ಬುಮ್ರಾ ನಾಯಕ, ರೋಹಿತ್ ಅಲಭ್ಯ, ಗಿಲ್ ಔಟ್; ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
Nov 17, 2024 02:56 PM IST
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
- India playing XI vs Australia: ಇಂಟ್ರಾ ಸ್ಕ್ವ್ಯಾಡ್ ಪಂದ್ಯದಲ್ಲಿ ಭಾರತ ತಂಡದ ನಾಲ್ವರು ಗಾಯಗೊಂಡಿದ್ದು ಟೀಮ್ ಮ್ಯಾನೇಜ್ಮೆಂಟ್ ತಲೆನೋವು ಹೆಚ್ಚಿಸಿದೆ. ಅಲ್ಲದೆ, ಪ್ಲೇಯಿಂಗ್ 11 ಆಯ್ಕೆಯೂ ಗೊಂದಲ ಮೂಡಿಸಿದೆ. ಆದರೆ ರೋಹಿತ್ ಶರ್ಮಾ ಮೊದಲ ಟೆಸ್ಟ್ ಆಡುವುದು ಅನುಮಾನ ಎಂದು ಹೇಳಲಾಗಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ನಾಯಕನಾಗಲಿದ್ದಾರೆ.
ಸತತ ಐದನೇ ಬಾರಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy 2024-2025) ಗೆಲ್ಲುವ ಉತ್ಸಾಹದಲ್ಲಿರುವ ಭಾರತೀಯ ಕ್ರಿಕೆಟ್ ತಂಡವು ನವೆಂಬರ್ 22ರಿಂದ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೈದಾನಕ್ಕಿಳಿಯಲಿದೆ. ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಐತಿಹಾಸಿಕ ಸೋತಿರುವ ಟೀಮ್ ಇಂಡಿಯಾ ಆಸೀಸ್ ನೆಲದಲ್ಲಿ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದೆ. ಈಗಾಗಲೇ 18 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ, ಇಂಟ್ರಾಸ್ಕ್ವ್ಯಾಡ್ ಪಂದ್ಯದಲ್ಲಿ ಭಾರತ ತಂಡದ ನಾಲ್ವರು ಗಾಯಗೊಂಡಿದ್ದು ಟೀಮ್ ಮ್ಯಾನೇಜ್ಮೆಂಟ್ ತಲೆನೋವು ಹೆಚ್ಚಿಸಿದೆ. ಅಲ್ಲದೆ, ಪ್ಲೇಯಿಂಗ್ 11 ಆಯ್ಕೆಯೂ ಗೊಂದಲ ಮೂಡಿಸಿದೆ.
ರೋಹಿತ್ ಅಲಭ್ಯತೆಯಲ್ಲಿ ಆರಂಭಿಕರ್ಯಾರು?
ಗಂಡು ಮಗುವಿಗೆ ತಂದೆಯಾಗಿರುವ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎನ್ನುವ ವರದಿ ಇದೆ. ಅಲ್ಲದೆ, ಪತ್ನಿ ಜೊತೆ ಸಮಯ ಕಳೆಯುವ ಸಲುವಾಗಿ ಮೊದಲ ಟೆಸ್ಟ್ ಆಡದಿರಲು ನಿರ್ಧರಿಸಿದ್ದಾರೆ ಎಂದೂ ವರದಿಯಾಗಿದೆ. ರೋಹಿತ್ ಇನ್ನೂ ಆಸೀಸ್ಗೆ ಪ್ರಯಾಣಿಸಿಲ್ಲ. ಎಂದು ಪ್ರಯಾಣಿಸುತ್ತಾರೆ ಎಂಬುದರ ಕುರಿತು ಸ್ಪಷ್ಟನೆ ಇಲ್ಲ. ಅವರ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಮೊದಲ ಟೆಸ್ಟ್ ಆಡದಿದ್ದರೆ ಯಶಸ್ವಿ ಜೈಸ್ವಾಲ್ ಜೊತೆಗೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಗಾಯಗೊಂಡಿದ್ದ ರಾಹುಲ್, ಒಂದು ದಿನ ವಿಶ್ರಾಂತಿ ಪಡೆದ ಬಳಿಕ ಚೇತರಿಸಿಕೊಂಡಿದ್ದಾರೆ. ಈಗಾಗಲೇ ಅಭ್ಯಾಸ ಕೂಡ ಆರಂಭಿಸಿದ್ದಾರೆ.
ಮತ್ತೊಂದೆಡೆ, ಫೀಲ್ಡಿಂಗ್ ವೇಳೆ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಹೆಬ್ಬೆರಳು ಮುರಿತಕ್ಕೆ ಒಳಗಾದ ಕಾರಣ ಇಂಟ್ರಾ ಸ್ಕ್ವಾಡ್ ಮ್ಯಾಚ್ ಸಿಮ್ಯುಲೇಶನ್‌ನಲ್ಲಿ ಭಾರತಕ್ಕೆ ದೊಡ್ಡ ಹೊಡೆತ ಬಿತ್ತು. ಗಾಯದ ಆಗದೇ ಇರದಿದ್ದರೆ ಗಿಲ್ ಆರಂಭಿಕನಾಗುತ್ತಿದ್ದರು. ಆದರೆ, ಅವರು ಸಹ ಇಂಜುರಿಯಾಗಿದ್ದು, ಮೊದಲ ಟೆಸ್ಟ್ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ರಾಹುಲ್ ಓಪನರ್ ಆಗಿ ಕಣಕ್ಕಿಳಿಯುವುದು ಖಚಿತ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಮೂರನೇ ಕ್ರಮಾಂಕಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಜೈಸ್ವಾಲ್ ಅವರೊಂದಿಗೆ ಬ್ಯಾಟಿಂಗ್ ತೆರೆದರೂ ಅಚ್ಚರಿ ಇಲ್ಲ. ಒಂದೊಮ್ಮೆ ಆರಂಭಿಕನಾದರೆ ರಾಹುಲ್ 3ನೇ ಸ್ಥಾನದಲ್ಲಿ ಆಡಬಹುದು.
ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಯಾರು?
ಇನ್ನು ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸಲಿದ್ದು, ಕಳಪೆ ಫಾರ್ಮ್ನಿಂದ ಹೊರಬರುವ ನಿರೀಕ್ಷೆ ಇದೆ. ಭಾರತದ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಬ್ಯಾಟರ್ ಮತ್ತು 5ನೇ ಕ್ರಮಾಂಕದ ಬ್ಯಾಟರ್ ಆಗಿ ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತ. ಧ್ರುವ್ ಜುರೆಲ್ ಅವರು ಎಂಸಿಜಿಯಲ್ಲಿ ಭಾರತ-ಎ ಮತ್ತು ಆಸ್ಟ್ರೇಲಿಯಾ-ಎ ನಡುವಿನ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ, ಸತತ ವೈಫಲ್ಯ ಅನುಭವಿಸಿದ ಸರ್ಫರಾಜ್ ಖಾನ್ ಬದಲಿಗೆ ಜುರೆಲ್ ಆಡಿಸುವ ಲೆಕ್ಕಾಚಾರ ಇದೆ. ಪರ್ತ್‌ನಲ್ಲಿನ ವೇಗದ ಮತ್ತು ಬೌನ್ಸಿ ಟ್ರ್ಯಾಕ್ಗಳು ತಂಡಕ್ಕೆ ಕೇವಲ ಒಬ್ಬ ಸ್ಪಿನ್ನರ್ ಅನ್ನು ಕಣಕ್ಕಿಳಿಸಲು ಅನುವು ಮಾಡಿಕೊಡುತ್ತದೆ. ಇದರರ್ಥ ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್ ಬದಲಿಗೆ ರವೀಂದ್ರ ಜಡೇಜಾ ಆಡಬಹುದು.
ಬೌಲರ್ಗಳಲ್ಲಿ ಯಾರಿಗೆ ಅವಕಾಶ?
ಉಳಿದಂತೆ ನಾಲ್ವರು ವೇಗಿಗಳನ್ನು ಆಡಿಸುವುದು ದಟ್ಟವಾಗಿದೆ. ನಾಯಕ ಬುಮ್ರಾ ಜತೆಗೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಇನ್ನೊಂದು ಸ್ಥಾನಕ್ಕೆ ಹಲವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅಥವಾ ವೇಗಿ ಹರ್ಷಿತ್ ರಾಣಾ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇಬ್ಬರಲ್ಲಿ ಯಾರೇ ಅವಕಾಶ ಪಡೆದರೂ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ನಿತೀಶ್ ಅಪ್ಪಟ ಆಲ್‌ರೌಂಡರ್ ಆಗಿದ್ದರೆ, ಹರ್ಷಿತ್ ಮೊದಲ ದರ್ಜೆಯ ಬ್ಯಾಟಿಂಗ್‌ನಲ್ಲಿ 42.63 ಸರಾಸರಿ ಹೊಂದಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಮರ್ಥರಾಗಿರುವ ನಿತೀಶ್ ಆಯ್ಕೆಗೆ ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ 11
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಅಭಿಮನ್ಯು ಈಶ್ವರನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ನಿತೀಶ್ ರೆಡ್ಡಿ/ಹರ್ಷಿತ್ ರಾಣಾ.