2023ರ ಐಸಿಸಿ ವರ್ಷದ ಟಿ20 ತಂಡ ಪ್ರಕಟ; ಸೂರ್ಯಕುಮಾರ್ ಯಾದವ್ ನಾಯಕ; ಭಾರತದ ನಾಲ್ವರಿಗೆ ಸ್ಥಾನ
ICC T20I Team of the Year 2023: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 2023ರ ವರ್ಷದ ಟಿ20 ತಂಡವನ್ನು ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಐಸಿಸಿ ಟಿ20 ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಜನವರಿ 22ರ ಸೋಮವಾರ 2023ರ ಋತುವಿನ ವರ್ಷದ ಟಿ20 ತಂಡವನ್ನು ಘೋಷಿಸಿದೆ. ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಚುಟುಕು ಸ್ವರೂಪದಲ್ಲಿ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಅವರನ್ನು, ಈ ತಂಡದ ನಾಯಕನಾಗಿ ಐಸಿಸಿ ಘೋಷಿಸಿದೆ. ಟಿ20 ವಿಶ್ವಕಪ್ ಪಂದ್ಯಾವಳಿ ಇರುವ ಮಹತ್ವದ ವರ್ಷದಲ್ಲಿ ಭಾರತದ ಸ್ಟೈಲಿಶ್ ಆಟಗಾರನಿಗೆ ಅಗ್ರ ಮನ್ನಣೆ ಸಿಕ್ಕಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಇತ್ತೀಚೆಗೆ ಸೂರ್ಯಕುಮಾರ್ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆಸೀಸ್ ವಿರುದ್ಧದ ಸರಣಿಯಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ 4-1 ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದರು.
ಏಕದಿನ ವಿಶ್ವಕಪ್ ಬಳಿಕ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟಿ20 ಸರಣಿಗಳನ್ನು ಆಡಿತು. ಇದರಲ್ಲಿ ಆಸೀಸ್ ವಿರುದ್ಧ ಭಾರತ ಸರಣಿ ಗೆದ್ದಿತು. ಕಳೆದ ವರ್ಷ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸ್ಕೈ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ | ಬಾಲರಾಮ ಬಂದ; ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆ ಬೆನ್ನಲ್ಲೇ ಸೆಹ್ವಾಗ್ ಭಾವುಕ ಪೋಸ್ಟ್
ಪ್ರತಿ ವರ್ಷವೂ ಐಸಿಸಿ ಚುಟುಕು ಸ್ವರೂಪದಲ್ಲಿ ಮಿಂಚಿದ 11 ಆಟಗಾರರನ್ನು ಗುರುತಿಸುತ್ತದೆ. 2023ರ ಋತುವಿನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಐಸಿಸಿ ಪುರುಷರ ಟಿ20 ವರ್ಷದ ತಂಡದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಈ ಬಾರಿಯ ತಂಡದಲ್ಲಿ ನಾಲ್ವರು ಭಾರತೀಯರೇ ಕಾಣಿಸಿಕೊಂಡಿದ್ದಾರೆ.
ಜೈಸ್ವಾಲ್ ಮತ್ತು ಬಿಷ್ಣೋಯ್‌ಗೆ ಸ್ಥಾನ
ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ ಸೇರಿಕೊಂಡಿದ್ದಾರೆ. ಟಿ20 ತಂಡದಲ್ಲಿ ಆರಂಭಿಕ ಆಟಗಾರನಾಗಿ ಆಯ್ಕೆಯಾಗಿರುವ ಜೈಸ್ವಾಲ್ ಹಲವು ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ. ಯುವ ಆಟಗಾರ ಜೈಸ್ವಾಲ್ 14 ಇನ್ನಿಂಗ್ಸ್‌ಗಳಲ್ಲಿ 430 ರನ್ ಗಳಿಸಿದ್ದಾರೆ. 159ರ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ | ಜೀವನದಲ್ಲೇ ನನಗೆ ಸಿಕ್ಕ ಅಪರೂಪದ ಅವಕಾಶ: ಬಾಲರಾಮ ಪ್ರಾಣ ಪ್ರತಿಷ್ಠೆ ನಂತರ ಸಚಿನ್ ಪ್ರತಿಕ್ರಿಯೆ
ಕಳೆದ ವರ್ಷ ಟಿ20 ಬೌಲಿಂಗ್‌ನಲ್ಲಿ ನಂಬರ್ ವನ್ ಶ್ರೇಯಾಂಕ ಪಡೆದ ಸ್ಪಿನ್ನರ್ ರವಿ ಬಿಷ್ಣೋಯ್, ಐಸಿಸಿ ವರ್ಷದ ತಂಡದಲ್ಲಿ ವೇಗಿ ಅರ್ಷದೀಪ್ ಜೊತೆಗೆ ಸ್ಥಾನ ಪಡೆದಿದ್ದಾರೆ. ಬಿಷ್ಣೋಯ್ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿದ ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಅಲ್ಲದೆ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಮತ್ತೊಂದೆಡೆ ಭಾರತದ ಪರ 21 ಟಿ20 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಪಡೆದಿರುವ ವೇಗಿ ಅರ್ಷದೀಪ್ ಕೂಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಐಸಿಸಿ ವರ್ಷದ ಪುರುಷರ ಟಿ20 ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪೂರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಜಾ, ಅಲ್ಪೇಶ್ ರಂಜಾನಿ, ಮಾರ್ಕ್ ಅದೈರ್, ರವಿ ಬಿಷ್ಣೋಯ್, ರಿಚರ್ಡ್ ನಾಗರವ, ಅರ್ಶ್ದೀಪ್ ಸಿಂಗ್.