logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಪಾಯ ತೆಗೆದುಕೊಳ್ಳಲು ಸಿದ್ಧರಿಲ್ಲ; ರೋಹಿತ್ ಶರ್ಮಾ ನಾಯಕತ್ವ ತಂತ್ರಕ್ಕೆ ರವಿ ಶಾಸ್ತ್ರಿ-ವಾನ್ ಗೊಂದಲ

ಅಪಾಯ ತೆಗೆದುಕೊಳ್ಳಲು ಸಿದ್ಧರಿಲ್ಲ; ರೋಹಿತ್ ಶರ್ಮಾ ನಾಯಕತ್ವ ತಂತ್ರಕ್ಕೆ ರವಿ ಶಾಸ್ತ್ರಿ-ವಾನ್ ಗೊಂದಲ

Jayaraj HT Kannada

Dec 17, 2024 10:00 AM IST

google News

ರೋಹಿತ್ ಶರ್ಮಾ ನಾಯಕತ್ವ ತಂತ್ರಕ್ಕೆ ರವಿ ಶಾಸ್ತ್ರಿ - ಮೈಕೆಲ್ ವಾನ್ ಗೊಂದಲ

    • ಟ್ರಾವಿಸ್ ಹೆಡ್‌ ಬ್ಯಾಟಿಂಗ್‌ ವೇಳೆ ಫೀಲ್ಡ್‌ ಸೆಟಪ್‌ ವಿಷಯವಾಗಿ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಹಾಗೂ ಮೈಕಲ್ ವಾನ್ ಗೊಂದಲಕ್ಕೊಳಗಾಗಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವ ತಂತ್ರಕ್ಕೆ ರವಿ ಶಾಸ್ತ್ರಿ - ಮೈಕೆಲ್ ವಾನ್ ಗೊಂದಲ
ರೋಹಿತ್ ಶರ್ಮಾ ನಾಯಕತ್ವ ತಂತ್ರಕ್ಕೆ ರವಿ ಶಾಸ್ತ್ರಿ - ಮೈಕೆಲ್ ವಾನ್ ಗೊಂದಲ (AFP)

ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತು. ಅದು ವೇಗಿ ಜಸ್ಪ್ರೀತ್‌ ಬುಮ್ರಾ ನಾಯಕತ್ವದಲ್ಲಿ. ಆ ನಂತರ ಟೀಮ್‌ ಇಂಡಿಯಾ ನಾಯತ್ವಕ್ಕೆ ಮರಳಿದ ರೋಹಿತ್‌ ಶರ್ಮಾ ಕ್ಯಾಪ್ಟನ್ಸಿಯಲ್ಲಿ, ಅಡಿಲೇಡ್‌ ಟೆಸ್ಟ್‌ ಸೋತ ಭಾರತ ತಂಡ, ಇದೀಗ ಗಬ್ಬಾ ಟೆಸ್ಟ್‌ನಲ್ಲೂ ಹಿನ್ನಡೆ ಅನುಭವಿಸಿದೆ. ಪಂದ್ಯದಲ್ಲಿ ಹಿಟ್‌ಮ್ಯಾನ್ ನಡೆ, ನಾಯಕತ್ವಕ್ಕೆ ದಿಗ್ಗಜ ಕ್ರಿಕೆಟಿಗರು ಟೀಕಿಸಿದ್ದಾರೆ. ಮೂರನೇ ಟೆಸ್ಟ್‌‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಭರ್ಜರಿ 445 ರನ್ ಕಲೆ ಹಾಕಿತು. ಟೀಮ್‌ ಇಂಡಿಯಾವನ್ನು ಮತ್ತೆ ತಲೆ ತಿಂದವರು ಟ್ರಾವಿಸ್‌ ಹೆಡ್.‌ ಕೊನೆಯ ನಾಲ್ಕು ಟೆಸ್ಟ್‌ಗಳಲ್ಲಿ ಭಾರತದ ವಿರುದ್ಧ ಮೂರನೇ ಹಾಗೂ ಸತತ ಎರಡನೇ ಸೆಂಚುರಿ ಬಾರಿಸಿದ ಹೆಡ್‌ಗೆ ಮೂಗುದಾರ ಹಾಕುವಲ್ಲಿ ಭಾರತ ತಂಡ ಸಂಪೂರ್ಣ ವಿಫಲವಾಯ್ತು.

ಡಿಸೆಂಬರ್‌ 17ರ ಮಂಗಳವಾರದಂದು ಗಬ್ಬಾ ಟೆಸ್ಟ್‌ನ ನಾಲ್ಕನೇ ದಿನ. ತನ್ನ ಸರದಿಯ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್‌ ಕುಸಿತವಾಗಿದೆ. ಮತ್ತೊಮ್ಮೆ ಅಲ್ಪ ಮೊತ್ತ ಕಲೆಹಾಕುವ ಸಾಧ್ಯತೆ ಇದೆ. ಈ ನಡುವೆ, ಆಸೀಸ್‌ ಇನ್ನಿಂಗ್ಸ್‌ ಸಮಯದಲ್ಲಿ ರೋಹಿತ್ ಶರ್ಮಾ ನಾಯಕತ್ವ ವಿಧಾನ ಮತ್ತೆ ಚರ್ಚೆಯ ವಸ್ತುವಾಗಿದೆ. ಬುಮ್ರಾ ನಾಯಕತ್ವದಲ್ಲಿ ಮೊದಲ ಟೆಸ್ಟ್‌ ಗೆದ್ದಿದ್ದ ಭಾರತ ತಂಡ. ಇದೀಗ ರೋಹಿತ್‌ ನಾಯಕತ್ವದಲ್ಲಿ ಸೋಲುತ್ತಿರುವುದು ಸಹಜವಾಗಿ ದಿಗ್ಗಜರ ಚರ್ಚೆಗೆ ಕಾರಣವಾಗಿದೆ.

ಟ್ರಾವಿಸ್‌ ಹೆಡ್ ಬ್ಯಾಟಿಂಗ್‌ ವೇಳೆ ರೋಹಿತ್ ಶರ್ಮಾ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ ಮತ್ತು ಮೈಕಲ್ ವಾನ್ ಗೊಂದಲ ಮತ್ತು ಅಚ್ಚರಿಗೊಳಗಾಗಿದ್ದಾರೆ.

ಭಾನುವಾರದ ದಿನದಾಟದಲ್ಲಿ ಟ್ರಾವಿಸ್‌ ಹೆಡ್‌ ಕೇವಲ 115 ಎಸೆತಗಳಲ್ಲಿ ಶತಕ ಬಾರಿಸಿದರು. ಅವರು ಹೊಡೆದ ಒಂದು ಕಟ್ ಶಾಟ್, ಕೇವಲ 20 ಮೀಟರ್ ದೂರದಲ್ಲಿ ಸ್ಕ್ವೇರ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಸಮೀಪವೇ ಕ್ಯಾಚ್‌ ಹಿಡಿಯಲು ಸಾಧ್ಯವಿರುವ ವ್ಯಾಪ್ತಿಯಲ್ಲಿಯೇ ಹಾದುಹೋಯ್ತು. ಆದರೆ, ವಿರಾಟ್‌ಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಇದು ಆ ಸ್ಥಳದಲ್ಲಿ ಕ್ಷೇತ್ರ ರಕ್ಷಣೆಗೆ ವಿರಾಟ್‌ ಕೊಹ್ಲಿಯ ನಿಯೋಜನೆಯ ನಿರ್ಧಾರದ ಬಗ್ಗೆ ಕ್ರಿಕೆಟ್ ತಜ್ಞರಿಗೆ ಸಾಕಷ್ಟು ಗೊಂದಲ ಮೂಡಿಸಿದೆ. ಈಗಾಗಲೇ ಹಿಟ್‌ಮ್ಯಾನ್‌ ನಾಯಕತ್ವದಲ್ಲಿ ಭಾರತ ತಂಡವು ಸತತ ಕೊನೆಯ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಸೋತಿದೆ. ಅದರಲ್ಲಿ ತವರಿನಲ್ಲಿ ಕಿವೀಸ್‌ ವಿರುದ್ಧ ವೈಟ್‌ವಾಶ್ ಕೂಡಾ ಸೇರಿದೆ.

ರಿಸ್ಕ್‌ ತೆಗೆದುಕೊಳ್ಳಲು ಭಾರತ ಸಿದ್ಧವಿಲ್ಲ

ಹೆಡ್ ವಿರುದ್ಧ ಫೀಲ್ಡರ್‌ಗಳ ನಿಯೋಜನೆಯನ್ನು ರವಿ ಶಾಸ್ತ್ರಿ ಟೀಕಿಸಿದ್ದಾರೆ. ಭಾರತವು ವಿಕೆಟ್‌ ಪಡೆಯುವ ಪ್ರಯತ್ನ ಮಾಡುವ ಸಲುವಾಗಿ, ಹೆಡ್ ಬೌಂಡರಿ ಬಾರಿಸಲು ಅವಕಾಶ ನೀಡುವ ಅಪಾಯವನ್ನು ಎದುರಿಸಲು ಭಾರತ ಸಿದ್ಧವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

"ವಿಕೆಟ್ ಬರುತ್ತದೆಯೇ ಎಂದು ನೋಡುವುದು ಭಾರತದ ಆಲೋಚನೆಯಾಗಿರಬಹುದು. ಆದರೆ ಆಸ್ಟ್ರೇಲಿಯಾ ಈ ರೀತಿ ಫೀಲ್ಡ್‌ ಸೆಟಪ್‌ ಮಾಡುವುದಿಲ್ಲ. ಅದರಲ್ಲೂ ಟ್ರಾವಿಸ್‌ ಹೆಡ್ ಪ್ರತಿ ಓವರ್‌ನಲ್ಲೂ ಬೌಂಡರಿ ಹೊಡೆಯಲು ನೋಡುತ್ತಿದ್ದಾರೆ. ಅವರು ಹೊಡೆದೇ ಹೊಡೆಯುತ್ತಾರೆ ಕೂಡಾ. ಐದು ಫೀಲ್ಡರ್‌ಗಳನ್ನು ಬೌಂಡರಿ ಬಳಿ ನಿಲ್ಲಿಸಿದ್ದರೂ ಬೌಂಡರಿ ಬಾರಿಸುತ್ತಾರೆ. ಪ್ರತಿ ಓವರ್‌ಗೆ ಏಳರಿಂದ ಎಂಟು ರನ್‌ ಗಳಿಸುತ್ತಿದ್ದಾರೆ" ಎಂದು ಶಾಸ್ತ್ರಿ ಹೇಳಿದ್ದಾರೆ.

ಒಂದೇ ತಂತ್ರದಲ್ಲಿ ನಿಲ್ಲುತ್ತಿಲ್ಲ

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಕೂಡಾ, ದೀರ್ಘಕಾಲದವರೆಗೆ ಒಂದು ನಿರ್ದಿಷ್ಟ ಯೋಜನೆಯನ್ನು ಅನುಸರಿಸದಿರುವುದಕ್ಕೆ ರೋಹಿತ್ ಅವರನ್ನು ಟೀಕಿಸಿದರು. "ರೋಹಿತ್ ಹೆಚ್ಚು ಹೊತ್ತು ಒಂದೇ ತಂತ್ರವನ್ನು ಅನುಸರಿಸುವುದಿಲ್ಲ" ಎಂದು ವಾನ್ ಫಾಕ್ಸ್ ಕ್ರಿಕೆಟ್‌ಗೆ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ