logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗಂಭೀರ್ ಸೋಲಿನಲ್ಲಿ-ಜಯಸೂರ್ಯ ಗೆಲುವಿನಲ್ಲಿ; ತಂಡದ ಭವಿಷ್ಯದ ಹಾದಿ ಕಂಡುಕೊಂಡ ನೂತನ ಕೋಚ್‌ಗಳು

ಗಂಭೀರ್ ಸೋಲಿನಲ್ಲಿ-ಜಯಸೂರ್ಯ ಗೆಲುವಿನಲ್ಲಿ; ತಂಡದ ಭವಿಷ್ಯದ ಹಾದಿ ಕಂಡುಕೊಂಡ ನೂತನ ಕೋಚ್‌ಗಳು

Jayaraj HT Kannada

Aug 08, 2024 11:56 AM IST

google News

ತಂಡದ ಭವಿಷ್ಯದ ಹಾದಿ ಕಂಡುಕೊಂಡ ನೂತನ ಕೋಚ್​ಗಳು

    • ಕೋಚ್ ಆಗಿ ಮೊದಲ ಏಕದಿನ ಸರಣಿಯನ್ನು ಗೌತಮ್ ಗಂಭೀರ್ ಸೋತಿದ್ದರೆ, ಸನತ್ ಜಯಸೂರ್ಯ ಆತ್ಮವಿಶ್ವಾಸದ ಗೆಲುವಿನ ಮೂಲಕ ತಮ್ಮ ಯುಗವನ್ನು ಆರಂಭಿಸಿದ್ದಾರೆ. ಆದರೆ, ಇಬ್ಬರೂ ನೂತನ ಕೋಚ್​ಗಳು ಈ ಸರಣಿಯಿಂದ ತಂಡದ ಭವಿಷ್ಯದ ಹಾದಿ ಕಂಡುಕೊಂಡಿದ್ದಾರೆ ಎನ್ನಬಹುದು.
ತಂಡದ ಭವಿಷ್ಯದ ಹಾದಿ ಕಂಡುಕೊಂಡ ನೂತನ ಕೋಚ್​ಗಳು
ತಂಡದ ಭವಿಷ್ಯದ ಹಾದಿ ಕಂಡುಕೊಂಡ ನೂತನ ಕೋಚ್​ಗಳು (AFP)

ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ಸೋಲಿನೊಂದಿಗೆ ಅಂತ್ಯಗೊಂಡಿದೆ. ಉಭಯ ತಂಡಗಳ ನಡುವೆ ನಡೆದ ಏಕದಿನ ಸರಣಿಯಲ್ಲಿ ಭಾರತ 0-2 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಇದರೊಂದಿಗೆ ಭಾರತೀಯ ಕ್ರಿಕೆಟ್‌ನ 45 ವರ್ಷಗಳ ಸುದೀರ್ಘ ಸರಣಿ ಗೆಲುವಿಗೆ ಬ್ರೇಕ್ ಬಿದ್ದಿದೆ. ಅದೇ ಸಮಯದಲ್ಲಿ, ಕೋಚ್ ಆಗಿ ಮೊದಲ ಏಕದಿನ ಸರಣಿಯನ್ನು ಗೌತಮ್ ಗಂಭೀರ್ ಸೋತಿದ್ದರೆ, ಸನತ್ ಜಯಸೂರ್ಯ ಆತ್ಮವಿಶ್ವಾಸದ ಗೆಲುವಿನ ಮೂಲಕ ತಮ್ಮ ಯುಗವನ್ನು ಆರಂಭಿಸಿದ್ದಾರೆ. ಆದರೆ, ಇಬ್ಬರೂ ನೂತನ ಕೋಚ್​ಗಳು ಈ ಸರಣಿಯಿಂದ ತಂಡದ ಭವಿಷ್ಯದ ಹಾದಿ ಕಂಡುಕೊಂಡಿದ್ದಾರೆ ಎನ್ನಬಹುದು.

ತಂಡಕ್ಕೆ ಸೋಲು-ಗಂಭೀರ್​ಗೆ ಜಯ

ಟೀಮ್ ಇಂಡಿಯಾ ಹೀನಾಯವಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಸೋತಿರಬಹುದು. ಆದರೆ, ನೂತನ ಕೋಚ್ ಆಗಿರುವ ಗಂಭೀರ್​ಗೆ ಈ ಸೋಲಿನಿಂದಲೂ ಜಯ ಸಿಕ್ಕಿದೆ. ಅದುಹೇಗೆ ಎಂದರೆ, ಭವಿಷ್ಯದ ತಂಡವನ್ನು ಕಟ್ಟಲು ಗೌತಮ್​ಗೆ ದೊಡ್ಡ ಸುಳಿವು ಸಿಕ್ಕಂತಾಗಿದೆ. ಕೋಚ್ ಆಗಿ ಗಂಭೀರ್ ಅವರು ಆರಂಭದಲ್ಲೇ ದೊಡ್ಡ ಜಯ, ಸಾಧನೆಯನ್ನು ನಿರೀಕ್ಷೆ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಅದರ ಬದಲು ತಂಡವನ್ನು ಕಟ್ಟುವಲ್ಲಿ, ಯುವ ಆಟಗಾರರನ್ನು ಬೆಳೆಸುವತ್ತ ಚಿತ್ತ ನೆಟ್ಟಿದ್ದಾರೆ. ಇದು ಲಂಕಾ ಪ್ರವಾಸದಲ್ಲಿ ಗೋಚರಿಸಿತು.

ಟೀಮ್ ಇಂಡಿಯಾದಲ್ಲಿ ಆಗಮ್ಮೆ-ಈಗೊಮ್ಮೆ ಸ್ಥಾನ ಪಡೆದುಕೊಳ್ಳುತ್ತಿದ್ದ ವಾಷಿಂಗ್ಟನ್ ಸುಂದರ್ ಲಂಕಾ ಪ್ರವಾಸದಲ್ಲಿ ಒಂದು ಪಂದ್ಯವನ್ನು ಬಿಟ್ಟು ಉಳಿದ ಎಲ್ಲ ಮ್ಯಾಚ್ ಆಡಿದರು. ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಇವರು ಟಿ20 ಸರಣಿಯಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಕೂಡ ಆದರು. ಏಕದಿನದಲ್ಲಿ ಒಟ್ಟು 5 ವಿಕೆಟ್ ಪಡೆದರು. ಬ್ಯಾಟಿಂಗ್​ನಲ್ಲೂ ಭರವಸೆ ಮೂಡಿಸಿದ್ದಾರೆ. ಅಂತೆಯೆ ಟಿ20 ಮತ್ತು ಏಕದಿನದಲ್ಲಿ ರಿಯಾನ್ ಪರಾಗ್​ಗೆ ಅವಕಾಶ ನೀಡಿದರು. ಪರಾಗ್ ಬ್ಯಾಟಿಂಗ್​ನಲ್ಲಿ ಮೋಡಿ ಮಾಡಲು ವಿಫಲರಾದರು. ಆದರೆ, ಗಂಭೀರ್ ಅವರು ಪರಾಗ್ ಬೌಲಿಂಗ್​ನಲ್ಲಿ ಪರಾಕ್ರಮವನ್ನು ತೋರಿಸಿಕೊಟ್ಟಿದ್ದಾರೆ.

ಮುಂದಿನ ಪಂದ್ಯಗಳಲ್ಲಿ ಗಂಭೀರ್ ಅವರು ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ರಿಯಾನ್ ಪರಾಗ್ ಅವರನ್ನು ಕಾಯಂ ಸದಸ್ಯರನ್ನಾಗಿ ಮಾಡುವುದು ಬಹುತೇಕ ಖಚಿತ. ಯಾಕೆಂದರೆ ರೋಹಿತ್-ಕೊಹ್ಲಿ ಈಗಾಗಲೇ ಟಿ20ಯಿಂದ ನಿವೃತ್ತಿ ಪಡೆದಿದ್ದಾರೆ. ಭಾರತಕ್ಕೆ ಈ ವರ್ಷವಿನ್ನು ಏಕದಿನ ಸರಣಿ ಇಲ್ಲ. ಹೀಗಾಗಿ ಸದ್ಯಕ್ಕೆ ಗಂಭೀರ್ ಅವರು ಜಯದ ಮೇಲೆ ಹೆಚ್ಚು ಫೋಕಸ್ ಮಾಡದೆ ಯುವ ಆಟಗಾರರಿಗೆ ಅನುಭವ ನೀಡುವತ್ತ ಕೇಂದ್ರೀಕರಿಸುತ್ತಿದ್ದಾರೆ.

ಬೆಳಗಿದ ಸೂರ್ಯ-ಲಂಕಾಕ್ಕೆ ಜಯ

ಅತ್ತ ಹೀನಾಯ ಸ್ಥಿತಿಯಲ್ಲಿದ್ದ ಶ್ರೀಲಂಕಾ ತಂಡಕ್ಕೆ ಸನತ್ ಜಯಸೂರ್ಯ ಕೋಚ್ ಆಗಿ ಬಂದಿರುವುದು ಮರುಜೀವ ಸಿಕ್ಕಂತಾಗಿದೆ. ಅದು ಕೂಡ ಅನುಭವಿ ಹಾಗೂ ಬಲಿಷ್ಠ ಭಾರತದ ವಿರುದ್ಧದ ಗೆಲುವು ಇಡೀ ಡ್ರೆಸ್ಸಿಂಗ್ ರೂಮ್​ನಲ್ಲಿ ದುಪ್ಪಟ್ಟು ಆತ್ಮವಿಶ್ವಾಸ ನೀಡಿದೆ. ಬಹುಪಾಲು ಯುವ ಆಟಗಾರರಿಂದಲೇ ಕೂಡಿರುವ ಲಂಕಾ ತಂಡವನ್ನು ಸೂರ್ಯ ಬೆಳಗಿಸುತ್ತಿರುವ ರೀತಿ ಕೂಡ ಅದ್ಭುತವಾಗಿದೆ.

ಕೋಚ್ ಅಧಿಕಾರ ಸ್ವೀಕರಿಸುವಾಗ ಜಯಸೂರ್ಯ ಒಂದು ಮಾತು ಹೇಳಿದ್ದರು. 'ಕೆಲವು ವರ್ಷಗಳಿಂದ ಕೋಚಿಂಗ್ ವಿಚಾರದಲ್ಲಿ ನಾವು ಆಸ್ಟ್ರೇಲಿಯಾದ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಆಸ್ಟ್ರೇಲಿಯನ್ ವ್ಯವಸ್ಥೆಯು ಇದರಲ್ಲಿ ಉತ್ತಮವಾಗಿದೆ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಆ ವಿಧಾನವು ನಮ್ಮ ಶ್ರೀಲಂಕಾಕ್ಕೆ ಸೂಕ್ತವಲ್ಲ' ಎಂದು ಹೇಳಿದ್ದರು. ಈ ಮೂಲಕ ಕೋಚ್ ಅಧಿಕಾರ ಸ್ವೀಕರಿಸುವ ಮುನ್ನ ಸನತ್ ಸಾಕಷ್ಟು ಅಧ್ಯಯನ ನಡೆಸಿ ಕಣಕ್ಕಿಳಿದಿದ್ದಾರೆ.

ಸರಣಿಯ ಆರಂಭದಲ್ಲಿ, ಶ್ರೀಲಂಕಾವು ಭಾರತ ವಿರುದ್ಧ ಈ ಮಟ್ಟದ ಜಯ ಸಾಧಿಸಲಿದೆ ಎಂದು ಯಾರೂ ಯೋಚಿಸರಲಿಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಒಳಗೊಂಡ ಟೀಮ್ ಇಂಡಿಯಾ ಬಲಿಷ್ಠ ಎಂದೇ ನಂಬಲಾಗಿತ್ತು. ಅಂತಹ ಅಸಾಧಾರಣ ಸವಾಲನ್ನು ಮೆಟ್ಟಿನಿಂತರು ಶ್ರೀಲಂಕಾನ್ನರು. ಪಲ್ಲೆಕೆಲೆಯಲ್ಲಿ ಟಿ20 ಪಂದ್ಯವನ್ನು ಟೈ ಮಾಡಿದಾಗ ಮತ್ತು ಸೂಪರ್ ಓವರ್‌ನಲ್ಲಿ ಸೋತ ನಂತರ ಜಯಸೂರ್ಯ ಹೆಚ್ಚು ತಡಮಾಡದೆ ಮರುದಿನ ಬೆಳಿಗ್ಗೆಯೇ ಏಕದಿನ ಆಟಗಾರರೊಂದಿಗೆ ಕೊಲಂಬೊಗೆ ಪ್ರಯಾಣಿಸಿದರು. ಅಂತಹ ಬದ್ಧತೆ ಲಂಕಾ ತಂಡಕ್ಕೀಗ ಬಂದಿದೆ. ಮೈದಾನದಲ್ಲಿ ಅವರು ತೋರುತ್ತಿರುವ ಎನರ್ಜಿ ಹಿಂದೆಂದೂ ನಾವು ನೋಡಿರಲಿಲ್ಲ. ಇವೆಲ್ಲವೂ ಸಿಂಹಳೀಯರ ಸರಿಯಾದ ದಿಕ್ಕಿನ ಹೆಜ್ಜೆಗಳಾಗಿವೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ