ಐಪಿಎಲ್‌ನಲ್ಲಿ ಎರಡನೇ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್; ಸಿಎಸ್‌ಕೆ ಪರ ಈ ಸಾಧನೆ ಮಾಡಿದ ಮೊದಲ ನಾಯಕ
Apr 23, 2024 10:33 PM IST
ಐಪಿಎಲ್‌ನಲ್ಲಿ ಎರಡನೇ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್
- ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆಪಾಕ್ ಮೈದಾನದಲ್ಲಿ ಶತಕ ಬಾರಿಸುವ ಮೂಲಕ, ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಎಂಎಸ್ ಧೋನಿ ದಾಖಲೆ ಮುರಿದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ರುತುರಾಜ್ ಗಾಯಕ್ವಾಡ್ (Ruturaj Gaikwad) ವಿಶೇಷ ದಾಖಲೆ ಬರೆದಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಶತಕ ಬಾರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಗಾಯಕ್ವಾಡ್ ಪಾತ್ರರಾಗಿದ್ದಾರೆ. ತವರು ಮೈದಾನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ 2024ರಲ್ಲಿ ಮೊದಲ ಶತಕ ಸಿಡಿಸಿದ ಅವರು, ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಬಾರಿಗೆ ಮೂರಂಕಿ ಗಡಿ ದಾಟಿದ್ದಾರೆ.
ಪಂದ್ಯದ ಆರಂಭದಲ್ಲಿಯೇ ತಂಡದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಔಟಾದರು. ಆದರೆ, ಈ ವೇಳೆ ನಾಯಕನಾಟವಾಡಿದ ಗಾಯಕ್ವಾಡ್ ತಾಳ್ಮೆಯಿಂದ ಬ್ಯಾಟ್ ಬೀಸಿದರು. ನಿಧಾನಗತಿಯಲ್ಲೇ ಅರ್ಧಶತಕದ ಗಡಿ ದಾಟಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಬ್ಯಾಟ್ ಬೀಸಿದ ಅವರು, ಡೇರಿಲ್ ಮಿಚೆಲ್ ಅವರೊಂದಿಗೆ 45 ರನ್ ಜೊತೆಯಾಟವಾಡಿದರು. ಆ ಬಳಿಕ ರವೀಂದ್ರ ಜಡೇಜಾ ಅವರೊಂದಿಗೆ 52 ರನ್ ಒಟ್ಟುಗೂಡಿಸಿದರು. ಆ ಬಳಿಕ ಶಿವಂ ದುಬೆ ಅವರೊಂದಿಗೆ ಸ್ಫೋಟಕ ಆಟವಾಡಿ ಶತಕದ ಜೊತೆಯಾಟ ಪೂರೈಸಿದರು.
ಯಶ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸರ್‌ನೊಂದಿಗೆ 99 ರನ್ ಗಳಿಸಿದ ಬಳಿಕ, ಮುಂದಿನ ಎಸೆತದಲ್ಲಿ ಎಕ್ಸ್ಟ್ರಾ ಕವರ್ ಮೂಲಕ ಬೌಂಡರಿ ಬಾರಿಸಿ ಶತಕ ಪೂರೈಸಿದರು. ಇದು ಗಾಯಕ್ವಾಡ್ ಐಪಿಎಲ್ ವೃತ್ತಿಜೀವನದ ಎರಡನೇ ಐಪಿಎಲ್ ಶತಕವಾಗಿದೆ. ಅಲ್ಲದೆ, ಸೆಂಚುರಿ ಬಾರಿಸಿದ ಮೊದಲ ಸಿಎಸ್‌ಕೆ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ತಂಡದ ಪರ ಎಂಎಸ್ ಧೋನಿ 84 ರನ್ ಗಳಿಸಿದ್ದೇ ಅತಿ ಹೆಚ್ಚು ಮೊತ್ತವಾಗಿತ್ತು.
ಇದನ್ನೂ ಓದಿ | ಮುಂಬೈ ಇಂಡಿಯನ್ಸ್ ಪರ ಹೆಚ್ಚು ಆಡಿದರೆ ಮೆದುಳು ಸ್ಫೋಟವಾಗುತ್ತೆ; ಸಿಎಸ್‌ಕೆ ಸಂಸ್ಕೃತಿಯೇ ಬೆಸ್ಟ್ ಎಂದ ಅಂಬಾಟಿ ರಾಯುಡು
ಸಿಎಸ್‌ಕೆ ಪರ ಅತಿ ಹೆಚ್ಚು ಐಪಿಎಲ್ ಶತಕ ಸಿಡಿಸಿದ ಆಟಗಾರರು
- 2 - ಮುರಳಿ ವಿಜಯ್
- 2 - ಶೇನ್ ವ್ಯಾಟ್ಸನ್
- 2 - ರುತುರಾಜ್ ಗಾಯಕ್ವಾಡ್
- 1 - ಮೈಕೆಲ್ ಹಸ್ಸಿ
- 1 - ಬ್ರೆಂಡನ್ ಮೆಕಲಮ್
- 1 - ಸುರೇಶ್ ರೈನಾ
- 1 - ಅಂಬಾಟಿ ರಾಯುಡು
ಇದರೊಂದಿಗೆ ಮಾಜಿ ಆಟಗಾರರಾದ ಶೇನ್ ವ್ಯಾಟ್ಸನ್ ಮತ್ತು ಮುರಳಿ ವಿಜಯ್ ಅವರೊಂದಿಗೆ ಐಪಿಎಸ್‌ನಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂವರೂ ತಲಾ ಎರಡು ಸೆಂಚುರಿ ಸಿಡಿಸಿದ್ದಾರೆ.
ಸಿಎಸ್‌ಕೆ ಪರ ಅತಿ ಹೆಚ್ಚು ವೈಯಕ್ತಿಕ ಗಳಿಸಿದ ಆಟಗಾರರು
- 127 - ಮುರಳಿ ವಿಜಯ್ (ಚೆನ್ನೈ, 2010)
- 117* - ಶೇನ್ ವ್ಯಾಟ್ಸನ್ (ಮುಂಬೈ, 2018ರ ಫೈನಲ್)
- 116* - ಮೈಕೆಲ್ ಹಸ್ಸಿ (ಮೊಹಾಲಿ, 2008)
- 113 - ಮುರಳಿ ವಿಜಯ್ (ಚೆನ್ನೈ, 2012)
- 108* - ರುತುರಾಜ್ ಗಾಯಕ್ವಾಡ್ (ಚೆನ್ನೈ, 2024)
ಪಂದ್ಯದಲ್ಲಿ ಅಂತಿಮವಾಗಿ ಗಾಯಕ್ವಾಡ್ ಅಜೇಯ 108 ರನ್ ಗಳಿಸಿದರು. ಹೀಗಾಗಿ ತಂಡವು 4 ವಿಕೆಟ್ ಕಳೆದುಕೊಂಡು 210 ರನ್ ಕಲೆಹಾಕಿತು.