ನೆನಪಿರಲಿ, ಸಿಎಸ್‌ಕೆ ಪ್ರತಿ ಬಾರಿಯೂ ಪ್ಲೇಆಫ್ ಪ್ರವೇಶಿಸಿಲ್ಲ; ರುತುರಾಜ್‌ ಗಾಯಕ್ವಾಡ್‌ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ-virender sehwag confused csk remove rachin ravindra from team against lsg ipl 2024 sends warning to ruturaj gaikwad jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ನೆನಪಿರಲಿ, ಸಿಎಸ್‌ಕೆ ಪ್ರತಿ ಬಾರಿಯೂ ಪ್ಲೇಆಫ್ ಪ್ರವೇಶಿಸಿಲ್ಲ; ರುತುರಾಜ್‌ ಗಾಯಕ್ವಾಡ್‌ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ

ನೆನಪಿರಲಿ, ಸಿಎಸ್‌ಕೆ ಪ್ರತಿ ಬಾರಿಯೂ ಪ್ಲೇಆಫ್ ಪ್ರವೇಶಿಸಿಲ್ಲ; ರುತುರಾಜ್‌ ಗಾಯಕ್ವಾಡ್‌ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಆಡುವ ಬಳಗದಿಂದ ರಚಿನ್ ರವೀಂದ್ರ ಅವರನ್ನು ಕೈಬಿಟ್ಟ ನಿರ್ಧಾರದಿಂದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭಾರಿ ಗೊಂದಲಕ್ಕೊಳಗಾಗಿದ್ದಾರೆ.

ರುತುರಾಜ್‌ ಗಾಯಕ್ವಾಡ್‌ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ
ರುತುರಾಜ್‌ ಗಾಯಕ್ವಾಡ್‌ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಯಶಸ್ಸಿನ ಹಿಂದೆ ಹಲವಾರು ಕಾರಣಗಳಿವೆ. ಎಂಎಸ್ ಧೋನಿ ನಾಯಕತ್ವದಲ್ಲಿಯೇ ದಾಖಲೆಯ ಐದು ಟ್ರೋಫಿಗಳನ್ನು ಗೆದ್ದಿರುವ ಸಿಎಸ್‌ಕೆ, ತಮ್ಮ ಆಟಗಾರರ ಮೇಲೆ ಎಂದಿಗೂ ವಿಶ್ವಾಸ ಕಳೆದುಕೊಂಡಿರುವ ನಿದರ್ಶನವೇ ಇಲ್ಲ. ಮೊದಲ ಆಯ್ಕೆಯ ಆಡುವ ಬಳಗವನ್ನೇ ಟೂರ್ನಿಯುದ್ದಕ್ಕೂ ಉಳಿಸುವ ಮೂಲಕ, ಪ್ರತಿ ಆಟಗಾರನನ್ನೂ ಬೆಂಬಲಿಸುವ ಸಂಸ್ಕೃತಿ ತಂಡದ್ದು. ಆದರೆ, ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಏಪ್ರಿಲ್‌ 23ರಂದು ನಡೆಯುತ್ತಿರುವ ಪಂದ್ಯದಲ್ಲಿ ಸಿಎಸ್‌ಕೆ ತಂಡ ಭಿನ್ನ ನಿಲುವು ತಾಳಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಚಿನ್ ರವೀಂದ್ರ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ.

ಟೂರ್ನಿಯಲ್ಲಿ ರಚಿನ್‌ ಅಷ್ಟೇನೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಅವರನ್ನು ತಂಡದಿಂದ ಡ್ರಾಪ್‌ ಮಾಡಲಾಗಿದೆ. ನಾಯಕ ಋತುರಾಜ್ ಗಾಯಕ್ವಾಡ್, ಸಿಎಸ್‌ಕೆ ತಂಡದ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿದ್ದಾರೆ. ಆದರೆ, ಚೆನ್ನೈ ನಾಯಕನ ಈ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ರಿಕ್‌ಬಜ್‌ ಜೊತೆಗೆ ಮಾತನಾಡಿದ ಸೆಹ್ವಾಗ್, ಋಚಿನ್‌ ರವೀಂದ್ರ ಅವರನ್ನು ಆಡುವ ಬಳಗದಿಂದ ಕೈಬಿಟ್ಟ ನಿರ್ಧಾರದಿಂದ ಗೊಂದಲಕ್ಕೊಳಗಾಗಿದ್ದಾರೆ. ಹಳದಿ ಆರ್ಮಿ ತರಾತುರಿಯಿಂದ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಅಜಿಂಕ್ಯ ರಹಾನೆ ಅವರನ್ನು ಆರಂಭಿಕನಾಗಿ ಆಡಿಸುವುದು ಮತ್ತು ನಾಯಕ ಗಾಯಕ್ವಾಡ್ ಮೂರನೇ ಕ್ರಮಾಂಕದಲ್ಲಿ ಆಡಿಸುವುದು ಕೂಡಾ ಸೇರಿದೆ ಎಂದು ಹೇಳಿದರು.

ಇದನ್ನೂ ಓದಿ | ನನ್ನ ಪಾಲಿಗೆ ಟಿ20 ವಿಶ್ವಕಪ್‌ ಬಾಗಿಲು ಮುಚ್ಚಿದೆ; ವೆಸ್ಟ್ ಇಂಡೀಸ್ ಪರ ಮತ್ತೆ ಕ್ರಿಕೆಟ್ ಆಡಲ್ಲ ಎಂದ ಸುನಿಲ್ ನರೈನ್

ಸಿಎಸ್‌ಕೆ ತಂಡವು ತಮ್ಮ ಕಾರ್ಯತಂತ್ರದ ಕುರಿತು ಗೊಂದಲಕ್ಕೊಳಗಾದಾಗಲೆಲ್ಲಾ, ಅದು ಪ್ಲೇಆಫ್ ಹಂತಕ್ಕೆ ಪ್ರವೇಶಿಸಲು ವಿಫಲರಾಗಿದೆ ಎಂದು ವೀರು ಎಚ್ಚರಿಕೆ ನೀಡಿದ್ದಾರೆ.

ಸಿಎಸ್‌ಕೆ ತಂಡಕ್ಕೆ ಒಳ್ಳೆಯ ಲಕ್ಷಣವಲ್ಲ

“ಸಿಎಸ್‌ಕೆ ಕೆಟ್ಟದಾಗಿ ಆಡುತ್ತಿಲ್ಲ. ಆದರೆ ಚೆನ್ನೈ ನಿರಂತರವಾಗಿ ಆಡುವ ಬಳಗದಲ್ಲಿ ಬದಲಾವಣೆ ಮಾಡುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಆರಂಭದಲ್ಲಿ ಗಾಯಕ್ವಾಡ್ ಓಪನಿಂಗ್ ಮಾಡುತ್ತಿದ್ದರು. ನಂತರ ರಹಾನೆಗೆ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು. ಈಗ ಮತ್ತೆ ಗಾಯಕ್ವಾಡ್ ಆರಂಭಿಕರಾಗಿ ಮರಳಿದ್ದಾರೆ. ಅಲ್ಲದೆ ಇಂದು ರಚಿನ್ ರವೀಂದ್ರ ಅವರಿಗೆ ವಿರಾಮ ನೀಡಲಾಗಿದೆ. ಇದು ಸಿಎಸ್‌ಕೆ ತಂಡದ ಪಾಲಿಗೆ ಒಳ್ಳೆಯ ಲಕ್ಷಣಗಳಲ್ಲ. ಈ ಹಿಂದೆ ಪ್ರತಿ ಬಾರಿಯೂ ಅವರು ಈ ರೀತಿ ಮಾಡಿದಾಗ, ಪ್ಲೇಆಫ್ ಪ್ರವೇಶಿಸಲು ವಿಫಲರಾಗಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಈ ಬದಲಾವಣೆಗಳನ್ನು ಮಾಡುವಲ್ಲಿ ಸಿಎಸ್‌ಕೆ ತುಸು ಅವಸರ ಮಾಡಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಸೆಹ್ವಾಗ್‌ ಹೇಳಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ನಾಯಕ ಕೆಎಲ್‌ ರಾಹುಲ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಸಿಎಸ್‌ಕೆ ಪರ ರಚಿನ್‌ ರವೀಂದ್ರ ಬದಲಿಗೆ ಡೇರಿಲ್‌ ಮಿಚೆಲ್‌ ಆಡುವ ಬಳಗ ಸೇರಿಕೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್, ಮತೀಶ ಪತಿರಾಣ.(ANI )