ಔಟ್ ಸೈಡ್ ಹೊರಗಿನ ಎಸೆತಗಳ ವೀಕ್ನೆಸ್; ಸಚಿನ್ ತೆಂಡೂಲ್ಕರ್ ಉದಾಹರಣೆ ಉಲ್ಲೇಖಿಸಿ ಕೊಹ್ಲಿಗೆ ಸಲಹೆ ಕೊಟ್ಟ ಸುನಿಲ್ ಗವಾಸ್ಕರ್
Sunil Gavaskar: ಸಚಿನ್ ತೆಂಡೂಲ್ಕರ್ ಅವರ ಉದಾಹರಣೆ ಉಲ್ಲೇಖಿಸಿರುವ ಸುನಿಲ್ ಗವಾಸ್ಕರ್ ಅವರು ಪದೆ ಪದೇ ಆಫ್ ಸೈಡ್ ಹೊರಗಿನ ಎಸೆತಗಳಿಗೆ ಔಟಾಗುತ್ತಿರುವ ವಿರಾಟ್ ಕೊಹ್ಲಿಗೆ ವಿಶೇಷ ಸಲಹೆ ನೀಡಿದ್ದಾರೆ.
ಪರ್ತ್ ಟೆಸ್ಟ್ನಲ್ಲಿ ಭರ್ಜರಿ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರು, ಮತ್ತೆ ವೈಫಲ್ಯ ಅನುಭವಿಸಿದ್ದಾರೆ. ಅಡಿಲೇಡ್ ಬಳಿಕ ಬ್ರಿಸ್ಬೇನ್ ಟೆಸ್ಟ್ನಲ್ಲೂ ಔಟ್ ಸೈಡ್ ಆಫ್ ಸ್ಟಂಪ್ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಕೊಹ್ಲಿ ಪಾಲಿಗೆ ಇದು ದೊಡ್ಡ ವೀಕ್ನೆಸ್ ಆಗಿದೆ. ಆಸೀಸ್ ವಿರುದ್ಧದ ಮೂರನೇ ಟೆಸ್ಟ್ನಲ್ಲೂ ಔಟ್ ಸೈಟ್ ಆಫ್ ಸ್ಟಂಪ್ ಬಾಲ್ಗೆ ವಿಕೆಟ್ ಒಪ್ಪಿಸಿದ್ದು, ಫ್ಯಾನ್ಸ್ಗೆ ತೀವ್ರ ನಿರಾಸೆ ಮೂಡಿಸುತ್ತಿದ್ದಾರೆ. ಇದೇ ವೇಳೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಸಿಡ್ನಿ ಇನ್ನಿಂಗ್ಸ್ ಅನ್ನು ಉಲ್ಲೇಖಿಸಿ ಸಲಹೆ ನೀಡಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಆಸ್ಟ್ರೇಲಿಯಾ ಕಲೆ ಹಾಕಿದ್ದ 445 ರನ್ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಮತ್ತೆ ಕಳಪೆ ಪ್ರದರ್ಶನ ನೀಡಿದೆ. 3 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ಜೋಶ್ ಹೇಜಲ್ವುಡ್ ಅವರ ಬೌಲಿಂಗ್ನಲ್ಲಿ ಆಫ್ ಸ್ಟಂಪ್ ಹೊರಗೆ ಹೋದ ಚೆಂಡನ್ನು ಕವರ್ ಡ್ರೈವ್ ಶಾಟ್ ಮಾಡಲು ಯತ್ನಿಸಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಹೊರ ನಡೆದಿದ್ದಾರೆ. ಇದೇ ಸಿರೀಸ್ನಲ್ಲಿ 4 ಸಲ ಆಫ್ ಸ್ಟಂಪ್ ಹೊರಗಿನ ಎಸೆತಗಳಿಗೆ ಔಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಸಚಿನ್ ಅವರ ಉದಾಹರಣೆ ಉಲ್ಲೇಖಿಸಿ ಗವಾಸ್ಕರ್ ಕೊಹ್ಲಿಗೆ ಉತ್ತಮ ಸಲಹೆ ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಕೂಡ ಇದೇ ತಪ್ಪು ಮಾಡಿದ್ರು
ಸಚಿನ್ ತೆಂಡೂಲ್ಕರ್ ಸಹ ಇದೇ ರೀತಿ ಔಟ್ ಆಗುತ್ತಿದ್ದರು. ಆಫ್ ಸ್ಟಂಪ್ಸ್ ಹೊರಗಿತನ ಬಾಲ್ಗಳಿಗೆ ಪದೆ ಪದೇ ವಿಕೆಟ್ ಒಪ್ಪಿಸುತ್ತಿದ್ದರು. ಕಳಪೆ ಫಾರ್ಮ್ಗೆ ಸಿಲುಕಿ ಒದ್ದಾಡಿದ್ದರು. ಬಳಿಕ ಅದರ ಬಗ್ಗೆ ಅಧ್ಯಯನ ನಡೆಸಿದ್ದ ಸಚಿನ್, 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಒಂದೇ ಒಂದು ಎಸೆತವನ್ನೂ ಕವರ್ ಡ್ರೈವ್ಗೆ ಯತ್ನಿಸದೆ ಬ್ಯಾಟಿಂಗ್ ನಡೆಸಿದರು. ಬಳಿಕ ಆಫ್‌ಸೈಡ್ ಆಟವನ್ನು ನಿಯಂತ್ರಿಸಿದ್ದರು. ಪರಿಣಾಮ ಹಲವು ಪಂದ್ಯಗಳ ನಂತರ ಬಲಿಷ್ಠವಾಗಿ ಕಂಬ್ಯಾಕ್ ಮಾಡಿದರು. ಭರ್ಜರಿ 241 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಅವರು ಯಾವುದೇ ಆಫ್‌ಸೈಡ್ ಶಾಟ್ ಆಡಿರಲಿಲ್ಲ. ಇದೇ ರೀತಿ ಕೊಹ್ಲಿ ಆಡಬೇಕು ಎಂದು ಗವಾಸ್ಕರ್ ಸೂಚಿಸಿದ್ದಾರೆ.
ಸುನಿಲ್ ಗವಾಸ್ಕರ್ ಹೇಳಿದ್ದೇನು?
ಕಾಮೆಂಟರಿ ವೇಳೆ ಮಾತನಾಡಿದ ಗವಾಸ್ಕರ್, 2004 ರಲ್ಲಿ ಸಿಡ್ನಿ ಟೆಸ್ಟ್ನಲ್ಲಿ ತೆಂಡೂಲ್ಕರ್ ತನ್ನ ಆಟದಿಂದ ಕವರ್ ಡ್ರೈವ್ ನಿಯಂತ್ರಿಸಿದರು ಎಂಬುದನ್ನು ಕೊಹ್ಲಿ ಅಧ್ಯಯನ ನಡೆಸಬೇಕು. ಇದು ಅವರಿಗೆ ಇದೇ ರೀತಿಯ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡಲಿದೆ. ನನ್ನ ಪ್ರಕಾರ ಔಟ್ ಸೈಡ್ ಹೊರಗಿನ ಎಸೆತಗಳನ್ನು ಹೇಗೆ ಬಿಟ್ಟುಬಿಡಬೇಕು ಎನ್ನುವುದನ್ನು ಪರಿಶೀಲನೆ ನಡೆಸಬೇಕು. ಇದು ಸಂಪೂರ್ಣ ವಿಭಿನ್ನ. ಅಭ್ಯಾಸದಲ್ಲಿ ಏನೆಲ್ಲಾ ಮಾಡುತ್ತಿರೋ ಅದನ್ನೇ ಪಂದ್ಯದಲ್ಲೂ ಮಾಡುತ್ತಿರಿ. ಹಾಗಾಗಿ ಅಭ್ಯಾಸದ ವೇಳೆಯೇ ಎಲ್ಲವನ್ನೂ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕೊಹ್ಲಿ ಅವರು 2004 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ಏನು ಮಾಡಿದರು ಎಂಬುದನ್ನು ನೋಡುತ್ತಾರೆ ಎಂದು ಭಾವಿಸುತ್ತೇನೆ. ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ಆಫ್-ಸ್ಟಂಪ್ ಹೊರಗೆ ಲೈನ್‌ಗಾಗಿ ಸಚಿನ್ ಆಡಿದ್ದರು. ಸ್ಲಿಪ್ಸ್, ಶಾರ್ಟ್ ಗಲ್ಲಿಯಲ್ಲಿ ಕ್ಯಾಚ್ ನೀಡಿದ್ದರು. ಆದರೆ ಸಿಡ್ನಿ ಮೈದಾನದಲ್ಲಿ ಅದಕ್ಕೆ ವಿಭಿನ್ನವಾಗಿ ಬ್ಯಾಟ್ ಬೀಸಿದ್ದರು. ಆಫ್ ಸೈಡ್ ಹೊರತುಪಡಿಸಿ ಲೆಗ್ ಸೈಡ್ ಕಡೆಯೇ ಆಡಿದರು. ಅವರು 200-220 ತಲುಪಿದ ನಂತರವೇ ಕವರ್ ಡ್ರೈವ್ ಮಾಡಿದ್ದರು. ಕೊಹ್ಲಿ ಈ ಇನ್ನಿಂಗ್ಸ್ ಅನ್ನು ನೋಡಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.