ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ; 27 ವರ್ಷಗಳ ಬಳಿಕ ಕೊನೆಗೂ ದ್ವಿಪಕ್ಷೀಯ ಸರಣಿ ಗೆದ್ದ ಲಂಕಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ; 27 ವರ್ಷಗಳ ಬಳಿಕ ಕೊನೆಗೂ ದ್ವಿಪಕ್ಷೀಯ ಸರಣಿ ಗೆದ್ದ ಲಂಕಾ

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ; 27 ವರ್ಷಗಳ ಬಳಿಕ ಕೊನೆಗೂ ದ್ವಿಪಕ್ಷೀಯ ಸರಣಿ ಗೆದ್ದ ಲಂಕಾ

ಭಾರತ ವಿರುದ್ಧ ಬರೋಬ್ಬರಿ 27 ವರ್ಷಗಳ ನಂತರ ಶ್ರೀಲಂಕಾ ಏಕದಿನ ಸರಣಿ ಗೆದ್ದಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಆ ನಂತರದ ಎರಡೂ ಪಂದ್ಯಗಳಲ್ಲಿ ಲಂಕಾ ಭರ್ಜರಿ ಅಂತರದೊಂದಿಗೆ ಜಯಭೇರಿ ಬಾರಿಸಿದೆ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ; 27 ವರ್ಷಗಳ ಬಳಿಕ ಗೆದ್ದ ಲಂಕಾ
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ; 27 ವರ್ಷಗಳ ಬಳಿಕ ಗೆದ್ದ ಲಂಕಾ (PTI)

ಶ್ರೀಲಂಕಾ ವಿರುದ್ಧ ಭಾರತ ಸರಣಿ ಸೋಲು ಕಂಡಿದೆ. ಕೊಲಂಬೊದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ 110 ರನ್‌ಗಳ ಭರ್ಜರಿ ಜಯ ಸಾಧಿಸಿದ ಆತಿಥೇಯ ಲಂಕಾ, 2-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಇದರೊಂದಿಗೆ ಭಾರತವು ಬರೋಬ್ಬರಿ 27 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಸರಣಿ ಕಳೆದುಕೊಂಡಿದೆ. 1997ರಲ್ಲಿ ಕೊನೆಯ ಬಾರಿ ದ್ವೀಪರಾಷ್ಟ್ರದ ವಿರುದ್ಧ ಭಾರತ ಸರಣಿ ಸೋತಿತ್ತು. ಇದೀಗ ಲಂಕಾ ತಂಡ ಭಾರತವನ್ನು ಬಗ್ಗುಬಡಿದಿದೆ. ಏಕದಿನ ಸರಣಿಗೂ ಮುನ್ನ ನಡೆದಿದ್ದ ಟಿ20 ಸರಣಿಯಲ್ಲಿ ಭಾರತವು 3-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್‌ ಮಾಡಿತ್ತು. ತವರಿನಲ್ಲೇ ಭಾರಿ ಮುಖಭಂಗ ಅನುಭವಿಸಿದ್ದ ಲಂಕನ್ನರು, ಇದೀಗ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಭಾರತಕ್ಕೆ ಒಂದೂ ಪಂದ್ಯವನ್ನು ಗೆಲ್ಲಲು ಅವಕಾಶ ನೀಡದೆ, ಮುಂಬರುವ ಚಾಂಪಿಯನ್ಸ್‌ ಟ್ರೋಫಿಗೆ ತಮ್ಮದು ಕೂಡಾ ಬಲಿಷ್ಠ ಸ್ಪರ್ಧಿ ಎಂಬುದನ್ನು ಸಾಬೀತುಪಡಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಿತು. ಮೊದಲ ಎರಡೂ ಪಂದ್ಯಗಳಿಗಿಂತ ತನ್ನ ಬ್ಯಾಟಿಂಗ್‌ನಲ್ಲಿ ಲಂಕಾ ಸುಧಾರಣೆ ಕಂಡಿತು. ಆದರೆ, ಭಾರತ ಪಂದ್ಯದಿಂದ ಪಂದ್ಯಕ್ಕೆ ರನ್‌ ಗಳಿಕೆಯಲ್ಲೂ ಕಳೆಪೆ ಪ್ರದರ್ಶನ ನೀಡಿತು. ಇಂದು ಕೇವಲ 26.1 ಓವರ್‌ ಬ್ಯಾಟಿಂಗ್‌ ಮಾಡಿದ ಭಾರತ, 138 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಆಲೌಟ್‌ ಆಗುವ ಮೂಲಕ ಸತತ ಮೂರೂ ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್‌ ಲೈನಪ್‌ ಸಾಬೀತುಪಡಿಸಿತು.

ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಕೊಲಂಬೊದಲ್ಲಿ ನಡೆದಿವೆ. ಇಲ್ಲಿ ಟಾಸ್‌ ಗೆದ್ದೋರೇ ಬಾಸ್‌ ಎಂಬುದು ಮೊದಲೇ ಅರ್ಥವಾಗಿತ್ತು. ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲೂ ಭಾರತ ತಂಡದ ನಾಯಕ ಟಾಸ್‌ ಸೋಲುವ ಮೂಲಕ ಪಂದ್ಯದಲ್ಲಿ ಸೋಲಿಗೆ ಮುನ್ನುಡಿ ಬರೆದದ್ದರು. ಅದರಂತೆಯೇ ಮೂರನೇ ಏಕದಿನ ಪಂದ್ಯದಲ್ಲಿಯೂ ಟಾಸ್‌ ಸೋತ ಭಾರತ ಪಂದ್ಯದ ಜೊತೆಗೆ ಸರಣಿ ಸೋತಿದೆ.

ದುನಿತ್‌ ವೆಲ್ಲಾಲಗೆ ಸರಣಿಶ್ರೇಷ್ಠ

ಲಂಕಾ ಸ್ಪಿನ್ನರ್‌ಗಳ ಮುಂದೆ ಬ್ಯಾಟ್‌ ಬೀಸಲು ಭಾರತೀಯ ಬ್ಯಾಟರ್‌ಗಳು ಪರದಾಡಿದರು. ಅದರಲ್ಲೂ ದುನಿತ್‌ ವೆಲ್ಲಾಲಗೆ ಭಾರತದ ಉನ್ನತ ಬಲಿಷ್ಠ ಬಾಟರ್‌ಗಳಿಗೆ ಪೆವಿಲಿಯನ್‌ ಹಾದಿ ತೋರಿದರು. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಅಯ್ಯರ್‌ ಹಾಗೂ ಅಕ್ಷರ್‌ ಪಟೇಲ್‌ ಸೇರಿದಂತೆ 5 ಪ್ರಮುಖ ವಿಕೆಟ್‌ ಪಂದ್ಯದ ದಿಕ್ಕು ಬದಲಿಸಿದರು. ಸರಣಿಯುದ್ದಕ್ಕೂ ಬ್ಯಾಟ್‌ ಹಾಗೂ ಬಾಲ್‌ ಎರಡರಲ್ಲೂ ಮಿಂಚಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದರು. ಈ ಮೂರು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲೂ ಭಾರತ ಆಲೌಟ್‌ ಆಗಿದೆ. ಇದರಲ್ಲಿ ಭಾರತದ 27 ವಿಕೆಟ್‌ ಸ್ಪಿನ್‌ ಬೌಲಿಂಗ್‌ನಲ್ಲಿ ಪತನವಾಗಿದೆ.

ಪಂದ್ಯದಲ್ಲಿ ಲಂಕಾ ಪರ ಅವಿಷ್ಕಾ ಫೆರ್ನಾಂಡೋ 96 ರನ್‌ ಗಳಿಸುವ ಮೂಲಕ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿಕೊಂಡರು. ಇದೇ ವೇಳೆ ಕುಸಲ್‌ ಮೆಂಡಿಸ್‌ 59 ರನ್‌ ಗಳಿಸಿದರು. ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರು. ಬ್ಯಾಟಿಂಗ್‌ನಲ್ಲಿ ರೋಹಿತ್‌ ಶರ್ಮಾ ಗಳಿಸಿದ 35 ರನ್‌ಗಳೇ ಗರಿಷ್ಠ. 9ನೇ ವಿಕೆಟ್‌ಗೆ ಕುಲ್ದೀಪ್‌ ಯಾದವ್‌ ಮತ್ತು ವಾಷಿಂಗ್ಟನ್‌ ಸುಂದರ್‌ ನಡುವಣ 37 ರನ್‌ಗಳೇ ಗರಿಷ್ಠ ಜೊತೆಯಾಟವಾಯ್ತು.

Whats_app_banner