logo
ಕನ್ನಡ ಸುದ್ದಿ  /  ಕ್ರಿಕೆಟ್  /  10 ವರ್ಷ ಕೆಕೆಆರ್ ಜೊತೆಗಿರುವಂತೆ ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್ ನೀಡಿದ್ರಾ ಶಾರುಖ್ ಖಾನ್; ವರದಿ ಹೇಳಿದ್ದೇನು?

10 ವರ್ಷ ಕೆಕೆಆರ್ ಜೊತೆಗಿರುವಂತೆ ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್ ನೀಡಿದ್ರಾ ಶಾರುಖ್ ಖಾನ್; ವರದಿ ಹೇಳಿದ್ದೇನು?

Jayaraj HT Kannada

May 26, 2024 01:40 PM IST

google News

ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್ ನೀಡಿದ್ರಾ ಶಾರುಖ್ ಖಾನ್

    • ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮಾಜಿ ಆಟಗಾರ ಗೌತಮ್ ಗಂಭೀರ್ ಆಸಕ್ತಿ ತೋರಿಸಿದ್ದಾರೆ. ಆದರೆ, ಕೆಕೆಆರ್ ಫ್ರಾಂಚೈಸಿ ಸಹ ಮಾಲೀಕ ಶಾರುಖ್ ಖಾನ್ ಇದಕ್ಕೆ ಒಪ್ಪಿಲ್ಲ. ಅಲ್ಲದೆ ತಂಡದ ಮೆಂಟರ್‌ಗೆ ಖಾಲಿ ಚೆಕ್‌ ಆಫರ್‌ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್ ನೀಡಿದ್ರಾ ಶಾರುಖ್ ಖಾನ್
ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್ ನೀಡಿದ್ರಾ ಶಾರುಖ್ ಖಾನ್

ಭಾರತ ಪುರುಷರ ಕ್ರಿಕೆಟ್‌ ತಂಡದ ಮುಂದಿನ ಹೆಡ್‌ ಕೋಚ್‌ ಯಾರಾಗಲಿದ್ದಾರೆ ಎಂಬುದು ಸದ್ಯದ ಚರ್ಚೆಯ ವಿಷಯ. ಬಿಸಿಸಿಐ ಈಗಾಗಲೇ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರರಾದ ರಿಕಿ ಪಾಂಟಿಂಗ್ ಹಾಗೂ ಜಸ್ಟಿನ್ ಲ್ಯಾಂಗರ್ ಅವರನ್ನು ಕ್ರಿಕೆಟ್‌ ಮಂಡಳಿ ಸಂಪರ್ಕಿಸಿದೆ ಎಂಬ ವರದಿ ಒಂದಡೆಯಾದರೆ, ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಭಾರತದ ಮಾಜಿ ಆಟಗಾರ ಹಾಗೂ ಕೆಕೆಆರ್‌ ತಂಡದ ಮೆಂಟರ್‌ ಗೌತಮ್ ಗಂಭೀರ್ ಅವರು ಭಾರತೀಯ ಪುರುಷರ ತಂಡದ ಮುಂದಿನ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗುವ ಸಂಭಾವ್ಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಇದು ಇನ್ನೂ ಖಚಿತವಾಗಿಲ್ಲ.

ಟೀಮ್‌ ಇಂಡಿಯಾ ಹಾಲಿ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ 2024ರ ಟಿ20 ವಿಶ್ವಕಪ್ ಬಳಿಕ ಕೊನೆಗೊಳ್ಳಲಿದೆ. ಮತ್ತೆ ಇದೇ ಹುದ್ದೆಯಲ್ಲಿ ಮುಂದುವರೆಯಲು ದಿ ವಾಲ್‌ ಸಿದ್ಧವಾಗಿಲ್ಲ. ಹೀಗಾಗಿ ಬಿಸಿಸಿಐ ಈ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಜಾಗತಿಕ ಕ್ರಿಕೆಟ್‌ನಲ್ಲೇ ಅತ್ಯುನ್ನತ ಹಾಗೂ ಜವಾಬ್ದಾರಿಯುತ ಹುದ್ದೆಗೆ ಈವರೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ ಎಂಬುದರ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಮೇ 27ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೇ 26ರಂದು ಐಪಿಎಲ್‌ ಫೈನಲ್‌ ನಡೆಯಲಿದ್ದು, ಅದಾದ ಒಂದು ದಿನದೊಳಗೆ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಮುಂದಿನ ಕೋಚ್‌ ಆಗುವವರ ರೇಸ್‌ನಲ್ಲಿ ಎಷ್ಟೇ ಜನರಿದ್ದರೂ, ಗೌತಮ್ ಗಂಭೀರ್ ಈ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸಾಧ್ಯತೆಯಿದೆ. ಸಂಭಾವ್ಯರ ಹೆಸರುಗಳಲ್ಲಿ ಭಾರತದ ಏಕೈಕ ಅಭ್ಯರ್ಥಿ ಇವರು. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ವಿದೇಶಿ ಕೋಚ್‌ ಬದಲಿಗೆ ಭಾರತೀಯರನ್ನೇ ನೆಚ್ಚಿಕೊಂಡಿದೆ ಎಂದು ಶಾ ಈ ಹಿಂದೆಯೇ ಸುಳಿವು ನೀಡಿದ್ದರು. ಹೀಗಾಗಿ ಗೌತಿ ಆಯ್ಕೆ ಸಾಧ್ಯತೆ ಹೆಚ್ಚಿದೆ.

ಗಂಭೀರ್ ಐಪಿಎಲ್ ತಂಡಗಳ ಮಾರ್ಗದರ್ಶಕರಾಗಿ ಅದ್ಭುತ ದಾಖಲೆ ಹೊಂದಿದ್ದಾರೆ. 2022ರಲ್ಲಿ, ಲಕ್ನೋ ಸೂಪರ್ ಜೈಂಟ್ಸ್‌ ಮೆಂಟರ್‌ ಆಗಿ ಬಂದ ಗೌತಿ, ತಮ್ಮ ಮಾರ್ಗದರ್ಶನದಲ್ಲಿ ತಂಡವನ್ನು ಪ್ಲೇಆಫ್‌ ಹಂತಕ್ಕೆ ಕೊಂಡೊಯ್ದರು. 2024ರ ಆವೃತ್ತಿಗೂ ಮುಂಚಿತವಾಗಿ, ತಮ್ಮ ಹಳೆಯ ತಂಡ ಕೋಲ್ಕತಾ ನೈಟ್ ರೈಡರ್ಸ್‌ ಮೆಂಟರ್‌ ಆಗಿ ಮರಳಿದರು. ಇದೀಗ ಕೆಕೆಆರ್‌ ತಂಡ ಫೈನಲ್‌ ಪಂದ್ಯ ಆಡುತ್ತಿದ್ದು, ಕಪ್‌ ಗೆಲ್ಲುವ ಫೇವರೆಟ್‌ ಆಗಿದೆ.

ಬಿಸಿಸಿಐ ಅಧಿಕಾರಿಗಳೊಂದಿಗೆ ಮೀಟಿಂಗ್

ದೈನಿಕ್ ಜಾಗರಣ್ ವರದಿಯ ಪ್ರಕಾರ, ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಕುರಿತಾಗಿ ಗಂಭೀರ್ ಅವರನ್ನು ಬಿಸಿಸಿಐ ಸಂಪರ್ಕಿಸಿದೆ. ಇದಕ್ಕೆ 2011ರ ಏಕದಿನ ವಿಶ್ವಕಪ್ ವಿಜೇತ ಆಟಗಾರ ತೀವ್ರ ಆಸಕ್ತಿ ತೋರಿದ್ದಾರೆ. ಕೆಕೆಆರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯದ ನಡುವೆ, ಅವರು ಚೆನ್ನೈನಲ್ಲಿ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಗಂಭೀರ್ ಇನ್ನೂ ಅರ್ಜಿ ಸಲ್ಲಿಸಿಲ್ಲ. ಒಂದು ವೇಳೆ ಅವರು ಅರ್ಜಿ ಸಲ್ಲಿಸಿದರೆ, ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ ಎಂದು ವರದಿ ಹೇಳಿದೆ.

ಖಾಲಿ ಚೆಕ್‌ ಕೊಟ್ಟ ಶಾರುಖ್‌ ಖಾನ್

ಬಿಸಿಸಿಐ ಪ್ರಮುಖ ಹುದ್ದೆಗೆ ಅರ್ಜಿ ಸಲ್ಲಿಸುವ ವಿಷಯದಲ್ಲಿ ಗಂಭೀರ್ ತುಸು ಅನಿಶ್ಚಿತ ಮನಸ್ಥಿತಿಯಲ್ಲಿದ್ದಾರೆ. ಏಕೆಂದರೆ ಈ ಕುರಿತು ಅವರು ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಅವರೊಂದಿಗೆ ಮಾತನಾಡಬೇಕಾಗಿದೆ. ಈಗಾಗಲೇ ಕೋಲ್ಕತ್ತಾಗೆ ಮೆಂಟರ್‌ ಆಗಿ ಮರಳಿ ತಂಡದಲ್ಲಿ ಮ್ಯಾಜಿಕ್‌ ಮಾಡಿರುವ ಗಂಭಿರ್‌ ಅವರನ್ನು ಬಿಟ್ಟುಕೊಡಲು ಕೆಕೆಆರ್‌ ಸಹಮಾಲೀಕ ಶಾರುಖ್ ಖಾನ್‌ ಒಪ್ಪುವ ಸಾಧ್ಯತೆ ಎಳ್ಳಷ್ಟೂ ಇಲ್ಲ.‌ ಹೀಗಾಗಿ ಮುಂದಿನ 10 ವರ್ಷಗಳ ಕಾಲ ತಂಡವನ್ನು ನಿರ್ವಹಿಸುವಂತೆ ಬಾಲಿವುಡ್ ನಟ ಗಂಭೀರ್‌ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಂಭಿರ್‌ ಕೈಗೆ ಖಾಲಿ ಚೆಕ್‌ ಕೊಟ್ಟು, ಅವರಿಗೆ ಬೇಕಾದಷ್ಟು ಹಣ ಪಾವತಿಸಲು ಸಿದ್ಧರಿರುವುದಾಗಿ ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

(ವರದಿ ಕುರಿತು ಹಿಂದೂಸ್ಥಾನ್‌ ಟೈಮ್ಸ್‌ ಖುದ್ದು ಪರೀಶಿಲನೆ ನಡೆಸಲು ಸಾಧ್ಯವಾಗಿಲ್ಲ. ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ.)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ