ಸ್ಮೃತಿ ಮಂಧಾನ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ತುಟಿಬಿಚ್ಚಿದ ಗೆಳೆಯ ಪಲಾಶ್ ಮುಚ್ಚಲ್; ಮದುವೆ ಯಾವಾಗ?
Nov 30, 2024 08:19 AM IST
ಸ್ಮೃತಿ ಮಂಧಾನ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ತುಟಿಬಿಚ್ಚಿದ ಬಾಯ್ಫ್ರೆಂಡ್ ಪಲಾಶ್ ಮುಚ್ಚಲ್
Palaash Muchhal: ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್ ಅವರು ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಜೊತೆಗಿನ ರಿಲೇಷನ್ಶಿಪ್ ಕುರಿತು ಇದೇ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರೊಂದಿಗೆ ರಿಲೇಷನ್ಶಿಪ್ನಲ್ಲಿರುವ ಕುರಿತು ಇದೇ ಮೊದಲ ಬಾರಿಗೆ ಬಾಲಿವುಡ್ ಸಂಗೀತ ಸಂಯೋಜಕ-ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ (Palaash Muchhal) ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಸೆಲೆಬ್ರಿಟಿ ಜೋಡಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವು ವರ್ಷಗಳಿಂದ ಹರಿದಾಡುತ್ತಿದ್ದವು. ಮಹಿಳಾ ಪ್ರೀಮಿಯರ್ ಲೀಗ್ ಅವಧಿಯಲ್ಲಿ ಪಲಾಶ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕಿ ಮಂಧಾನ ಅವರನ್ನು ಭೇಟಿಯಾಗಿದ್ದ ಚಿತ್ರಗಳು ಸಹ ಹರಿದಾಡಿದ್ದವು. ಆದರೆ ಇದೇ ಜುಲೈನಲ್ಲಿ ಈ ಜೋಡಿ,5ನೇ ಪ್ರೇಮ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಅಧಿಕೃತಗೊಳಿಸಿತು. ಆ ಮೂಲಕ ಈ ಹಿಂದಿನ ವದಂತಿಗಳು ನಿಜವೆಂದು ಸಾಬೀತಾದವು.
ಪಲಾಶ್ ಮತ್ತು ಸ್ಮೃತಿ ಯಾವತ್ತೂ ಸಾರ್ವಜನಿಕವಾಗಿ ತಮ್ಮ ಸಂಬಂಧದ ಕುರಿತು ಮಾತನಾಡಿದವರಲ್ಲ. ಆದರೆ ಇದೇ ಮೊದಲ ಬಾರಿಗೆ ಪಲಾಶ್, ಸ್ಮೃತಿ ಜೊತೆಗಿನ ರಿಲೇಷನ್ಶಿಪ್ ಕುರಿತು ತುಟಿಬಿಚ್ಚಿದ್ದಾರೆ. ತಮ್ಮ ಸಂಬಂಧವನ್ನು ಸಾರ್ವಜನಿಕರ ದೃಷ್ಟಿಯಿಂದ ದೂರವಿಡುವ ಬಗ್ಗೆ ಮಾತನಾಡಿದ ಅವರು, 'ನಾನು ಸಾರ್ವಜನಿಕವಾಗಿ ತುಂಬಾ ನಾಚಿಕೆಪಡುತ್ತೇನೆ. ನಾನು ತುಂಬಾ ಅಂತರ್ಮುಖಿ. ಆದರೆ ಇದನ್ನು ಯಾರೂ ನಂಬುವುದಿಲ್ಲ. ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಫೋಟೋಗೆ ಪೋಸ್ ನೀಡಿದ ವೇಳೆಯೆಲ್ಲಾ ನನಗೆ ತುಂಬಾ ನಾಚಿಕೆಯಾಗುತ್ತದೆ. ಆದರೆ ಸ್ಮೃತಿಯನ್ನು ತುಂಬಾ ರೇಗಿಸುತ್ತೇನೆ. ಆಗ ನನಗೆ ಭಯವಾಗುವುದಿಲ್ಲ. ಆಕೆಯ ಬಾಯ್ಫ್ರೆಂಡ್ ಆಗಿರುವುದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಸ್ಮೃತಿ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಆದರೆ ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ನಾನು ಇಷ್ಟಪಡುತ್ತೇನೆ. ನಾನು ಸಾಧ್ಯವಾದಷ್ಟು ಕೆಲಸ ಮಾಡಬೇಕಾದ ಸಮಯ ಇದು ಎಂದಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಮದುವೆ ಯಾವಾಗ?
ಆದರೆ, ಈ ವರ್ಷ ಅವರ ವೈಯಕ್ತಿಕ ಜೀವನವು ಸಾರ್ವಜನಿಕಗೊಂಡಿದ್ದು ಹೇಗೆ ಎಂದೇ ನನಗೆ ಗೊತ್ತಾಗಿಲ್ಲ. ಇದು ನನಗೆ ತುಂಬಾ ಅಹಿತಕರ ಪರಿಸ್ಥಿತಿಯಾಗಿತ್ತು. ಏಕೆಂದರೆ ಡಬ್ಲ್ಯುಪಿಎಲ್ ಪಂದ್ಯ ನೋಡಲು ಹೋಗಿದ್ದ ಸಮಯದಲ್ಲಿ ನಾನು ಮೈದಾನದಲ್ಲಿ ಸ್ಮೃತಿ ಭೇಟಿಯಾದಾಗ ನಾನು ಕ್ಯಾಮೆರಾ ಕಣ್ಣು ನನ್ನನ್ನು ನೋಡಿದ್ದು ಗೊತ್ತಾಗಲಿಲ್ಲ. ನನಗೆ ಅದರ ಅರಿವೂ ಇರಲಿಲ್ಲ. ಒಂದು ವೇಳೆ ಅರಿತಿದ್ದರೆ ನಾನು ಆಕೆಯನ್ನು ಭೇಟಿ ಮಾಡುತ್ತಿರಲಿಲ್ಲ. ಆಗ ಅದು ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ನಾನು ಸಂಗೀತ ಪ್ರದರ್ಶನ ನೀಡುವ ವೇದಿಕೆಗಳಲ್ಲೂ ಜನರು ಆರ್ಸಿಬಿ… ಆರ್ಸಿಬಿ… ಎಂದು ಕೂಗುತ್ತಲೇ ಇರುತ್ತಾರೆ ಎಂದು ಪಲಾಶ್ ಹೇಳಿದ್ದಾರೆ. ಐದು ವರ್ಷಗಳಿಂದ ಪ್ರೀತಿಯಲ್ಲಿ ಇರುವ ಈ ಜೋಡಿ ಹಕ್ಕಿಗಳು ಯಾವಾಗ ಮದುವೆಯಾಗುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸ್ಮೃತಿ ಮಂಧಾನ ಕ್ರಿಕೆಟ್ ಜೀವನ ಪೂರ್ಣಗೊಳಿಸಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ ಸ್ಮೃತಿ ಮಂಧಾನ
ಮಹಿಳಾ ಬಿಗ್ಬ್ಯಾಷ್ ಲೀಗ್ನಲ್ಲಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಅವರು, ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಿದ್ದಾರೆ. ಡಿಸೆಂಬರ್ 5ರಿಂದ ಆಸೀಸ್ ಎದುರು 3 ಪಂದ್ಯಗಳ ಸರಣಿಯನ್ನು ಭಾರತ ತಂಡ ಆಡಲಿದೆ. ಈ ಸರಣಿಯಲ್ಲಿ ಹರ್ಮನ್ ಪ್ರೀತ್ಕೌರ್ ನಾಯಕಿಯಾಗಿದ್ದರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಡಿಸೆಂಬರ್ 5 ಮತ್ತು ಡಿಸೆಂಬರ್ 8ರಂದು ನಡೆಯುವ ಪಂದ್ಯಗಳು ಬ್ರಿಸ್ಬೇನ್ನಲ್ಲಿ ನಡೆಯಲಿವೆ. ಮೂರನೇ ಪಂದ್ಯ ಡಿಸೆಂಬರ್ 11ರಂದು ಪರ್ತ್ನಲ್ಲಿ ಜರುಗಲಿದೆ.