ರ ವಹಿಸಿವೆ. ಪಂದ್ಯ ಆಸಕ್ತಿದಾಯಕವಾಗಿ ನಡೆಯಬೇಕಾದರೆ ಪಿಚ್ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಪಿಚ್ ಒದ್ದೆಯಾಗದಂತೆ ಜವಾಬ್ದಾರಿಯುತ ಕೆಲಸ ನಿರ್ವಹಿಸಬೇಕಾಗುತ್ತದೆ. ಈ ಕೆಲಸ ಈ ಬಾರಿಯ ಆವೃತ್ತಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಹೀಗಾಗಿ ಐಪಿಎಲ್ ಪಂದ್ಯಗಳಿಗಾಗಿ ಅದ್ಭುತ ಪಿಚ್ ಒದಗಿಸಿದ ಎಲ್ಲಾ ಗ್ರೌಂಡ್‌ಮೆನ್ ಹಾಗೂ ಕ್ಯುರೇಟರ್‌ಗಳಿಗೆ ಬಿಸಿಸಿಐ ಗೌರವಧನ ಘೋಷಿಸಿದೆ.
ಐಪಿಎಲ್‌ನಲ್ಲಿ ಭಾಗಿಯಾದ ಎಲ್ಲಾ 10 ತಂಡಗಳು ತನ್ನದೇ ತವರಿನ ಆತಿಥೇಯ ಮೈದಾನಗಳಲ್ಲಿ ಆಡಿವೆ. ಟೂರ್ನಿ ಆಯೋಜಿಸಿದ ಈ ಎಲ್ಲಾ 10 ನಿಯಮಿತ ಮೈದಾನಗಳ ಸಿಬ್ಬಂದಿ ಹಾಗೂ ಕ್ಯುರೇಟರ್‌ಗಳಿಗೆ ತಲಾ 25 ಲಕ್ಷ ರೂಪಾಯಿ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೋಮವಾರ ಪ್ರಕಟಿಸಿದ್ದಾರೆ.
ಐಪಿಎಲ್ ಪಂದ್ಯಾವಳಿಗೆ ಮೇ 26ರ ಭಾನುವಾರ ತೆರೆ ಬಿತ್ತು. ಚೆನ್ನೈನಲ್ಲಿ ಮುಕ್ತಾಯಗೊಂಡ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಒಟ್ಟಾರೆಯಾಗಿ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು. ಪಂದ್ಯಾವಳಿ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ಈ ವಿಶೇಷ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ | IPL 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್-ಆರ್‌ಸಿಬಿ ದಾಂಡಿಗರು
“ಐಪಿಎಲ್ ಟೂರ್ನಿಯು ಯಶಸ್ವಿಯಾಗುವಲ್ಲಿ, ಈ ಅಪ್ರತಿಮ ಹೀರೋಗಳು ನಿರ್ಣಾಯಕ ಪಾತ್ರ ವಹಿಸಿದರು. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅದ್ಭುತ ಪಿಚ್ ಒದಗಿಸಲು ದಣಿವರಿಯದೆ ಕೆಲಸ ಮಾಡಿದರು” ಎಂದು ಜಯ್ ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಮೈದಾನದ ಸಿಬ್ಬಂದಿಯ ಕೆಲಸಕ್ಕೆ ಮೆಚ್ಚುಗೆಯ ಸಂಕೇತವಾಗಿ, 10 ನಿಯಮಿತ ಐಪಿಎಲ್ ಮೈದಾನಗಳ ಸಿಬ್ಬಂದಿ ಹಾಗೂ ಕ್ಯುರೇಟರ್‌ಗಳಿಗೆ ತಲಾ 25 ಲಕ್ಷ ರೂ, ಹಾಗೂ 3 ಹೆಚ್ಚುವರಿ ಮೈದಾನಗಳಿಗೆ ತಲಾ 10 ಲಕ್ಷ ರೂಪಾಯಿಯಂತೆ ನೀಡಲಾಗುತ್ತಿದೆ. ನಿಮ್ಮ ಸಮರ್ಪಣಾ ಭಾವ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.
ಯಾವೆಲ್ಲಾ ಮೈದಾನಗಳು ಪಂದ್ಯ ಆಯೋಜಿಸಿವೆ
ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಚಂಡೀಗಢ, ಹೈದರಾಬಾದ್, ಬೆಂಗಳೂರು, ಲಕ್ನೋ, ಅಹಮದಾಬಾದ್ ಮತ್ತು ಜೈಪುರ ಸ್ಟೇಡಿಯಂ ಐಪಿಎಲ್ ಪಂದ್ಯಗಳನ್ನು ಆಯೋಜಿಸಿದ ನಿಯಮಿತ ಮೈದಾನಗಳಾಗಿವೆ. ಹೆಚ್ಚುವರಿಯಾಗಿ ಗುವಾಹಟಿ, ವಿಶಾಖಪಟ್ಟಣ ಮತ್ತು ಧರ್ಮಶಾಲಾ ಮೈದಾನಗಳು ಕೂಡಾ ಪಂದ್ಯಗಳನ್ನು ಆಯೋಜಿಸಿವೆ. ರಾಜಸ್ಥಾನ್ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಎರಡನೇ ತವರಾಗಿ ಆಡಿದರೆ, ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಎರಡು ಪಂದ್ಯಗಳಲ್ಲಿ ಆತಿಥ್ಯ ವಹಿಸಿತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಧರ್ಮಶಾಲಾದಲ್ಲಿ ಆಡಿತ್ತು.
ಇದನ್ನೂ ಓದಿ | ಕೆಕೆಆರ್ ಗೆಲುವಿನ ನಂತರ ಗೌತಮ್ ಗಂಭೀರ್ ಹಣೆಗೆ ಮುತ್ತಿಟ್ಟ ಶಾರುಖ್ ಖಾನ್; ಆಟಗಾರರ ತಬ್ಬಿಕೊಂಡು ಸಂಭ್ರಮ -video
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)