logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಿಷಭ್​ ಪಂತ್​​ರನ್ನು ನೆನಪಿಸಿದ ಶ್ರೀಲಂಕಾ ಕ್ರಿಕೆಟಿಗನ ಭೀಕರ ಅಪಘಾತ; ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಿಂದಿ

ರಿಷಭ್​ ಪಂತ್​​ರನ್ನು ನೆನಪಿಸಿದ ಶ್ರೀಲಂಕಾ ಕ್ರಿಕೆಟಿಗನ ಭೀಕರ ಅಪಘಾತ; ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಿಂದಿ

Prasanna Kumar P N HT Kannada

Mar 14, 2024 06:03 PM IST

google News

ರಿಷಭ್​ ಪಂತ್​​ರನ್ನು ನೆನಪಿಸಿದ ಶ್ರೀಲಂಕಾ ಕ್ರಿಕೆಟಿಗನ ಭೀಕರ ಅಪಘಾತ

    • Lahiru Thirimanne: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಹಿರು ತಿರಿಮನ್ನೆ ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ 2022ರಲ್ಲಿ ಅಪಘಾತಕ್ಕೆ ಒಳಗಾಗಿದ್ದ ರಿಷಭ್ ಪಂತ್​ ಅವರನ್ನು ನೆನಪಿಸಿದೆ.
ರಿಷಭ್​ ಪಂತ್​​ರನ್ನು ನೆನಪಿಸಿದ ಶ್ರೀಲಂಕಾ ಕ್ರಿಕೆಟಿಗನ ಭೀಕರ ಅಪಘಾತ
ರಿಷಭ್​ ಪಂತ್​​ರನ್ನು ನೆನಪಿಸಿದ ಶ್ರೀಲಂಕಾ ಕ್ರಿಕೆಟಿಗನ ಭೀಕರ ಅಪಘಾತ

2023ರಲ್ಲಿ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದ ಶ್ರೀಲಂಕಾದ ಕ್ರಿಕೆಟಿಗ ಲಹಿರು ತಿರಿಮನ್ನೆ (Lahiru Thirimanne Car Accident) ಅವರು ಗುರುವಾರ (ಮಾರ್ಚ್ 14ರಂದು) ಭೀಕರ ಅಪಘಾತಕ್ಕೆ ಒಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀಲಂಕಾ ನಗರದ ಅನುರಾಧಪುರದ ತಿರಪನ್ನೆ ಎಂಬ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಿರಿಮನ್ನೆ ಇದ್ದ ಕಾರು ತೀವ್ರ ಜಖಂಗೊಂಡಿದೆ.

ಅಪಘಾತ ಘಟನೆ ನಡೆದ ಸ್ಥಳ ಮತ್ತು ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆ ಚಿತ್ರಗಳನ್ನು ನೋಡಿದರೆ ಅಪಘಾತ ಎಷ್ಟು ಭೀಕರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅಪಘಾತ ಸಂಭವಿಸಿದ ತಕ್ಷಣವೇ ಅಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್ ಕ್ರಿಕೆಟಿಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗುತ್ತಿದ್ದ ತಿರಿಮನ್ನೆ

ಮಾಜಿ ಕ್ರಿಕೆಟಿಗ ತಿರಿಮನ್ನೆ ಅವರು ತಮ್ಮ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗುತ್ತಿದ್ದ ಅವಧಿಯಲ್ಲಿ ತಿರಪನ್ನೆ ಎಂಬ ಸ್ಥಳದಲ್ಲಿ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರು ಹೊಡೆದ ರಭಸಕ್ಕೆ ಲಾರಿ ಸಹ ಪಲ್ಟಿ ಹೊಡೆದಿದೆ. ಇದರ ನಡುವೆಯೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಹಾಗೂ ಕೆಲವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದ ಲಹಿರು ತಿರಿಮನ್ನೆ ಅವರು ಲೀಗ್​ ಕ್ರಿಕೆಟ್​​ನಲ್ಲಿ ಮುಂದುವರೆದಿದ್ದರು. 2010ರಲ್ಲಿ ಶ್ರೀಲಂಕಾರ ಪರ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ತಿರಿಮನ್ನೆ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ರಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಪರ ಆಡುತ್ತಿದ್ದಾರೆ. ತಿರಿಮನ್ನೆ ಅವರ ಕಾರು ಅಪಘಾತ ರಿಷಭ್ ಪಂತ್​ ಅವರನ್ನು ನೆನಪಿಸಿದೆ.

ಲಹಿರು ತಿರಿಮನ್ನೆ ವೃತ್ತಿಜೀವನ

ಲಹಿರು ತಿರಿಮನೆ ವಿಶ್ವಕಪ್ 2023ರ ಮೊದಲು ಅಂತಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಲಂಕಾ ಪರ ಕೊನೆಯದಾಗಿ 2022ರಲ್ಲಿ ಕಾಣಿಸಿಕೊಂಡಿದ್ದ ತಿರಿಮನ್ನೆ ಕಳೆದೊಂದು ವರ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಬೇಸರಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಶಾಶ್ವತವಾಗಿ ಹಿಂದೆ ಸರಿದರು. ಏಕದಿನ ಕ್ರಿಕೆಟ್‌ನಲ್ಲಿ ಅವರು ಭಾರತದ ವಿರುದ್ಧ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಚೊಚ್ಚಲ ಪ್ರವೇಶ ಮಾಡಿದರು.

ಇದಾದ ಒಂದು ವರ್ಷದ ನಂತರ 2011ರಲ್ಲಿ ಅವರು ಟೆಸ್ಟ್ ಕ್ರಿಕೆಟ್​​ಗೂ ಪದಾರ್ಪಣೆ ಮಾಡಿದರು. ಲಹಿರು ಶ್ರೀಲಂಕಾ ಪರ 44 ಟೆಸ್ಟ್, 127 ಏಕದಿನ ಮತ್ತು 26 ಟಿ20ಗಳಲ್ಲಿ ಕಣಕ್ಕಿಳಿದಿದ್ದಾರೆ. ಕ್ರಮವಾಗಿ 2088, 3164 ಮತ್ತು 291 ರನ್ ಕಲೆ ಹಾಕಿದ್ದಾರೆ. ಒಟ್ಟು 7 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.

ಇದೀಗ ವಿದಾಯ ಘೋಷಿಸಿ ವಿವಿಧ ಲೀಗ್​ಗಳಲ್ಲಿ ಪಾಲ್ಗೊಳ್ಳುತ್ತಿರುವ 34 ವರ್ಷದ ತಿರಿಮನ್ನೆ, 2014ರ ಏಷ್ಯನ್ ಗೇಮ್ಸ್‌ನಲ್ಲಿ ಶ್ರೀಲಂಕಾ ತಂಡದ ನಾಯಕರನ್ನಾಗಿ ಮಾಡಲಾಯಿತು. ಅವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವೂ ಚಾಂಪಿಯನ್ ಆಗಿತ್ತು. ಸದ್ಯ ತಿರಿಮನ್ನೆ ಭೀಕರ ಅಪಘಾತವು 2022ರ ಡಿಸೆಂಬರ್ 30ರಂದು ನಡೆದ ರಿಷಭ್ ಪಂತ್ ಅವರ ಅಪಘಾತ ನೆನಪಿಸಿದೆ. ಸದ್ಯ ಪಂತ್​ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ