ಪೃಥ್ವಿ ಶಾಗೆ ತಾನೇ ಸ್ವಂತ ಶತ್ರು, ರಾತ್ರಿಯಿಡೀ ತಿರುಗಾಡಿ, ಬೆಳಿಗ್ಗೆ 6 ಗಂಟೆಗೆ ರೂಮ್ಗೆ ಬರ್ತಿದ್ದ; ಎಂಸಿಎ
Dec 21, 2024 06:50 AM IST
ಪೃಥ್ವಿ ಶಾಗೆ ತಾನೇ ಸ್ವಂತ ಶತ್ರು, ರಾತ್ರಿಯಿಡೀ ತಿರುಗಾಡಿ, ಬೆಳಿಗ್ಗೆ 6 ಗಂಟೆಗೆ ರೂಮ್ಗೆ ಬರ್ತಿದ್ದ; ಎಂಸಿಎ
- Mumbai Squad: ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡದಿಂದ ಪೃಥ್ವಿ ಶಾ ಅವರನ್ನು ಹೊರಗಿಟ್ಟಿರುವ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸ್ಪಷ್ಟನೆ ನೀಡಿದೆ.
ಮುಂಬೈ: ಡಿಸೆಂಬರ್ 21ರಿಂದ ಶುರುವಾಗುವ ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡವು ಪ್ರಕಟಗೊಂಡಿದೆ. ಆದರೆ ತಂಡದಿಂದ ಪೃಥ್ವಿ ಶಾ ಅವರನ್ನು ಕೈಬಿಡಲಾಗಿದೆ. ಪೃಥ್ವಿಯನ್ನು ಹೊರಗಿಟ್ಟಿರುವ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಗುರುವಾರ ಸ್ಪಷ್ಟನೆ ನೀಡಿದೆ. ಕಳಪೆ ಫಿಟ್ನೆಸ್, ವರ್ತನೆ ಮತ್ತು ಅಶಿಸ್ತಿನ ಕುರಿತು ಅನೇಕ ಬಾರಿ ಸೂಚಿಸಿದರೂ ಮಾತು ಕೇಳದ್ದಕ್ಕೆ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಎಂಸಿಎ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಗೆ ಪ್ರಕಟಗೊಂಡ 16 ಸದಸ್ಯರ ಮುಂಬೈ ತಂಡದಲ್ಲಿ ಸ್ಥಾನ ಪಡೆಯದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದ ಪೃಥ್ವಿ ಶಾ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮುಂಬೈ ತಂಡದ ಭಾಗವಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾವು 10 ಫೀಲ್ಡರ್ಗಳೊಂದಿಗೆ ಆಡುತ್ತಿದ್ದೆವು, ಏಕೆಂದರೆ ಪೃಥ್ವಿ ಶಾ ಬಳಿ ಚೆಂಡು ಹೋದರೂ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾಟಿಂಗ್ ಮಾಡುವಾಗಲೂ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು ಎಂದು ಹೇಳಿದ್ದಾರೆ.
‘ಬೆಳಿಗ್ಗೆ 6 ಗಂಟೆಗೆ ರೂಮ್ಗೆ ಬರ್ತಿದ್ರು’
ಅವರ ಫಿಟ್ನೆಸ್, ಶಿಸ್ತು ಮತ್ತು ವರ್ತನೆ ಕಳಪೆಯಾಗಿದೆ. ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು ಇರಲು ಸಾಧ್ಯವಿಲ್ಲ. ತಂಡದ ಹಿರಿಯ ಆಟಗಾರರು ಸಹ ಅವರ ವರ್ತನೆಯ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ಸೈಯದ್ ಮುಷ್ತಾಕ್ ಅಲಿ ವೇಳೆ ಪೃಥ್ವಿ ಶಾ ನಿಯಮಿತವಾಗಿ ಅಭ್ಯಾಸ ಅವಧಿಗಳಿಗೆ ಗೈರುಹಾಜರಾಗಿದ್ದರು. ರಾತ್ರಿಯಿಡೀ ಹೊರಗೆ ತಿರುಗಾಡಿ ಬರುತ್ತಾರೆ. ನಂತರ ಬೆಳಿಗ್ಗೆ 6 ಗಂಟೆಗೆ ತಂಡದ ಹೋಟೆಲ್ ತಲುಪುತ್ತಿದ್ದರು. ಮೈದಾನದ ಹೊರಗೆ ತನ್ನ ವರ್ತನೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದರು.
ಪೃಥ್ವಿ ಶಾ ತನ್ನ ಪ್ರತಿಭೆಗೆ ನ್ಯಾಯ ಒದಗಿಸುತ್ತಿಲ್ಲ. ಅಂತಹ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಅವರಿಗೆ ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಯಾರೂ ಆತನಿಗೆ ಶತ್ರುಗಳಿಲ್ಲ. ಆತನಿಗೆ ಆತನೇ ಶತ್ರು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ನಲ್ಲಿ ಇದೇ ಕಾರಣಕ್ಕಾಗಿ ಶಾ ಅವರನ್ನು ಮುಂಬೈ ರಣಜಿ ಟ್ರೋಫಿ ತಂಡದಿಂದ ಕೈಬಿಡಲಾಗಿತ್ತು.
ಪೃಥ್ವಿ ಶಾ ಮಾಡಿದ್ದ ಪೋಸ್ಟ್ನಲ್ಲಿ ಏನಿತ್ತು?
ಹೇಳು ದೇವರೇ, ನಾನು ಇನ್ನೂ ಏನೇನು ನೋಡಬೇಕು. 65 ಇನ್ನಿಂಗ್ಸ್‌ಗಳು, 55.7ರ ಬ್ಯಾಟಿಂಗ್ ಸರಾಸರಿಯಲ್ಲಿ 3399 ರನ್ ಗಳಿಸಿದ್ದೇನೆ. 126 ಸ್ಟ್ರೈಕ್ ರೇಟ್‌ನೊಂದಿಗೆ ನಾನು ಸಾಕಷ್ಟು ಉತ್ತಮವಾಗಿಲ್ಲ. ಆದರೆ, ನಾನು ನಿಮ್ಮ ಮೇಲೆ ನನ್ನ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಜನರು ಇನ್ನೂ ನನ್ನನ್ನು ನಂಬುತ್ತಾರೆ ಎಂದು ಆಶಿಸುತ್ತೇವೆ. ಏಕೆಂದರೆ ನಾನು ಖಚಿತವಾಗಿ ಹಿಂತಿರುಗುತ್ತೇನೆ. ಓಂ ಸಾಯಿ ರಾಮ್ ಎಂದು ತಂಡದಿಂದ ಕೈಬಿಟ್ಟ ಬಳಿಕ ಈ ಪೋಸ್ಟ್ ಹಾಕಿದ್ದರು.
ಮುಂಬೈ ಕ್ರಿಕೆಟ್ ತಂಡ
ಸಿದ್ಧೇಶ್ ಲಾಡ್, ಆಂಗ್ಕ್ರಿಶ್ ರಘುವಂಶಿ, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ತನುಷ್ ಕೋಟ್ಯಾನ್, ಸೂರ್ಯಾಂಶ್ ಶೆಡ್ಗೆ, ಶಾರ್ದೂಲ್ ಠಾಕೂರ್, ಅಥರ್ವ ಅಂಕೋಲೆಕರ್, ವಿನಾಯಕ್ ಭೋರ್, ಜೇ ಬಿಸ್ತಾ, ರಾಯ್ಸ್ಟನ್ ಡಯಾಸ್, ಆಯುಷ್ ಜುನೇಖಾನ್, ಮೊಹಮ್ಮದ್ ಜುನೇಖಾನ್, ಪ್ರಸಾದ್ ಪವಾರ್, ಹರ್ಷ ತನ್ನಾ.