ಮಾಜಿ ಕ್ರಿಕೆಟಿಗನಿಗೆ ಬ್ಲಡ್ ಕ್ಯಾನ್ಸರ್; ಚಿಕಿತ್ಸೆಗೆ ಸಂಪೂರ್ಣ ನೆರವಿನ ಭರವಸೆ ನೀಡಿದ ಬಿಸಿಸಿಐ
ರಕ್ತದ ಕ್ಯಾನ್ಸರ್‌ಗೆ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರಿಗೆ ಬಿಸಿಸಿಐ ನೆರವಾಗಿದೆ. ಮಾಜಿ ಸಹ ಆಟಗಾರರಾದ ಕಪಿಲ್ ದೇವ್ ಮತ್ತು ಸಂದೀಪ್ ಪಾಟೀಲ್ ಅವರ ಮನವಿಯ ಬೆನ್ನಲ್ಲೇ, ಗಾಯಕ್ವಾಡ್ ಚಿಕಿತ್ಸೆಗೆ ಬಿಸಿಸಿಐ ನೆರವಾಗಿದೆ.
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರು, ಪ್ರಸ್ತುತ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಗಾಯಕ್ವಾಡ್ ಅವರ ಮಾಜಿ ಸಹ ಆಟಗಾರರಾದ ಕಪಿಲ್ ದೇವ್ ಮತ್ತು ಸಂದೀಪ್ ಪಾಟೀಲ್ ಅವರ ಭಾವನಾತ್ಮಕ ಮನವಿಯ ಕೆಲವೇ ದಿನಗಳಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಭಾನುವಾರ ಸ್ಪಷ್ಟಪಡಿಸಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಡಿಕೆ ಗಾಯಕ್ವಾಡ್ ಅವರ ಪುತ್ರ ಅಂಶುಮಾನ್ ಗಾಯಕ್ವಾಡ್ ಅವರು ಪ್ರಸ್ತುತ ಲಂಡನ್ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂದೀಪ್ ಪಾಟೀಲ್ ಈ ತಿಂಗಳ ಆರಂಭದಲ್ಲಿ ಬಹಿರಂಗಪಡಿಸಿದ್ದರು. ಗಾಯಕ್ವಾಡ್ ಸ್ವತಃ ಆರ್ಥಿಕ ನೆರವಿನ ಅಗತ್ಯದ ಬಗ್ಗೆ ಹೇಳಿದ್ದರು ಎಂದು ಪಾಟೀಲ್ ಹೇಳಿದ್ದರು.
ಹೀಗಾಗಿ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡಾ ಬಿಸಿಸಿಐಗೆ ಆರ್ಥಿಕ ಸಹಾಯಕ್ಕಾಗಿ ಒತ್ತಾಯಿಸಿದರು. ಇದೇ ವೇಳೆ ಇತರ ಮಾಜಿ ಕ್ರಿಕೆಟಿಗರಾದ ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್‌ಸರ್ಕಾರ್, ಮದನ್ ಲಾಲ್, ರವಿ ಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅವರ ಸಹಾಯದಿಂದ ಹಣ ಹೊಂದಿಸಲು ನೋಡುತ್ತಿರುವುದಾಗಿ ಕಪಿಲ್ ದೇವ್ ಹೇಳಿದ್ದರು.
ಬಿಸಿಸಿಐ ಹೇಳಿಕೆ
“ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಭಾರತದ ಹಿರಿಯ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರಿಗೆ ಆರ್ಥಿಕ ನೆರವು ನೀಡಲು ತಕ್ಷಣದಿಂದ ಜಾರಿಗೆ ಬರುವಂತೆ 1 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಜಯ್ ಶಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಕ್ವಾಡ್ ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಅಗತ್ಯ ನೆರವನ್ನು ಹೆಚ್ಚಿಸುವ ಸಲುವಾಗಿ ಜಯ್ ಶಾ ಅವರು ಈಗಾಗಲೇ ಗಾಯಕ್ವಾಡ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಮಂಡಳಿಯು ಗಾಯಕ್ವಾಡ್ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಗಾಯಕ್ವಾಡ್ ಅವರ ತ್ವರಿತ ಚೇತರಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತದೆ. ಅಲ್ಲದೆ ಗಾಯಕ್ವಾಡ್ ಅವರ ಆರೋಗ್ಯದ ಪ್ರಗತಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ, ಎಂದು ಮಂಡಳಿಯ ಹೇಳಿಕೆ ತಿಳಿಸಿದೆ.
ಗಾಯಕ್ವಾಡ್ ಅವರಿಗೆ ಸದ್ಯ 71 ವರ್ಷ ವಯಸ್ಸು. ಇವರು 1975ರಿಂದ 1987ರವರೆಗೆ ಭಾರತ ತಂಡದ ಪರ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಸುದೀರ್ಘ ಸ್ವರೂಪದಲ್ಲಿ ಎರಡು ಶತಕ ಹಾಗೂ 10 ಅರ್ಧಶತಕಗಳ ಸಹಿತ 1985 ರನ್ ಗಳಿಸಿದ್ದಾರೆ. ಏಕದಿನ ಸ್ವರೂಪದಲ್ಲಿ 269 ರನ್ ಗಳಿಸಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಜಿಂಬಾಬ್ವೆ ವಿರುದ್ಧ ಕೊನೆಯ ಟಿ20ಐ ಪಂದ್ಯದಲ್ಲೂ ಗೆದ್ದ ಭಾರತ ತಂಡ; 4-1ರಲ್ಲಿ ಸರಣಿ ವಶಪಡಿಸಿಕೊಂಡ ಗಿಲ್ ಪಡೆ