ಐಪಿಎಲ್ನತ್ತ ಜ್ಯಾಮಿ ಚಿತ್ತ; ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಮೆಂಟರ್?
Nov 25, 2023 02:30 PM IST
ರಾಹುಲ್ ದ್ರಾವಿಡ್.
- Rahul Dravid: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಲು ರಾಹುಲ್ ದ್ರಾವಿಡ್ ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ (ODI World Cup 2023) ಭಾರತದ ಸೋಲಿನ ನಂತರ ಲೆಜೆಂಡರಿ ಕ್ರಿಕೆಟಿಗ ಮತ್ತು ಮುಖ್ಯಕೋಚ್ ರಾಹುಲ್ ದ್ರಾವಿಡ್ (Rahul Dravid), ಅವರ ಎರಡು ವರ್ಷಗಳ ಒಪ್ಪಂದವು ಕೊನೆಗೊಂಡಿತು. ಇದೀಗ ಮತ್ತೆ ಟೀಮ್ ಇಂಡಿಯಾ (Team India) ಕೋಚ್ ಆಗಲು ಬಯಸದ ದ್ರಾವಿಡ್ ಐಪಿಎಲ್ನತ್ತ (IPL 2024) ಮುಖ ಮಾಡಲು ಸಜ್ಜಾಗಿದ್ದಾರೆ. ಅದರಂತೆ ತಂಡವೊಂದಕ್ಕೆ ಮೆಂಟರ್ ಆಗುವ ಸಾಧ್ಯತೆ ಹೆಚ್ಚಿವೆ ಎಂದು ವರದಿಗಳು ಹೇಳುತ್ತಿವೆ.
ವರದಿಗಳ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ (Lucknkow Super Giants) ಮೆಂಟರ್ ಆಗಿ ಸೇವೆ ಸಲ್ಲಿಸಲು ದ್ರಾವಿಡ್ ಸಿದ್ಧರಾಗಿದ್ದಾರೆ. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್ಡೆವಿಲ್ಸ್) ತಂಡದೊಂದಿಗೆ ಕೋಚಿಂಗ್ ಕೆಲಸ ಮಾಡಿದ ಮಾಜಿ ಭಾರತ ನಾಯಕ, ಮತ್ತೊಮ್ಮೆ ಟೀಮ್ ಇಂಡಿಯಾಗೆ ಕೋಚ್ ಆಗಲು ಬಯಸುತ್ತಿಲ್ಲ. ಹಾಗಾಗಿ ಗೌತಮ್ ಗಂಭೀರ್ (Gautam Gambhir) ಅವರಿಂದ ತೆರವಾದ ಮೆಂಟರ್ ಸ್ಥಾನ ತುಂಬಲು ದ್ರಾವಿಡ್ ಉತ್ಸುಕತೆ ತೋರಿದ್ದಾರೆ ಎನ್ನಲಾಗಿದೆ.
ಆರ್ಆರ್ ಮತ್ತು ಎಲ್ಎಸ್ಜಿಯಿಂದ ಆಫರ್
ಕೆಎಲ್ ರಾಹುಲ್ ನೇತೃತ್ವದ ಫ್ರಾಂಚೈಸಿ ಬುಧವಾರ (ನವೆಂಬರ್ 22) ಗೌತಮ್ ಗಂಭೀರ್‌ಗೆ ವಿದಾಯ ಹೇಳಿದೆ. ಈಗ ಹೊಸ ಮಾರ್ಗದರ್ಶಕರ ಹುಡುಕಾಟದಲ್ಲಿ ನಿರತವಾಗಿದೆ. ದೈನಿಕ್ ಜಾಗರಣ್‌ನ ವರದಿಯ ಪ್ರಕಾರ, ದ್ರಾವಿಡ್‌ಗೆ ಲಕ್ನೋ ಮತ್ತು ತಮ್ಮ ಮಾಜಿ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡಗಳಿಂದ ಆಫರ್‌ಗಳು ಬರುತ್ತಿವೆ. ಆದರೆ ಎಲ್‌ಎಸ್‌ಜಿ ದ್ರಾವಿಡ್‌ಗೆ ಹೆಚ್ಚಿನ ಮೊತ್ತ ನೀಡುವುದಾಗಿ ತಿಳಿಸಿದೆ. ಹೀಗಾಗಿ ಲಕ್ನೋ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಎಲ್‌ಎಸ್‌ಜಿ 2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿತು. 2022 ಮತ್ತು 2023ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಎರಡೂ ಸಂದರ್ಭಗಳಲ್ಲಿ ಎಲಿಮಿನೇಟರ್ ಪಂದ್ಯದಲ್ಲೇ ಸೋತು ಮುಂದಿನ ಹಂತಕ್ಕೆ ಪ್ರವೇಶಿಸಲು ಸಾಧ್ಯವಾಗದೆ ವಿಫಲವಾಯಿತು. 2022ರಲ್ಲಿ ಮೆಂಟರ್ ಸ್ಥಾನಕ್ಕೆ ಗೌತಮ್ ಗಂಭೀರ್ ಮತ್ತು ಮುಖ್ಯಕೋಚ್ ಸ್ಥಾನಕ್ಕೆ ಆಂಡಿ ಫ್ಲವರ್ ನೇಮಕಗೊಂಡಿದ್ದರು. ಇದೀಗ ಇಬ್ಬರೂ ಬೇರೆ ಬೇರೆ ಫ್ರಾಂಚೈಸಿಗಳಿಗೆ ಸೇರಿದ್ದಾರೆ.
ಈಗಾಗಲೇ ಆರ್ಸಿಬಿ ತರಬೇತುದಾರರಾಗಿ ಆಯ್ಕೆಯಾದ ಆ್ಯಂಡಿ ಫ್ಲವರ್‌ಗೆ ಬದಲಿಗೆ ಆಸ್ಟ್ರೇಲಿಯಾದ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ಗೆ ಮಣೆ ಹಾಕಿದೆ. ಈಗ ಮೆಂಟರ್ ಆಗಿ ಕೆಕೆಆರ್ ಕದ ತಟ್ಟಿರುವ ಗಂಭೀರ್‌ನ ಸ್ಥಾನ ತುಂಬಲು ದ್ರಾವಿಡ್ ರೇಸ್‌ನಲ್ಲಿ ಮುಂದಿದ್ದಾರೆ. ಟೀಮ್ ಇಂಡಿಯಾಗೆ ಮತ್ತೊಮ್ಮೆ ಕೋಚ್ ಆಗಲು ಬಯಸುವುದಿಲ್ಲ ಎಂದು ದ್ರಾವಿಡ್ ತಮ್ಮ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ. ಹಾಗಾಗಿ ಬಿಸಿಸಿಐ, ಭಾರತದ ಮಾಜಿ ಕ್ರಿಕೆಟಿಗ ಮತ್ತು ಎನ್ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರನ್ನು ನೂತನ ಮುಖ್ಯಕೋಚ್ ಆಗಿ ನೇಮಿಸಲು ಚಿಂತಿಸುತ್ತಿದೆ.