logo
ಕನ್ನಡ ಸುದ್ದಿ  /  ಕ್ರಿಕೆಟ್  /  2023ರ ಐಸಿಸಿ ವರ್ಷದ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕ; ವಿರಾಟ್, ಶಮಿ ಸೇರಿ 6 ಭಾರತೀಯರಿಗೆ ಸ್ಥಾನ

2023ರ ಐಸಿಸಿ ವರ್ಷದ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕ; ವಿರಾಟ್, ಶಮಿ ಸೇರಿ 6 ಭಾರತೀಯರಿಗೆ ಸ್ಥಾನ

Jayaraj HT Kannada

Jan 23, 2024 02:58 PM IST

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ

    • 2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್‌ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಪ್ರಕಟಿಸಿದೆ. ನಾಯಕನಾಗಿ ರೋಹಿತ್‌ ಶರ್ಮಾ ಆಯ್ಕೆಯಾಗಿದ್ದು, ಒಟ್ಟು 6 ಮಂದಿ ಭಾರತೀಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ (PTI)

ಭಾರತ ತಂಡವನ್ನು ಯಶಸ್ವಿಯಾಗಿ ಏಕದಿನ ವಿಶ್ವಕಪ್‌ ಫೈನಲ್‌ವರೆಗೂ ಮುನ್ನಡೆಸಿದ ರೋಹಿತ್ ಶರ್ಮಾ‌ (Rohit Sharma), 2023ರ ಐಸಿಸಿ ಪುರುಷರ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಭಾರತ ತಂಡದಿಂದಲೇ ಒಟ್ಟು 6 ಆಟಗಾರರು ಸ್ಥಾನ ಪಡೆದಿದ್ದಾರೆ. ಭಾರತ ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಆಟಗಾರರನ್ನು ಹೊಂದಿರುವ ಇತರ ಎರಡು ತಂಡಗಳಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ಉಭಯ ರಾಷ್ಟ್ರಗಳ ತಲಾ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ನ್ಯೂಜಿಲ್ಯಾಂಡ್‌ನ ಡೇರಿಲ್ ಮಿಚೆಲ್ ಕೂಡಾ ತಂಡದಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫಿಲ್‌ ಸಾಲ್ಟ್‌ ಔಟ್‌, ರಹಮಾನುಲ್ಲಾ ಗುರ್ಬಾಜ್ ಇನ್‌; ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ನಾಯಕನಾಗಿ ರೋಹಿತ್ ಶರ್ಮಾ ಹೊರತುಪಡಿಸಿ ಭಾರತೀಯರ ಪೈಕಿ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಸ್ಪಿನ್ನರ್ ಕುಲ್ದೀಪ್ ಯಾದವ್, ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿದ್ದಾರೆ. ಈ ಎಲ್ಲಾ ಆಟಗಾರರು ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.

ರೋಹಿತ್ 2023ರಲ್ಲಿ 52ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 1255 ರನ್ ಗಳಿಸಿದ್ದಾರೆ. ಕಳೆದ ವರ್ಷ ನಡೆದ ಮಹತ್ವದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆರಂಭಿಕ ಆಟಗಾರನಾಗಿ ಅವರು ಸ್ಫೋಟಕ ಫಾರ್ಮ್‌ನಲ್ಲಿದ್ದರು. ಅಫ್ಘಾನಿಸ್ತಾನ ವಿರುದ್ಧ 131 ರನ್‌ ಸಿಡಿಸಿ ಅಬ್ಬರಿಸಿದ್ದರು. ಇದೇ ವೇಳೆ ಯುವ ಆರಂಭಿಕ ಆಟಗಾರ ಶುಭ್ಮನ್‌ ಗಿಲ್ 2023ರ ಕ್ಯಾಲೆಂಡರ್ ವರ್ಷದಲ್ಲಿ 1584 ರನ್ ಗಳಿಸಿದ್ದಾರೆ.

ಇದನ್ನೂ ಓದಿ | 2023ರ ಐಸಿಸಿ ವರ್ಷದ ಟಿ20 ತಂಡ ಪ್ರಕಟ; ಸೂರ್ಯಕುಮಾರ್ ಯಾದವ್ ನಾಯಕ; ಭಾರತದ ನಾಲ್ವರಿಗೆ ಸ್ಥಾನ

ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, 2023ರ ಬಹುಪಾಲು ಅತ್ಯುತ್ತಮ ಪ್ರದರ್ಶನ ನೀಡಿದರು. ಭಾರತದದ ವಿರುದ್ಧ ವಿಶ್ವಕಪ್‌ ಫೈನಲ್‌ನಲ್ಲಿ ಅಬ್ಬರಿಸುವ ಮೂಲಕ ಆರನೇ ವಿಶ್ವಕಪ್ ಗೆಲ್ಲುವಲ್ಲಿ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಿದ್ದರು. ನಿರ್ಣಾಯಕ ಪಂದ್ಯದಲ್ಲಿ ಅವರು 137 ರನ್ ಸಿಡಿಸಿ ಭಾರತವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆರು ಶತಕ ಸಿಡಿಸಿದ ವಿರಾಟ್‌ ಕೊಹ್ಲಿಗೆ ಸ್ಥಾನ

2023ರಲ್ಲಿ ಬರೋಬ್ಬರಿ ಆರು ಶತಕಗಳನ್ನು ಸಿಡಿಸಿರುವ ಕೊಹ್ಲಿ, ನಿಸ್ಸಂದೇಹವಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಅವರು, ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ.

ನ್ಯೂಜಿಲ್ಯಾಂಡ್ ಬ್ಯಾಟರ್‌ ಡೇರಿಲ್ ಮಿಚೆಲ್ 2023ರಲ್ಲಿ ಐದು ಶತಕಗಳನ್ನು ಸಿಡಿಸಿದ್ದಾರೆ. 52.34 ಸರಾಸರಿಯಲ್ಲಿ ಬ್ಯಾಟ್‌ ಬೀಸಿ ಒಟ್ಟು 1204 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್‌ ಹೆನ್ರಿಚ್ ಕ್ಲಾಸೆನ್ 2023ರ ಐಸಿಸಿ ಪುರುಷರ ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ವೇಗಿ ಮಾರ್ಕೊ ಜಾನ್ಸೆನ್ ಕಳೆದ 12 ತಿಂಗಳುಗಳಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ಆಡಮ್ ಜಂಪಾ ಕೂಡಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವರು ಸತತ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ ಕಬಳಿಸಿದ್ದರು.

ಇದನ್ನೂ ಓದಿ | BCCI Awards: ಶುಭ್ಮನ್ ಗಿಲ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ; ರವಿಶಾಸ್ತ್ರಿಗೆ ಬಿಸಿಸಿಐ ವಿಶೇಷ ಗೌರವ

ಭಾರತದ ಮಾರಕ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ 2023ರಲ್ಲಿ ಅಬ್ಬರಿಸಿದ ಬಗೆಗೆ ವಿಶೇಷ ವರ್ಣನೆ ಬೇಕಿಲ್ಲ. ಸಿರಾಜ್ 2023ರಲ್ಲಿ ಒಟ್ಟು 44 ವಿಕೆಟ್‌ ಪಡೆದರೆ, ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಡಿಮೆ ಪಂದ್ಯಗಳನ್ನಾಡಿದ್ದರೂ, ಶಮಿ ಅತಿ ಹೆಚ್ಚು ವಿಕೆಟ್ ಪಡೆದರು. ಒಂದೇ ವರ್ಷ ನಾಲ್ಕು ಬಾರಿ ಐದು ವಿಕೆಟ್‌ ಸಾಧನೆ ಮಾಡಿದರು. ಅತ್ತ ಎಡಗೈ ಸ್ಪಿನ್ನರ್ ಕುಲ್ದೀಪ್ ವರ್ಷದಲ್ಲಿ ಒಟ್ಟು 49 ವಿಕೆಟ್‌ಗಳನ್ನು ತನ್ನ ಖಾತೆಗೆ ಪಡೆದಿದ್ದಾರೆ.

ಐಸಿಸಿ ವರ್ಷದ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ, ಭಾರತ), ಶುಭ್ಮನ್ ಗಿಲ್ (ಭಾರತ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ಡೇರಿಲ್ ಮಿಚೆಲ್ (ನ್ಯೂಜಿಲ್ಯಾಂಡ್), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್, ದಕ್ಷಿಣ ಆಫ್ರಿಕಾ), ಮಾರ್ಕೊ ಜಾನ್ಸೆನ್ (ದಕ್ಷಿಣ ಆಫ್ರಿಕಾ), ಆಡಮ್ ಜಂಪಾ (ಆಸ್ಟ್ರೇಲಿಯಾ), ಮೊಹಮ್ಮದ್ ಸಿರಾಜ್ (ಭಾರತ), ಕುಲ್ದೀಪ್ ಯಾದವ್ (ಭಾರತ) ಮತ್ತು ಮೊಹಮ್ಮದ್ ಶಮಿ (ಭಾರತ).

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ