ಶಾಹೀದ್ ಅಫ್ರಿದಿ ವಿಚಾರವಾಗಿ ಟ್ರೋಲ್ ಮಾಡಲು ಬಂದ ಪಾಕಿಸ್ತಾನದ ಪತ್ರಕರ್ತನಿಗೆ ರುಬ್ಬಿದ ಸುರೇಶ್ ರೈನಾ
May 24, 2024 07:51 PM IST
ಶಾಹೀದ್ ಅಫ್ರಿದಿ ವಿಚಾರವಾಗಿ ಟ್ರೋಲ್ ಮಾಡಲು ಬಂದ ಪಾಕಿಸ್ತಾನದ ಪತ್ರಕರ್ತನಿಗೆ ರುಬ್ಬಿದ ಸುರೇಶ್ ರೈನಾ
Suresh Raina : ಶಾಹೀದ್ ಅಫ್ರಿದಿ ಟಿ20 ವಿಶ್ವಕಪ್ ರಾಯಭಾರಿಯಾಗಿ ನೇಮಕಗೊಂಡ ವಿಚಾರವಾಗಿ ಟ್ರೋಲ್ ಮಾಡಲು ಬಂದ ಪಾಕಿಸ್ತಾನದ ಪತ್ರಕರ್ತನೊಬ್ಬನ್ನು ಸುರೇಶ್ ರೈನಾ ರೋಸ್ಟ್ ಮಾಡಿದ್ದಾರೆ.
ಪುರುಷರ ಟಿ20 ವಿಶ್ವಕಪ್ 2024ರ ಸ್ಟಾರ್ ರಾಯಭಾರಿಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲೆಜೆಂಡರಿ ಆಟಗಾರ ಶಾಹೀದ್ ಅಫ್ರಿದಿ (Shahid Afridi) ಅವರ ಹೆಸರನ್ನು ಮೇ 24ರ ಶುಕ್ರವಾರ ಐಸಿಸಿ ಘೋಷಿಸಿದೆ. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್, ಕ್ರಿಸ್ ಗೇಲ್ ಮತ್ತು ಉಸೇನ್ ಬೋಲ್ಟ್ ಈ ಮೊದಲೇ ಸ್ಥಾನ ಪಡೆದಿದ್ದರು. ಮಾಜಿ ಆಲ್ರೌಂಡರ್ ಆರು ಟಿ20 ವಿಶ್ವಕಪ್ ಆಡಿದ ಮಾಜಿ ಆಟಗಾರ, 2 ಬಾರಿ ಪಾಕ್ ತಂಡವನ್ನು ಮುನ್ನಡೆಸಿದ್ದಾರೆ.
2009ರಲ್ಲಿ ಪಾಕ್ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದ ಅಫ್ರಿದಿ, ಲಾರ್ಡ್ಸ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದರು. ಶಾಹೀದ್ ಅವರನ್ನು ರಾಯಭಾರಿಯಾಗಿ ನೇಮಕದ ಘೋಷಣೆಯ ನಂತರ, ಇದೇ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಅವರನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡಲು ಯತ್ನಿಸಿ ರೋಸ್ಟ್ ಆಗಿದ್ದಾರೆ.
ಪಾಕ್ ಪತ್ರಕರ್ತ ಇಮ್ರಾನ್ ಸಿದ್ಧಿಕ್ ಅವರ ಪೋಸ್ಟ್ನಲ್ಲಿ ಹೀಗಿತ್ತು; 'ಐಸಿಸಿ ಶಾಹಿದ್ ಅಫ್ರಿದಿ ಅವರನ್ನು 2024ರ ಐಸಿಸಿ ಟಿ 20 ವಿಶ್ವಕಫ್ ರಾಯಭಾರಿಯಾಗಿ ನೇಮಿಸಿದೆ. ಹಲೋ ಸುರೇಶ್ ರೈನಾ? ಅಫ್ರಿದಿ ಹೆಸರಿದೆ ನಿಮ್ಮ ಹೆಸರಿಲ್ಲ ಎಂದು ಅಣಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರೈನಾ, ಆ ಪತ್ರಕರ್ತನನ್ನು ರೋಸ್ಟ್ ಮಾಡಿದ್ದಾರೆ. ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿರುವ ಪೋಸ್ಟ್ ವೈರಲ್ ಆಗಿದೆ.
ಸುರೇಶ್ ರೈನಾ ಉತ್ತರ ಹೀಗಿತ್ತು ನೋಡಿ
ಮೊಹಾಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ನೆನಪಿಸುವ ಮೂಲಕ ಭಾರತ ತಂಡದ ವೈಟ್-ಬಾಲ್ ಶ್ರೇಷ್ಠ ಆಟಗಾರ, ಪಾಕ್ ಪತ್ರಕರ್ತನ ಬಾಯಿ ಮುಚ್ಚಿಸಿದ್ದಾರೆ. ರೈನಾ ಅಜೇಯ 36 ರನ್ ಗಳಿಸಿದ ಪಂದ್ಯದಲ್ಲಿ ಅಫ್ರಿದಿ ನೇತೃತ್ವದ ಪಾಕಿಸ್ತಾನ ಭಾರತ 29 ರನ್ ಗಳಿಂದ ಸೋಲಿಸಿತ್ತು.
"ನಾನು ಐಸಿಸಿ ರಾಯಭಾರಿಯಲ್ಲ, ಆದರೆ ನನ್ನ ಮನೆಯಲ್ಲಿ 2011 ರ ವಿಶ್ವಕಪ್ ಇದೆ. ಮೊಹಾಲಿಯಲ್ಲಿ ನಡೆದ ಆಟ ನೆನಪಿದೆಯೇ? ಇದು ನಿಮಗಾಗಿ ಕೆಲವು ಮರೆಯಲಾಗದ ನೆನಪುಗಳನ್ನು ಮರಳಿ ತರುತ್ತದೆ ಎಂದು ಭಾವಿಸುತ್ತೇನೆ ಎಂದು ರೈನಾ ಉತ್ತರಿಸಿದ್ದಾರೆ.
ಟಿ20 ವಿಶ್ವಕಪ್ ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಇಪ್ಪತ್ತು ತಂಡಗಳು ಒಂಬತ್ತು ಸ್ಥಳಗಳಲ್ಲಿ 55 ಪಂದ್ಯಗಳನ್ನು ಆಡಲಿದ್ದು, ಜೂನ್ 29 ರಂದು ಬಾರ್ಬಡೋಸ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಕೊನೆಗೊಳ್ಳಲಿದೆ.
ಜೂನ್ 5 ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತನ್ನ ಅಭಿಯಾನ ಪ್ರಾರಂಭಿಸಲಿದ್ದು, ಜೂನ್ 9 ರಂದು ಪಾಕಿಸ್ತಾನವನ್ನು ಅದೇ ಸ್ಥಳದಲ್ಲಿ ಎದುರಿಸಲಿದೆ. 'ಎ' ಗುಂಪಿನಲ್ಲಿ ಭಾರತದ ಜೊತೆಗೆ ಐರ್ಲೆಂಡ್, ಪಾಕ್, ಯುಎಸ್ಎ,ಕೆನಡಾ ತಂಡಗಳಿವೆ.
ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಕಪ್ಗೆ ಭಾರತೀಯ ಆಟಗಾರರು ಇನ್ನೂ ತೆರಳಿಲ್ಲ. ಮೊದಲ ಬ್ಯಾಚ್ ಆಟಗಾರರು ಮೇ 25 ರಂದು ನಿರ್ಗಮಿಸಲಿದ್ದು, ಇದರಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅವರ ಉಪನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕರು ಸೇರಿದ್ದಾರೆ. ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಸೇರಿದಂತೆ ಉಳಿದವರು ಮುಂದಿನ ಕೆಲವು ದಿನಗಳಲ್ಲಿ ನಿರ್ಗಮಿಸುವ ಸಾಧ್ಯತೆಯಿದೆ.
ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡ ಜೂನ್ 1ರಂದು ನ್ಯೂಯಾರ್ಕ್ನಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)