logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗೌತಮ್ ಗಂಭೀರ್ ಕೈಯಲ್ಲಿ ಸಂಜು ಭವಿಷ್ಯ; ಇಂದು ನಿರ್ಧಾರವಾಗಲಿದೆ ಸ್ಯಾಮ್ಸನ್ ವೃತ್ತಿಜೀವನ!

ಗೌತಮ್ ಗಂಭೀರ್ ಕೈಯಲ್ಲಿ ಸಂಜು ಭವಿಷ್ಯ; ಇಂದು ನಿರ್ಧಾರವಾಗಲಿದೆ ಸ್ಯಾಮ್ಸನ್ ವೃತ್ತಿಜೀವನ!

HT Kannada Desk HT Kannada

Jul 30, 2024 03:34 PM IST

google News

ಗೌತಮ್ ಗಂಭೀರ್ ಕೈಯಲ್ಲಿ ಸಂಜು ಭವಿಷ್ಯ; ಇಂದು ನಿರ್ಧಾರವಾಗಲಿದೆ ಸ್ಯಾಮ್ಸನ್ ವೃತ್ತಿಜೀವನ!

    • ಸಂಜು ಸ್ಯಾಮ್ಸನ್‌ ಟೀಮ್ ಇಂಡಿಯಾಕ್ಕೆ ಆಯ್ಕೆ ಆದಷ್ಟು ಸಮಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು. ಆಯ್ಕೆದಾರರು ಅವರನ್ನು ಬ್ಯಾಕಪ್ ಆಗಿ ತಂಡದಲ್ಲಿ ಸೇರಿಸಿಕೊಳ್ಳುತ್ತಾರಷ್ಟೆ. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಭಾರತಕ್ಕಾಗಿ ಕೇವಲ 45 ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು.
ಗೌತಮ್ ಗಂಭೀರ್ ಕೈಯಲ್ಲಿ ಸಂಜು ಭವಿಷ್ಯ; ಇಂದು ನಿರ್ಧಾರವಾಗಲಿದೆ ಸ್ಯಾಮ್ಸನ್ ವೃತ್ತಿಜೀವನ!
ಗೌತಮ್ ಗಂಭೀರ್ ಕೈಯಲ್ಲಿ ಸಂಜು ಭವಿಷ್ಯ; ಇಂದು ನಿರ್ಧಾರವಾಗಲಿದೆ ಸ್ಯಾಮ್ಸನ್ ವೃತ್ತಿಜೀವನ! (PTI)

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಜುಲೈ 30ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಈಗಾಗಲೇ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಿದ್ದರೂ ಹೊಸ ಕೋಚ್ ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ಕೊನೆಯ ಪಂದ್ಯವನ್ನು ಯಾವುದೇ ರೀತಿಯಲ್ಲಿ ಸಡಿಲವಾಗಿ ಬಿಡಲು ಬಯಸುವುದಿಲ್ಲ. ಹೀಗಾಗಿ ಗಂಭೀರ್ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಸಂಜು ಸ್ಯಾಮ್ಸನ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಸಂಜು ಸ್ಯಾಮ್ಸನ್ ಭವಿಷ್ಯ ಇಂದು ನಿರ್ಧಾರ?

ಈ ಸರಣಿಯ ಮೊದಲ ಪಂದ್ಯದಲ್ಲಿ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಪಂದ್ಯದಿಂದ ಬೆನ್ನು ನೋವಿನ ಕಾರಣ ಶುಭ್​ಮನ್ ಗಿಲ್ ಹೊರಗುಳಿದ ಪರಿಣಾಮ ಅವರ ಬದಲಿಗೆ ಪ್ಲೇಯಿಂಗ್ 11ನಲ್ಲಿ ಸಂಜು ಸ್ಥಾನ ಗಿಟ್ಟಿಸಿಕೊಂಡರು. ಇಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಸಂಜು ದೊಡ್ಡ ಅವಕಾಶವನ್ನು ಹೊಂದಿದ್ದರು. ಆದರೆ, ಮೊದಲ ಎಸೆತದಲ್ಲಿಯೇ ಔಟಾಗಿ ನಿರಾಸೆ ಮೂಡಿಸಿದರು. ಇದೀಗ ಮತ್ತೊಮ್ಮೆ ಅವರ ಸ್ಥಾನ ಅಪಾಯದಲ್ಲಿದೆ.

ಮೂರನೇ ಪಂದ್ಯಕ್ಕೂ ಮುನ್ನ ಗಿಲ್ ಚೇತರಿಸಿಕೊಂಡರೆ ಸಂಜು ಸ್ಯಾಮ್ಸನ್ಸ್‌ಗೆ ದೊಡ್ಡ ಹಿನ್ನಡೆಯಾಗಲಿದೆ. ಕಳೆದ ಪಂದ್ಯದಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಅವರನ್ನು ಕೈಬಿಟ್ಟರೆ, ಭವಿಷ್ಯದಲ್ಲಿ ಅವರು ತಂಡಕ್ಕೆ ಮರಳುವುದು ತುಂಬಾ ಕಷ್ಟ. ವಾಸ್ತವವಾಗಿ, ರಿಷಭ್ ಪಂತ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಿರುವಾಗ ಸಂಜುಗೆ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಸಿಗುವುದು ಕಷ್ಟ. ಇದೀಗ ಕೋಚ್ ಗೌತಮ್ ಗಂಭೀರ್ ಕೊನೆಯ ಪಂದ್ಯದಲ್ಲಿ ಸಂಜುಗೆ ಮತ್ತೊಮ್ಮೆ ಸಾಬೀತುಪಡಿಸುವ ಅವಕಾಶ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ 5 ಇನಿಂಗ್ಸ್‌ಗಳಲ್ಲಿ ಸಂಜು ಆಟ

ಸಂಜು ಸ್ಯಾಮ್ಸನ್ ಪ್ರತಿ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅವರ ಕೊನೆಯ 5 ಟಿ20I ಇನ್ನಿಂಗ್ಸ್‌ಗಳ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ ಕೇವಲ 1 ಅರ್ಧಶತಕವನ್ನು ಗಳಿಸಿದ್ದಾರೆ. ಈ ಅರ್ಧಶತಕ ಜಿಂಬಾಬ್ವೆ ಪ್ರವಾಸದಲ್ಲಿ ಬಂದಿತ್ತು. ಇದಲ್ಲದೇ ಈ 5 ಇನ್ನಿಂಗ್ಸ್‌ಗಳಲ್ಲಿ 2 ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಪರ ಅವರು ಇದುವರೆಗೆ 29 ಟಿ20 ಪಂದ್ಯಗಳಲ್ಲಿ 20.18ರ ಸರಾಸರಿಯಲ್ಲಿ 444 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್‌​ಗೆ ಸರಣಿಯ ಕೊನೆಯ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಏಕದಿನ ಕ್ರಿಕೆಟ್‌​ನಿಂದಲೂ ಔಟ್

ಸಂಜು ಸ್ಯಾಮ್ಸನ್ ಅವರ ಏಕದಿನ ವೃತ್ತಿ ಜೀವನ ಕೂಡ ಬಹುತೇಕ ಕೊನೆಗೊಂಡಿದೆ. ಇವರು ಭಾರತ ಪರ ಓಡಿಐ ಪಂದ್ಯಗಳನ್ನು ಆಡಿ ಸುಮರು 7 ತಿಂಗಳು ಕಳೆದಿವೆ. ಮುಂದಿನ ದಿನಗಳಲ್ಲಿ ಇವರಿಗೆ ಏಕದಿನದಲ್ಲಿ ಅವಕಾಶ ಸಿಗುವುದು ಕನಸಿನ ಮಾತು. ಲಂಕಾ ವಿರುದ್ಧದ ಏಕದಿನ ಸರಣಿಗೆ ಕೂಡ ಇವರು ಆಯ್ಕೆ ಆಗಿಲ್ಲ. ಬಲಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರನ್ನು ಈ ಸರಣಿಗೆ ಸೇರಿಸಲಾಗಿದೆ. ಇದೀಗ ರಾಹುಲ್ ವಾಪಸಾತಿಯಿಂದಾಗಿ ಸ್ಯಾಮ್ಸನ್ ಏಕದಿನ ಭವಿಷ್ಯ ಕೂಡ ಕೊನೆಗೊಂಡಂತಾಗಿದೆ. ರಾಹುಲ್ ಹೊರತುಪಡಿಸಿ, ಟೀಮ್ ಇಂಡಿಯಾದ ಆಯ್ಕೆಗಾರರು ರಿಷಬ್ ಪಂತ್ ಅವರನ್ನು ಕಾಯಂ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡುತ್ತಾರೆ.

ಸಂಜು ಸ್ಯಾಮ್ಸನ್‌ ಟೀಮ್ ಇಂಡಿಯಾಕ್ಕೆ ಆಯ್ಕೆ ಆದಷ್ಟು ಸಮಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು. ಆಯ್ಕೆದಾರರು ಅವರನ್ನು ಬ್ಯಾಕಪ್ ಆಗಿ ತಂಡದಲ್ಲಿ ಸೇರಿಸಿಕೊಳ್ಳುತ್ತಾರಷ್ಟೆ. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಭಾರತಕ್ಕಾಗಿ ಕೇವಲ 45 ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು. ಈ ಅವಧಿಯಲ್ಲಿ, ಸಂಜು ಸ್ಯಾಮ್ಸನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಸಿಕ್ಕಾಗಲೆಲ್ಲಾ ಹೆಚ್ಚು ವಿಫಲರಾದರು. ಹೀಗಾಗಿ ಇಂದಿನ ಲಂಕಾ ವಿರುದ್ಧದ ಮೂರನೇ ಟಿ20 ಯಲ್ಲಿ ಸಂಜುಗೆ ಅವಕಾಶ ಸಿಕ್ಕಿ ಮಿಂಚಿದರೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು. ಇಲ್ಲವಾದಲ್ಲಿ ಇವರ ಕ್ರಿಕೆಟ್ ವೃತ್ತಿ ಬದುಕು ಬಹುತೇಕ ಅಂತ್ಯಗೊಂಡಂತೆ.

ವರದಿ: ವಿನಯ್ ಭಟ್.

ಇನ್ನಷ್ಟು ಕ್ರಿಕೆಟ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಭಾರತ vs ಶ್ರೀಲಂಕಾ 3ನೇ ಟಿ20; ರಿಯಾನ್‌ ಪರಾಗ್-ಸಿರಾಜ್‌ ಔಟ್;‌ ಹೊಸಬರಿಗೆ ಅವಕಾಶ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ