ಪಾಕಿಸ್ತಾನದಲ್ಲಿ ಆಡಲು ಭಾರತ ಸರ್ಕಾರದ ಅನುಮತಿ ಇಲ್ಲವಾದರೆ ಲಿಖಿತ ಪುರಾವೆ ನೀಡಿ: ಬಿಸಿಸಿಐಗೆ ಪಿಸಿಬಿ ಖಡಕ್ ಸಂದೇಶ
Jul 15, 2024 05:27 PM IST
ಪಾಕಿಸ್ತಾನದಲ್ಲಿ ಆಡಲು ಭಾರತ ಸರ್ಕಾರದ ಅನುಮತಿ ಇಲ್ಲವಾದರೆ ಲಿಖಿತ ಪುರಾವೆ ನೀಡಿ: ಬಿಸಿಸಿಐಗೆ ಪಿಸಿಬಿ ಖಡಕ್ ಸಂದೇಶ
- ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲು ಪಾಕಿಸ್ತಾನ ಸಜ್ಜಾಗಿದೆ. ಆದರೆ, ಭಾರತ ಕ್ರಿಕೆಟ್ ತಂಡ ತನ್ನ ದೇಶಕ್ಕೆ ಬರುತ್ತೋ, ಇಲ್ವೋ ಎಂಬುದು ಪಿಸಿಬಿಗೆ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಭಾರತ ಸರ್ಕಾರದಿಂದ ಲಿಖಿತ ಪುರಾವೆಗಾಗಿ ಪಿಸಿಬಿ ಬೇಡಿಕೆ ಇಟ್ಟಿದೆ.
ಮುಂದಿನ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (Icc Champions Trophy) ಆಡಲು, ಭಾರತ ಕ್ರಿಕೆಟ್ ತಂಡವು ಪಾಕ್‌ಗೆ ತೆರಳುವ ಸಾಧ್ಯತೆ ತೀರಾ ಕಡಿಮೆ ಇದೆ. ಈಗಾಗಲೇ ಈ ಕುರಿತು ಪಿಸಿಬಿಗೆ ಸುಳಿವು ಸಿಕ್ಕಿದೆ. ತನ್ನ ನೆಲದಲ್ಲಿ ಟೂರ್ನಿಯನ್ನು ಆಯೋಜಿಸುತ್ತಿರುವ ಪಾಕಿಸ್ತಾನವು, ಆತಿಥ್ಯದ ರೂಪುರೇಷೆಗಳನ್ನು ಅಂತಿಮಗೊಳಿಸುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ ಸ್ಪಷ್ಟತೆ ಬಯಸಿದೆ. ಹೀಗಾಗಿ ಭಾರತ ತಂಡವು ಪಾಕ್‌ಗೆ ಪ್ರಯಾಣಿಸುವುದಿಲ್ಲ ಎಂಬುದಾಗಿ ಬಿಸಿಸಿಐ ಭಾರತ ಸರ್ಕಾರದ ಲಿಖಿತ ಹೇಳಿಕೆ ಕೊಡಬೇಕೆಂದು ಪಿಸಿಬಿ ಬಯಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ಊಹಾಪೋಹಗಳು ಎಲ್ಲೆಡೆ ಹರಡಿವೆ. ಹೀಗಾಗಿ ಕಳೆದ ಬಾರಿಯ ಏಷ್ಯಾಕಪ್ ಟೂರ್ನಿ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜಾರಿಗೆ ತಂದ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲು ಐಸಿಸಿಗೆ ಬಿಸಿಸಿಐ ಒತ್ತಾಯಿಸುತ್ತಿದೆ ಎಂದು ಹೇಳಲಾಗಿದೆ. ಪಿಸಿಬಿ ಮೂಲಗಳ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಸಲುವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ದಕ್ಕೆ ಲಿಖಿತ ಪುರಾವೆಗಳನ್ನು ನೀಡುವಂತೆ ತಿಳಿಸಿದೆ.
ಜುಲೈ 19ರಂದು ಐಸಿಸಿ ತನ್ನ ವಾರ್ಷಿಕ ಸಮ್ಮೇಳನವನ್ನು ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ನಡೆಸಲಿದೆ. ಆದರೆ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು 'ಹೈಬ್ರಿಡ್ ಮಾದರಿ'ಯಲ್ಲಿ ನಡೆಸುವ ಕುರಿತು ಇಲ್ಲಿ ಚರ್ಚೆ ನಡೆಸುವುದಿಲ್ಲ.
“ಪಾಕಿಸ್ತಾನಕ್ಕೆ ಬರಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದರೆ, ಅದು ಲಿಖಿತವಾಗಿರಬೇಕು. ಆ ಪತ್ರವನ್ನು ಬಿಸಿಸಿಐ ಈಗ ಐಸಿಸಿಗೆ ಒದಗಿಸುವುದು ಕಡ್ಡಾಯ” ಎಂದು ಪಿಸಿಬಿ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ. “ಪಂದ್ಯಾವಳಿಗೆ ಕನಿಷ್ಠ 5-6 ತಿಂಗಳ ಮೊದಲು ಹಾಗೂ ಲಿಖಿತ ರೂಪದಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸುವ ಯೋಜನೆಗಳ ಬಗ್ಗೆ ಬಿಸಿಸಿಐ ಐಸಿಸಿಗೆ ತಿಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಪಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.
ಪಾಕಿಸ್ತಾನಕ್ಕೆ ಹೋಗದಿರುವ ನಿರ್ಧಾರವು ಸಂಪೂರ್ಣವಾಗಿ ಭಾರತ ಸರ್ಕಾರದ ನಿರ್ಧಾರ ಎಂಬುದಾಗಿ ಬಿಸಿಸಿಐ ದೃಢವಾದ ನಿಲುವು ತೋರಿಸಿದೆ. ಕಳೆದ ವರ್ಷ, ಭಾರತವು ಏಷ್ಯಾಕಪ್‌ನಲ್ಲಿ ಭಾಗವಹಿಸಲು ಕೂಡಾ ನೆರೆಯ ರಾಷ್ಟ್ರಕ್ಕೆ ಪ್ರಯಾಣ ನಿರಾಕರಿಸಿತ್ತು. ಹೀಗಾಗಿ ಫೈನಲ್ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು.
ಕರಡು ವೇಳಾಪಟ್ಟಿ ಐಸಿಸಿಗೆ ಸಲ್ಲಿಕೆ
ಏತನ್ಮಧ್ಯೆ ಭಾರತದ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಿಸಿಬಿ ಈಗಾಗಲೇ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ವೇಳಾಪಟ್ಟಿ ಪ್ರಕಾರ, ಭಾರತದ ಪಂದ್ಯಗಳು ಸೇರಿದಂತೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಕೂಡಾ ಲಾಹೋರ್‌ನಲ್ಲಿ ನಡೆಯಲಿದೆ. ಮಾರ್ಚ್ 1ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಗದಿಯಾಗಿದೆ. ಫೆಬ್ರವರಿ 19ರಂದು ಕರಾಚಿಯಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಮಾರ್ಚ್ 9ರಂದು ಲಾಹೋರ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪ್ರತಿಕೂಲ ಹವಾಮಾನದಿಂದ ಪಂದ್ಯ ರದ್ದಾದರೆ ಮಾರ್ಚ್ 10ರಂದು ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ.
ಭಾರತ ಮತ್ತು ಪಾಕ್ ನಡುವಿನ ರಾಜಕೀಯ ಸಂಬಂಧ ಹಲವು ವರ್ಷಗಳಿಂದ ಹದಗೆಟ್ಟಿದೆ. ಹೀಗಾಗಿ ಉಭಯ ತಂಡಗಳ ನಡುವೆ ಐಸಿಸಿ ಪಂದ್ಯಗಳ ಹೊರತಾಗಿ ದ್ವಿಪಕ್ಷೀಯ ಸರಣಿ ನಡೆಯದೇ ದಶಕವೇ ಕಳೆದಿದೆ. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡಲು ಪಾಕ್ ತಂಡ ದಶಕದ ಬಳಿಕ ಭಾರತದ ನೆಲಕ್ಕೆ ಆಗಮಿಸಿತ್ತು. ಆದರೆ, ಭಾರತ ಮಾತ್ರ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇದ್ದಂತಿಲ್ಲ.
ಭಾರತ ಕ್ರಿಕೆಟ್ ತಂಡದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಭಾರತ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಕ್ಯಾನ್ಸರ್ ಚಿಕಿತ್ಸೆಗೆ ಬಿಸಿಸಿಐನಿಂದ 1 ಕೋಟಿ ರೂ ನೆರವು