ಮುಂಬೈ ಇಂಡಿಯನ್ಸ್ ಪರ ಹೆಚ್ಚು ಆಡಿದರೆ ಮೆದುಳು ಸ್ಫೋಟವಾಗುತ್ತೆ; ಸಿಎಸ್‌ಕೆ ಸಂಸ್ಕೃತಿಯೇ ಬೆಸ್ಟ್ ಎಂದ ಅಂಬಾಟಿ ರಾಯುಡು-ambati rayudu brain explode claim on mumbai indians team culture comparing to chennai super kings csk vs mi ipl jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ಪರ ಹೆಚ್ಚು ಆಡಿದರೆ ಮೆದುಳು ಸ್ಫೋಟವಾಗುತ್ತೆ; ಸಿಎಸ್‌ಕೆ ಸಂಸ್ಕೃತಿಯೇ ಬೆಸ್ಟ್ ಎಂದ ಅಂಬಾಟಿ ರಾಯುಡು

ಮುಂಬೈ ಇಂಡಿಯನ್ಸ್ ಪರ ಹೆಚ್ಚು ಆಡಿದರೆ ಮೆದುಳು ಸ್ಫೋಟವಾಗುತ್ತೆ; ಸಿಎಸ್‌ಕೆ ಸಂಸ್ಕೃತಿಯೇ ಬೆಸ್ಟ್ ಎಂದ ಅಂಬಾಟಿ ರಾಯುಡು

Ambati Rayudu: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿನ ಆಟದ ಸಂಸ್ಕೃತಿಯಲ್ಲಿನ ವ್ಯತ್ಯಾಸದ ಕುರಿತು ಉಭಯ ತಂಡಗಳ ಮಾಜಿ ಆಟಗಾರ ಅಂಬಾಟಿ ರಾಯುಡು ಮಾತನಾಡಿದ್ದಾರೆ. ಎಂಐಗಿಂತ ಸಿಎಸ್‌ಕೆ ಉತ್ತಮ ಎಂಬುದಾಗಿ ರಾಯುಡು ವಿವರಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ಗಿಂತ ಸಿಎಸ್‌ಕೆ ಸಂಸ್ಕೃತಿಯೇ ಬೆಸ್ಟ್ ಎಂದ ಅಂಬಾಟಿ ರಾಯುಡು
ಮುಂಬೈ ಇಂಡಿಯನ್ಸ್‌ಗಿಂತ ಸಿಎಸ್‌ಕೆ ಸಂಸ್ಕೃತಿಯೇ ಬೆಸ್ಟ್ ಎಂದ ಅಂಬಾಟಿ ರಾಯುಡು

ಐಪಿಎಲ್‌ನ ಎರಡು ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ನಡುವಿನ ಆಟದ ವಿಧಾನ ಮತ್ತು ಮ್ಯಾನೇಜ್‌ಮೆಂಟ್ ನಡುವಿನ ವ್ಯತ್ಯಾಸವನ್ನು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಬಹಿರಂಗಪಡಿಸಿದ್ದಾರೆ. ಉಭಯ ತಂಡಗಳಲ್ಲಿಯೂ ಆಡಿರುವ ಅನುಭವ ಹೊಂದಿರುವ ರಾಯುಡು, ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆ ತಂಡಗಳಲ್ಲಿ ಆಟಗಾರರ ಬೆಳವಣಿಗೆ ಕುರಿತು ಹೇಗೆ ಗಮನ ಹರಿಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ಉಭಯ ತಂಡಗಳಲ್ಲಿ ಆಟಗಾರರ ಮೇಲ್ವಿಚಾರಣೆ ಹೇಗೆ ಭಿನ್ನವಾಗಿದೆ ಎಂಬುದನ್ನು ವಿವರವಾಗಿ ಹೊರಹಾಕಿದ್ದಾರೆ.

ಎಂಎಸ್‌ ಧೋನಿ ನಾಯತ್ವದ ಪರಂಪರೆ ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಹೆಚ್ಚು ಪ್ರಕ್ರಿಯೆ ಆಧಾರಿತವಾಗಿದೆ ಎಂದು ರಾಯುಡು ಹೇಳಿದ್ದಾರೆ. ಆಟಗಾರನ ಆಟ ಹಾಗೂ ಸುಧಾರಣೆ ಮೇಲೆ ಫ್ರಾಂಚೈಸಿ ಹೆಚ್ಚು ಗಮನ ಹರಿಸುತ್ತದೆ ಎಂದಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್‌ ಫಲಿತಾಂಶ ಆಧಾರಿತವಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.

ಉಭಯ ತಂಡಗಳು ತಲಾ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ. ಹೀಗಾಗಿ ಈ ಎರಡೂ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಎರಡೂ ತಂಡಗಳಲ್ಲಿ ಆಡಿದ ಅನುಭವ ಹೊಂದಿರುವ ಕೆಲವು ಆಟಗಾರರ ಪೈಕಿ ರಾಯುಡು ಕೂಡಾ ಒಬ್ಬರು. ಇದೇ ವೇಳೆ ಡ್ವೇನ್ ಬ್ರಾವೋ ಹಾಗೂ ಹರ್ಭಜನ್ ಸಿಂಗ್ ಕೂಡಾ ಎಂಐ ಪರ ಆಡಿ ಆ ಬಳಿಕ ಚೆನ್ನೈಗೆ ಮರಳಿದವರು.

ಇದನ್ನೂ ಓದಿ | ಯಶಸ್ವಿ ಶತಕದೊಂದಿಗೆ ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ ಜೈಸ್ವಾಲ್; ರಾಜಸ್ಥಾನಕ್ಕೆ ಮತ್ತೊಂದು ರಾಯಲ್‌ ಗೆಲುವು

“ಸಿಎಸ್‌ಕೆ ಆಟದ ಪ್ರಕ್ರಿಯೆಯ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಅಲ್ಲಿ ಪಂದ್ಯದ ಫಲಿತಾಂಶಗಳನ್ನು ಹೆಚ್ಚು ವಿಶ್ಲೇಷಿಸುವುದಿಲ್ಲ. ಫ್ರಾಂಚೈಸ್‌ ಮನಸ್ಥಿತಿಯು ಫಲಿತಾಂಶಗಳಿಂದ ಬದಲಾವಣೆಯಾಗಲ್ಲ. ಆದರೆ, ಮುಂಬೈ ಇಂಡಿಯನ್ಸ್ ಸ್ವಲ್ಪ ವಿಭಿನ್ನ. ಅಲ್ಲಿ ಹೆಚ್ಚಾಗಿ ಗೆಲುವೇ ಮುಖ್ಯ. ಅವರ ಸಂಸ್ಕೃತಿ ಎಲ್ಲವೂ ಗೆಲುವಿನ ಮೇಲೆ ಅವಲಂಬಿತ. ಎಂಐ ಗೆಲುವು ಅತ್ಯಗತ್ಯ ಎಂಬ ಸಂಸ್ಕೃತಿ ಹೊಂದಿದೆ,” ಎಂದು ಸಿಎಸ್‌ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

2010ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್ ವೃತ್ತಿಜೀವನ ಆರಂಭಿಸಿದ ರಾಯುಡು, 2017ರವರೆಗೆ ತಂಡದಲ್ಲಿದ್ದರು. ಈ ನಡುವೆ ಮೂರು ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿದರು. 2018ರಲ್ಲಿ ಸಿಎಸ್‌ಕೆ ಪರ ಆಡಿದ ಅವರು, ಅಮೋಘ ಆಟದೊಂದಿಗೆ ಮತ್ತೆ ಭಾರತ ತಂಡಕ್ಕೂ ಕಂಬ್ಯಾಕ್‌ ಮಾಡಿದರು.

ಮೆದುಳು ಸ್ಫೋಟಗೊಳ್ಳಬಹುದು

ಸದ್ಯ ಸಿಎಸ್‌ಕೆ ಪರ ಆಡುತ್ತಿಲ್ಲವಾದರೂ, ತಂಡದ ಕುರಿತು ಅವರಿಗಿರುವ ಪ್ರೀತಿ ಹಾಗೂ ಅಭಿಮಾನ ತುಂಬಾ ದೊಡ್ಡದು. ಈ ವರ್ಷದ ಆರಂಭದಲ್ಲಿ ಐಪಿಎಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಾಯುಡು, ಎಂಐನಲ್ಲಿ ಎಲ್ಲವೂ ಗೆಲುವಿನ ಮೇಲೆ ಹೇಗೆ ಅವಲಂಬಿತವಾಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದರು. ಇಷ್ಟೇ ಅಲ್ಲದೆ ತಂಡದೊಂದಿಗೆ ಹೆಚ್ಚು ಸಮಯ ಕಳೆಯುವುದು 'ಮೆದುಳಿನ ಸ್ಫೋಟ'ಕ್ಕೆ ಕಾರಣವಾಗಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.

“ಸಿಎಸ್‌ಕೆ ಮತ್ತು ಮುಂಬೈ ಎರಡೂ ವಿಭಿನ್ನ ಸಂಸ್ಕೃತಿ ಹೊಂದಿವೆ. ಆದರೆ ಅಂತಿಮವಾಗಿ ಎರಡೂ ಕಡೆ ಕಠಿಣ ಪರಿಶ್ರಮ ಇದೆ. ಸಿಎಸ್‌ಕೆ ಉತ್ತಮ ವಾತಾವರಣ ಹೊಂದಿದೆ ಎಂದು ನಾನು ಭಾವಿಸುತ್ತೇನೆ. ನೀವು ಮುಂಬೈ ತಂಡದಲ್ಲಿ ಹೆಚ್ಚು ಸಮಯ ಕಳೆದರೆ ನಿಮ್ಮ ಮೆದುಳು ಸ್ಫೋಟಗೊಳ್ಳುತ್ತದೆ. ನಾನು ಇಂಡಿಯನ್ಸ್ ಪರ ಆಡುತ್ತಿದ್ದಾಗ, ನನ್ನ ಆಟ ಸಾಕಷ್ಟು ಸುಧಾರಿಸಿತು. ಒಂದು ವೇಳೆ ಪಂದ್ಯದಲ್ಲಿ ಗೆಲ್ಲದಿದ್ದರೆ, ಅಲ್ಲಿ ಯಾವುದೇ ನೆಪಕ್ಕೂ ಅವಕಾಶ ಕೊಡುವುದಿಲ್ಲ. ಒಟ್ಟಿನಲ್ಲಿ ಅವರಿಗೆ ನೀವು ಉತ್ತಮ ಪ್ರದರ್ಶನ ನೀಡಬೇಕು ಅಷ್ಟೇ. ಮುಂಬೈನಲ್ಲಿ ಆಟಗಾರ ಸುಧಾರಿಸುವ ವಾತಾವರಣವಿದೆ. ಅತ್ತ ಸಿಎಸ್‌ಕೆ ತಂಡದಲ್ಲಿ ಯಾವುದೇ ತೊಂದರೆ ಇಲ್ಲದೆ ಆಟಗಾರನ್ನು ಮತ್ತಷ್ಟು ಉತ್ತಮ ಆಟಗಾರನನ್ನಾಗಿ ರೂಪಿಸಲಾಗುತ್ತದೆ,” ಎಂದು ರಾಯುಡು ತಂಡಗಳನ್ನು ಪರಸ್ಪರ ಹೋಲಿಸಿದ್ದಾರೆ.