ವೃತ್ತಿಧರ್ಮ ಮರೆತರೇ ಸಿಎಸ್ಕೆ ಆಟಗಾರರು; ತಂಡದಲ್ಲೇ ಸ್ಪೂರ್ತಿದಾಯಕ ಕ್ರಿಕೆಟಿಗರಿದ್ದರೂ ಸಣ್ಣತನ ತೋರಿದ್ದೇಕೆ?
CSK Players Trolles RCB : ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಸಿಎಸ್ಕೆ ಆಟಗಾರರು ಸಂಭ್ರಮಿಸಿ ವೃತ್ತಿ ಧರ್ಮ ಮರೆತರೆ ಎಂಬ ಮೂಡಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಮಾತ್ರ ಹಬ್ಬದ ರೀತಿ ಸಂಭ್ರಮಿಸಿದರು. ಅವರು (ಸಿಎಸ್ಕೆ) ಸೋತಾಗ ಇವರು (ಆರ್ಸಿಬಿ), ಇವರು ಸೋತಾಗ ಅವರು ಸಂಭ್ರಮಿಸುವುದು ಇದೇ ಮೊದಲಲ್ಲ, ಇದೇ ಕೊನೆಯೂ ಅಲ್ಲ. ಇದು ಅಭಿಮಾನಿಗಳು ತೋರುವ ಬೆಲೆಕಟ್ಟಲಾಗದ ಅಭಿಮಾನ. ಹಾಗಾಗಿ ಫ್ಯಾನ್ಸ್ ಲೆಕ್ಕಾಚಾರ ಪಕ್ಕಕ್ಕಿಡೋಣ. ಏಕೆಂದರೆ ಭಾರತ ತಂಡ ಎಂದು ಬಂದಾಗ ಮತ್ತೆ ಒಂದಾಗುತ್ತಾರೆ. ಆದರೆ, ಸಿಎಸ್ಕೆ ಆಟಗಾರರು ತಮ್ಮ ವೃತ್ತಿ ಧರ್ಮ ಮರೆತರಾ ಎಂಬ ಅನುಮಾನ ಮೂಡಿಸಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಪರ ಒಬ್ಬರಿಗೊಬ್ಬರು ಟ್ರೋಲ್, ಗೇಲಿ ಮಾಡಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಲು ಆಗುವುದಿಲ್ಲ. ಆದರೆ ಕ್ರಿಕೆಟಿಗರೇ ಇಂಥಾ ಸಣ್ಣತನ ತೋರುವುದು ಎಷ್ಟು ಸರಿ. ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ಲೇಆಫ್ ಡಿಸೈಡರ್ ಪಂದ್ಯದಲ್ಲಿ ಸಿಎಸ್ಕೆ ಮಣಿಸಿ ಆರ್ಸಿಬಿ ಅಗ್ರ-4ರಲ್ಲಿ ಸ್ಥಾನ ಪಡೆಯಿತು. ಈ ವೇಳೆ ಆರ್ಸಿಬಿ ಫ್ಯಾನ್ಸ್, ತಮ್ಮನ್ನು ನಿಂದಿಸಿದ್ದರು ಎಂದು ಸಿಎಸ್ಕೆ ಬೆಂಬಲಿಗರು ಆರೋಪಿಸಿದ್ದರು. ನಂತರ ಎಲಿಮಿನೇಟರ್ನಲ್ಲಿ ಆರ್ಸಿಬಿ ಸೋತ ಬೆನ್ನಲ್ಲೇ ಸಿಎಸ್ಕೆ ಫ್ಯಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಮುಯ್ಯಿಗೆ ಮುಯ್ಯಿಗೆ ಎಂದುಕೊಂಡು ಸುಮ್ಮನಾಗೋಣ.
ಆದರೆ, ಇಲ್ಲಿ ಆಟಗಾರರಿಗೆ ಏನು ಕೆಲಸ? ವೃತ್ತಿಪರ ಕ್ರಿಕೆಟಿಗರಾಗಿ, ಸೋಲು ಗೆಲುವು ಅರಿತವರೇ ಹೀಗಾದರೆ ಹೇಗೆ? ಹೌದು, ಸಿಎಸ್ಕೆ ಆಟಗಾರರ ವರ್ತನೆ ನಿಜಕ್ಕೂ ಖಂಡನೀಯ. ತುಷಾರ್ ದೇಶಪಾಂಡೆ, ದೀಪಕ್ ಚಹರ್ ಮತ್ತು ಮತೀಶಾ ಪತಿರಾಣ ಆರ್ಸಿಬಿ ಸೋಲನ್ನು ಸಂಭ್ರಮಿಸಿದ್ದಾರೆ. ಇವರಲ್ಲಿ ದೇಶಪಾಂಡೆ ಒಂದು ಹೆಜ್ಜೆ ಮೇಲೆ ಹೋಗಿ ಆರ್‌ಸಿಬಿಯನ್ನು ಅಣಕಿಸಿ ಪೋಸ್ಟ್ ಮಾಡಿದ್ದರು. ವ್ಯಾಪಕ ವಿರೋಧದ ಬಳಿಕ ಟ್ರೋಲ್‌ಗೆ ಹೆದರಿ ಸೈಲೆಂಟ್ ಆಗಿ ಪೋಸ್ಟ್ ಡಿಲೀಟ್ ಮಾಡಿದ್ದರು. ಆದರೆ, ಅಷ್ಟರಲ್ಲೇ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಗಿದೆ.
ಈ ನಡುವೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಮಾಡಿದ ಪೋಸ್ಟ್ಗೆ ಇವರು ಪ್ರತಿಕ್ರಿಯಿಸಿ, ಗೇಲಿ ಮಾಡಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕ್ರಿಕೆಟಿಗರಾಗಿ ತಂಡದ ಸೋಲನ್ನು ಸಂಭ್ರಮಿಸುವುದು ಎಂದರೆ ಅಸಹ್ಯವೇ ಸರಿ. ಮಾಜಿ ಆಟಗಾರರನ್ನು ಬಿಟ್ಟುಬಿಡಿ. ಏಕೆಂದರೆ, ಅವರ ವೃತ್ತಿ ಬದುಕು ಮುಗಿದಿದೆ. ಆದರೂ, ಹಿರಿಯ ಆಟಗಾರನಾಗಿ ರಾಯುಡು ಪ್ರಬುದ್ಧತೆ ಮರೆತರೆ, ಇನ್ನೂ ಮೈದಾನಕ್ಕಿಳಿದು ಆಡಬೇಕಾಗಿರುವ ಯುವ ಆಟಗಾರರು ಕೂಡಾ ಕ್ಷಲ್ಲಕವಾಗಿ ನಡೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರೆ, ಮುಂದೆ ಮೈದಾನಕ್ಕಿಳಿದಾಗಲೆಲ್ಲಾ ಅವರ ಆಕ್ರೋಶಗಳಿಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಮರೆಯಬಾರದು.
ಸಿಎಸ್ಕೆ ಆಟಗಾರರು ಮಾಡಿದ್ದೇನು?
ಅಂಬಾಟಿ ರಾಯುಡು ಕಳೆದ ಒಂದು ವಾರದಿಂದಲೂ ಆರ್ಸಿಬಿ ವಿರುದ್ಧ ಟೀಕೆ, ವ್ಯಂಗ್ಯ ಮಾಡುತ್ತಿದ್ದಾರೆ. ಸಿಎಸ್ಕೆ ಐದು ಬಾರಿ ಟ್ರೋಫಿ ಗೆದ್ದಿದೆ ಎಂದು ರವೀಂದ್ರ ಜಡೇಜಾ ಸೇರಿ ಆಟಗಾರರು ತಮ್ಮ ಹಸ್ತವನ್ನು ತೋರಿಸಿ ಸಂಭ್ರಮಿಸುತ್ತಿರುವ ವಿಡಿಯೋವನ್ನು ರಾಯುಡು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಮ್ಮನೆ ನೆನಪಿಸಿದೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ದೀಪಕ್ ಚಹರ್, ಸೆಲ್ಯೂಟ್ ಮಾಡಿರುವ ಎಮೋಜಿ ಹಾಕಿದ್ದಾರೆ. ಮತ್ತೊಂದೆಡೆ ಪತಿರಾಣ ನಗುವ ಎಮೋಜಿ ಜೊತೆಗೆ ಹಳದಿ ಕಲರ್ನ ಲವ್ ಎಮೋಜಿ ಹಾಕುವ ಮೂಲಕ ಆರ್ಸಿಬಿಗೆ ಪರೋಕ್ಷವಾಗಿ ಅಪಹಾಸ್ಯ ಮಾಡಿದ್ದಾರೆ.
ಇವರದ್ದು ಈ ಕಥೆಯಾದರೆ, ವೇಗಿ ತುಷಾರ್ ದೇಶಪಾಂಡೆ ಆರ್ಸಿಬಿ ತಂಡಕ್ಕೆ ನೇರವಾಗಿ ನಿಮ್ಮ ಕೈಯಲ್ಲಿ ಆಗಲ್ಲ ಎಂದು ತಿವಿದಿದ್ದಾರೆ. ಬೆಂಗಳೂರು ದಂಡು ರೈಲ್ವೆ ನಿಲ್ದಾಣದ ಬೋರ್ಡ್ ಹಂಚಿಕೊಂಡು ಅದರಲ್ಲಿ Bengaluru Cant (Can't ಎಂದರ್ಥ) ಎಂದು ಬರೆದು ಇನ್ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದರು. ಮತ್ತೆ ಡಿಲೀಟ್ ಮಾಡಿದ್ದರೂ, ಗಾಳಿಯ ವೇಗದಂತೆ ಕ್ರಿಕೆಟ್ ವಲಯವನ್ನು ತಲುಪಿತ್ತು. ಆದರೆ ಇವರೆಲ್ಲರೂ ವೃತ್ತಿಪರ ಕ್ರಿಕೆಟಿಗರು ಎನಿಸಿಕೊಂಡು ಮತ್ತೊಂದು ತಂಡದ ಸೋಲು ಹೇಗೆ ಸಂಭ್ರಮಿಸುತ್ತಾರೆ ಎಂಬುದೇ ನಿಜಕ್ಕೂ ಅರ್ಥವಾಗುತ್ತಿಲ್ಲ. ಇವರೆಲ್ಲಾ ಸಿಎಸ್ಕೆ ತಂಡದಲ್ಲೇ ಬೇರೂರುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ. ಬೇರೆ ತಂಡಕ್ಕೆ ಹೋಗುವುದೇ ಇಲ್ಲವೇ?
ಶ್ರೀಲಂಕಾದ ಆಟಗಾರ ಮತೀಶಾ ಪತಿರಾಣ, ಈಗಷ್ಟೇ ಚಿಗುರುತ್ತಿರುವ ಹಸಿರೆಲೆ. ಇವತ್ತಲ್ಲ ನಾಳೆ ಬೇರೆ ಬೇರೆ ಐಪಿಎಲ್ ತಂಡದ ಪರ ಆಡಬೇಕಾದ ಸಂಭವ ಬರಬಹುದು. ಆದರೆ, ಇಂಥಾ ವರ್ತನೆ ಬೇರೆ ತಂಡಗಳು ಸಹ ಗಮನಿಸುತ್ತಿರುತ್ತವೆ ಎಂಬುದು ಗಮನದಲ್ಲಿರಬೇಕಿತ್ತು. ಪತಿರಾಣ ಇಲ್ಲಿ ದುಡ್ಡು ಪಡೆದು ಅವರ ರಾಷ್ಟ್ರದ ಪರ ಆಡುತ್ತಾರೆ. ಆದರೆ, ಭಾರತೀಯರಾದ ದೇಶಪಾಂಡೆ ಮತ್ತು ಚಹರ್ಗೆ ಏನಾಗಿದೆ? ಐಪಿಎಲ್ ಎಂಬುದು ಕ್ಷಣಿಕ. ಎರಡು ತಿಂಗಳ ಮನರಂಜನೆ ಎಂಬುದು ಏಕೆ ಮರೆತಿದ್ದಾರೆ. ಆರ್ಸಿಬಿ ತಂಡವನ್ನು ಟೀಕಿಸುವುದು ಎಂದರೆ ಆ ತಂಡ ಪ್ರತಿನಿಧಿಸುವ ಆಟಗಾರರನ್ನೂ ಟೀಕಿಸಿದಂತೆ. ಹೀಗೆ ಟೀಕಿಸುವ ಚಹರ್ ಭಾರತ ತಂಡದಲ್ಲಿ ವಿರಾಟ್, ಸಿರಾಜ್, ಪಾಟೀದಾರ್ ಜೊತೆ ಮತ್ತೆ ಕಣಕ್ಕಿಳಿಯಲೇಬೇಕು. ಹಲವರು ನಿಮ್ಮನ್ನು ‘ಚಿಲ್ಲರೆ ಬುದ್ದಿ’ ಎಂದು ಟೀಕಿಸಿದರೂ ಅಚ್ಚರಿಯಿಲ್ಲ.
ಪೂರನ್ ನೋಡಿ ಕಲಿಯಬೇಕು…
ಮತ್ತೊಂದೆಡೆ, ನಿಕೋಲಸ್ ಪೂರನ್ ಅವರನ್ನು ನೋಡಿಯಾದರೂ ಈ ಆಟಗಾರರು ಕಲಿಯಬೇಕು. ತಾನು ಪ್ರತಿನಿಧಿಸುತ್ತಿರುವುದು ಲಕ್ನೋ ತಂಡದ ಪರವಾದರೂ, ಆರ್ಸಿಬಿ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ. ಆರ್ಸಿಬಿ ಹೊರಬೀಳುವುದು ಆ ತಂಡದ ಆಟಗಾರರಿಗೂ ಗೊತ್ತಿದ್ದರೂ ಇದ್ದ ಶೇ 1 ಅವಕಾಶದಲ್ಲಿ ಪ್ಲೇಆಫ್ಗೂ ಪ್ರವೇಶಿಸಿದ್ದು, ನಿಜಕ್ಕೂ ದೊಡ್ಡ ಸಾಧನೆಯ ಸರಿ. ಇಂತಹ ಸಾಧನೆಯನ್ನು ಗುರುತಿಸುವುದು ಬಿಟ್ಟು ಸಣ್ಣತನ ತೋರಿದ್ದು ನಿಜಕ್ಕೂ ನಿಮಗೆ ಇದು ಅವಮಾನಕರ. ಹೀಗೆ ವರ್ತಿಸಿ ಸಂಭ್ರಮಿಸಿದವರನ್ನು ಕ್ರಿಕೆಟಿಗರು ಎನ್ನಬೇಕೇ?
ಪೋಸ್ಟ್ನಲ್ಲಿ ಹಾಕಿದ್ದು ಎರಡು ಎಮೋಜಿಯೇ ಇರಬಹುದು. ಆದರೆ ಅದರ ಹಿಂದಿರುವ ಅರ್ಥ ಸಾಕಷ್ಟಿದೆ. ಒಂದು ತಂಡವನ್ನು ಹೀನಾಯ ಎಂದು ಸಂಬೋಧಿಸಿದಂತೂ ಆಗುತ್ತದೆ. ಒಬ್ಬ ವೃತ್ತಿಪರ ಕ್ರೀಡಾಪಟು ಹಾಗೂ ದೇಶದ ತಂಡವನ್ನು ಪ್ರತಿನಿಧಿಸುವ ಆಟಗಾರರು, ಅದೇ ದೇಶದ ಆಟಗಾರರನ್ನು ಅಪಹಾಸ್ಯ ಮಾಡುವುದು ಎಷ್ಟು ಸರಿ? ಇದೇನಾ ಕೀಡಾ ಧರ್ಮ? ಆದರೆ ನಿಮ್ಮ ಈ ಅಪಹಾಸ್ಯಕ್ಕೆ ಆರ್ಸಿಬಿ ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡದೆ ವೃತ್ತಿಪರತೆ ಮೆರೆದಿದ್ದಾರೆ. ಆರ್ಸಿಬಿ ಎಂದಲ್ಲ, ಯಾವುದೇ ತಂಡದ ಸೋಲನ್ನು ಸಂಭ್ರಮಿಸುವುದನ್ನು ಸಣ್ಣತನ ಎನ್ನುವುದು ಬಿಟ್ಟರೆ ಬೇರೆನೂ ಹೇಳಲು ಸಾಧ್ಯವಿಲ್ಲ. ವೃತ್ತಿಪರ ಆಟಗಾರರಾಗಿ ಇಂತಹ ಸಣ್ಣತನ ತೋರುವುದನ್ನು ಆಟಗಾರರು ನಿಲ್ಲಿಸಬೇಕು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)