ಎಂಎಸ್ ಧೋನಿ ಹೆಸರನ್ನು ಶಿಫಾರಸ್ಸು ಮಾಡಿದ್ದೇ ನಾನು; ಮಾಹಿ ಭಾರತದ ಕ್ಯಾಪ್ಟನ್ ಆಗಿದ್ದೇಗೆಂದು ವಿವರಿಸಿದ ಸಚಿನ್ ತೆಂಡೂಲ್ಕರ್
Mar 24, 2024 04:14 PM IST
ಎಂಎಸ್ ಧೋನಿ ಭಾರತದ ಕ್ಯಾಪ್ಟನ್ ಆಗಿದ್ದೇಗೆಂದು ವಿವರಿಸಿದ ಸಚಿನ್ ತೆಂಡೂಲ್ಕರ್
- Sachin Tendulkar : ಭಾರತ ತಂಡದ ನಾಯಕನಾಗಿ ಎಂಎಸ್ ಧೋನಿ ಅವರನ್ನು ಬಿಸಿಸಿಐಗೆ ಶಿಫಾರಸ್ಸು ಮಾಡಿದ್ದೇಗೆಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿವರಿಸಿದ್ದಾರೆ.
ಎಂಎಸ್ ಧೋನಿ (MS Dhoni) ವಿಶ್ವಶ್ರೇಷ್ಠ ನಾಯಕರಲ್ಲಿ ಒಬ್ಬರು. ಮೂರು ಮಾದರಿಯ ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಏಕೈಕ ನಾಯಕ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಯಶಸ್ಸಿಗೆ ಸಾಟಿಯೇ ಇಲ್ಲ. ನೂತನವಾಗಿ ನಾಯಕತ್ವ ವಹಿಸಿಕೊಂಡ ಧೋನಿ ಅವರು 2007ರ ಟಿ20 ವಿಶ್ವಕಪ್ (T20 World Cup) ಗೆದ್ದು ಹೊಸ ಚರಿತ್ರೆ ಸೃಷ್ಟಿಸಿದ್ದರು. 2011ರಲ್ಲಿ ಏಕದಿನ ವಿಶ್ವಕಪ್ (ODI World Cup 2011) ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿದ್ದು ಮಿಸ್ಟರ್ ಕೂಲ್ ಕ್ಯಾಪ್ಟನ್ ಅವಧಿಯಲ್ಲೇ.
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ತಂಡವನ್ನು ಅಗ್ರಸ್ಥಾನಕ್ಕೆ ಏರಿಸಿದ ಮೊದಲ ನಾಯಕನೂ ಧೋನಿಯೇ. ಭಾರತ ಲೆಜೆಂಡರಿ ನಾಯಕನಾಗಿ ರೂಪುಗೊಂಡ ಮಾಹಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ ಅಂದರೆ ಅದು ಸಚಿನ್ ತೆಂಡೂಲ್ಕರ್ (Sachin Tendulkar). ಏಕೆಂದರೆ ಧೋನಿಯನ್ನು ನಾಯಕನನ್ನಾಗಿ ಮಾಡಬೇಕೆಂದು ಗುರುತಿಸಿ ಬಿಸಿಸಿಐಗೆ ಶಿಫಾರಸ್ಸು ಮಾಡಿದ್ದು ಸಚಿನ್ ತೆಂಡೂಲ್ಕರ್ ಅವರು. ಆದರೆ ವೀರೇಂದ್ರ ಸೆಹ್ವಾಗ್ - ಯುವರಾಜ್ ಸಿಂಗ್ ಕ್ಯಾಪ್ಟನ್ಸಿ ರೇಸ್ನಲ್ಲಿದ್ದರು.
ಸಚಿನ್ ಶಿಫಾರಸ್ಸಿನಂತೆ ಬಿಸಿಸಿಐ (BCCI) 2007ರ ಟಿ20 ವಿಶ್ವಕಪ್ ಟೂರ್ನಿಗೆ ಧೋನಿಯನ್ನು ನಾಯಕನನ್ನಾಗಿ ನೇಮಿಸಿತು. ಅಲ್ಲಿಂದ ಧೋನಿ ಹಿಂತಿರುಗಿ ನೋಡಲೇ ಇಲ್ಲ. ಭಾರತ ತಂಡವನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಮಾರ್ಚ್ 22ರಂದು ಜಿಯೋ ಸಿನಿಮಾದೊಂದಿಗೆ ಮಾತನಾಡಿದ ಸಚಿನ್, ಧೋನಿಗೆ ನಾಯಕತ್ವ ಸಿಕ್ಕಿದ್ದೇಗೆಂದು ವಿವರಿಸಿದ್ದಾರೆ.
ಧೋನಿ ಆಲೋಚನೆಗಳು ಅದ್ಭುತವಾಗಿದ್ದವು ಎಂದ ಸಚಿನ್
'2007ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್ ಅವರು ಭಾರತ ತಂಡಕ್ಕೆ ನಾಯಕನಾಗುವಂತೆ ನನ್ನನ್ನು ಕೇಳಿದರು. ನಾನು ಫಿಟ್ನೆಸ್ ಸಮಸ್ಯೆ ಸರಿ ಇಲ್ಲ ಎಂದು ಹೇಳಿದ್ದೆ. ಅಂದು ಎಂಎಸ್ ಧೋನಿ ಅವರ ಅವಲೋಕನ ತುಂಬಾ ಚೆನ್ನಾಗಿತ್ತು. ಅವರ ಆಲೋಚನೆ, ತಂತ್ರಗಳು ಅದ್ಭುತವಾಗಿದ್ದವು. ನಾನು ಅವರೊಂದಿಗೆ ಸ್ಲಿಪ್ನಲ್ಲಿದ್ದಾಗ ಈ ಎಲ್ಲ ಗಮನಿಸಿದ್ದೆ. ಹಾಗಾಗಿ ಧೋನಿಯನ್ನು ಶಿಫಾರಸ್ಸು ಮಾಡಿದ್ದೆ' ಎಂದು ಬಹಿರಂಗಪಡಿಸಿದ್ದಾರೆ.
'ಧೋನಿಯೊಂದಿಗೆ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ನಾನು ಅವರೊಂದಿಗೆ ಹಲವಾರು ವಿಷಯಗಳ ಕುರಿತು ಸಂಭಾಷಣೆ ನಡೆಸಿದ್ದೇನೆ. ಧೋನಿ ಅವರನ್ನು ಏನೇ ಕೇಳಿದ್ದರೂ ಅವರು ಕೊಡುವ ಉತ್ತರಗಳು ಸಮತೋಲಿತವಾಗಿರುತ್ತಿದ್ದವು. ಅರ್ಥಗರ್ಭಿತವಾಗಿದ್ದವು. ಸಹಜ ಸ್ವಭಾವ ಹೊಂದಿದ್ದರು. ಯೋಚನಾ ಶಕ್ತಿ ಅಮೋಘವಾಗಿತ್ತು. ಗೇಮ್ ಪ್ಲಾನ್ಗಳ ಕುರಿತು ಅವರೇ ವಿವರಿಸುತ್ತಿದ್ದರು' ಎಂದು ಸಚಿನ್, ಧೋನಿ ಜೊತೆಗಿನ ಆರಂಭಿಕ ದಿನಗಳ ಕುರಿತು ವಿವರಿಸಿದ್ದಾರೆ.
ಧೋನಿ ಬಳಿಕ ವಿರಾಟ್ಗೆ ನಾಯಕತ್ವ
2007ರ ಅಂತ್ಯದ ವೇಳೆಗೆ ಧೋನಿ ಭಾರತದ ಪೂರ್ಣಾವಧಿಯ ವೈಟ್-ಬಾಲ್ ನಾಯಕರಾದರು. 2008ರಲ್ಲಿ ಅನಿಲ್ ಕುಂಬ್ಳೆ ಅವರ ನಂತರ ಟೆಸ್ಟ್ ನಾಯಕರಾಗಿ ನೇಮಕಗೊಂಡರು. ನಾಯಕರಾಗಿ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದ ಮಾಹಿ,ಅವರು 2014 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಆಘಾತಕಾರಿ ನಿವೃತ್ತಿ ಘೋಷಿಸಿದರು. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಬಳಿಕ ಧೋನಿ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ 2014ರಲ್ಲಿ ನೇಮಕಗೊಂಡರು. 2017ರ ಜನವರಿಯಲ್ಲಿ ಕೊಹ್ಲಿಗೆ ವೈಟ್-ಬಾಲ್ ನಾಯಕತ್ವವನ್ನೂ ಧೋನಿ ಹಸ್ತಾಂತರಿಸಿದರು. ಧೋನಿ, 2020ರ ಆಗಸ್ಟ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಈಗ ಕೇವಲ ಐಪಿಎಲ್ ಆಡುತ್ತಿರುವ ಮಾಹಿ, ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದರು.