ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ಗೆ ಅಮೆರಿಕ ವಿಮಾನ ಹತ್ತಲಿದ್ದಾರೆ ದಿನೇಶ್‌ ಕಾರ್ತಿಕ್;‌ ಆದ್ರೆ ಆಟಗಾರನಾಗಿ ಅಲ್ಲ

ಟಿ20 ವಿಶ್ವಕಪ್‌ಗೆ ಅಮೆರಿಕ ವಿಮಾನ ಹತ್ತಲಿದ್ದಾರೆ ದಿನೇಶ್‌ ಕಾರ್ತಿಕ್;‌ ಆದ್ರೆ ಆಟಗಾರನಾಗಿ ಅಲ್ಲ

ಆಟಗಾರನಾಗಿ ಆರ್‌ಸಿಬಿ ತಂಡದೊಂದಿಗೆ ಐಪಿಎಲ್‌ ಪಯಣವನ್ನು ಬಹುತೇಕ ಅಂತ್ಯಗೊಳಿಸಿದ ನಂತರ, ದಿನೇಶ್‌ ಕಾರ್ತಿಕ್‌ ಮತ್ತೆ ವೀಕ್ಷಕ ವಿವರಣೆಕಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿ ವೇಳೆ ಅವರು ಕಾಮೆಂಟರಿ ಮಾಡಲಿದ್ದಾರೆ.

ಟಿ20 ವಿಶ್ವಕಪ್‌ಗೆ ಅಮೆರಿಕ ವಿಮಾನ ಹತ್ತಲಿದ್ದಾರೆ ದಿನೇಶ್‌ ಕಾರ್ತಿಕ್
ಟಿ20 ವಿಶ್ವಕಪ್‌ಗೆ ಅಮೆರಿಕ ವಿಮಾನ ಹತ್ತಲಿದ್ದಾರೆ ದಿನೇಶ್‌ ಕಾರ್ತಿಕ್ (AFP)

ಐಪಿಎಲ್‌ 2024ರ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿ ತಮ್ಮ ಐಪಿಎಲ್‌ ಅಭಿಯಾನಕ್ಕೆ ವಿದಾಯ ಹೇಳಿರುವ ಹಿರಿಯ ಕ್ರಿಕೆಟಿಗ ದಿನೇಶ್‌ ಕಾರ್ತಿಕ್,‌ ಮುಂದೆ ಟಿ20 ವಿಶ್ವಕಪ್‌ ಪಂದ್ಯಾವಳಿ ಸಮಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜೂನ್ 2ರಿಂದ ಆರಂಭವಾಗಲಿರುವ ಐಸಿಸಿ ಟೂರ್ನಿಗಾಗಿ ಟೀಮ್‌ ಇಂಡಿಯಾದ ಜೊತೆಜೊತೆಗೆ ಡಿಕೆ ಕೂಡಾ ಅಮೆರಿಕ ವಿಮಾನ ಹತ್ತಲಿದ್ದಾರೆ. ವೆಸ್ಟ್ ಇಂಡೀಸ್‌ ಹಾಗೂ ಯುಎಸ್‌ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯಗಳ ವೇಳೆ, ಕಾರ್ತಿಕ್‌ ಮೈದಾನಕ್ಕಿಳಿದು ಆಡುತ್ತಿಲ್ಲ. ಬದಲಾಗಿ ಈ ಬಾರಿ ಅವರು ಕಾಮೆಂಟರಿ ಪ್ಯಾನೆಲ್‌ನಲ್ಲಿ ಕೂತು ವೀಕ್ಷಕ ವಿವರಣೆ ಮಾಡಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂಬರುವ ಬಹುನಿರೀಕ್ಷಿತ ಟೂರ್ನಿಗೆ ದಿಗ್ಗಜ ಆಟಗಾರರಿರುವ ಕಾಮೆಂಟರಿ ಪ್ಯಾನೆಲ್‌ ಅನ್ನು ಐಸಿಸಿ ಹೆಸರಿಸಿದೆ. ಐಪಿಎಲ್‌ನಲ್ಲಿ ಮೊನ್ನೆಯವರೆಗೂ ಆರ್‌ಸಿಬಿ ಪರ ಆಡಿದ ದಿನೇಶ್‌ ಕಾರ್ತಿಕ್‌ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಈ ಹಿಂದೆಯೂ ವೀಕ್ಷಕ ವಿವರಣೆಕಾರನಾಗಿ ಹಲವು ಪಂದ್ಯಗಳಲ್ಲಿ ಕಾಮೆಂಟರಿ ಪ್ಯಾನಲ್‌ನಲ್ಲಿ ಕುಳಿತು ಅನುಭವ ಹೊಂದಿರುವ ದಿನೇಶ್‌ ಕಾರ್ತಿಕ್‌, ಮತ್ತೆ ಅದೇ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ಕುರಿತು ಐಸಿಸಿ ಪ್ರಕಟಿಸಿದೆ.

“ಈ ಪಂದ್ಯಾವಳಿಯು ಹಲವು ವಿಧಗಳಲ್ಲಿ ವಿಭಿನ್ನವಾಗಿದೆ. 20 ತಂಡಗಳು 55 ಪಂದ್ಯಗಳಲ್ಲಿ ಕೆಲವು ಹೊಸ ಮೈದಾನಗಳಲ್ಲಿ ಕಣಕ್ಕಿಳಿಯುತ್ತಿವೆ. ಇದು ರೋಮಾಂಚಕ ಸಂಯೋಜನೆಯಾಗಿದೆ. ಬಹುನಿರೀಕ್ಷಿತ ಟೂರ್ನಿಯ ಭಾಗವಾಗಲು ನಾನು ಕಾಯುತ್ತಿದ್ದೇನೆ. ದೊಡ್ಡ ಮಟ್ಟದ ಕಾಮೆಂಟರಿ ತಂಡದೊಂದಿಗೆ ಹಾಗೂ ನಾನು ಈಗಾಗಲೇ ಜೊತೆಯಾಗಿ ಆಡಿದ ಆಟಗಾರರ ಬಗ್ಗೆ ಕಾಮೆಂಟ್ ಮಾಡುವುದು ಇನ್ನಷ್ಟು ಆಸಕ್ತಿದಾಯಕವಾಗಿದೆ” ಎಂದು ಕಾರ್ತಿಕ್ ಐಸಿಸಿಗೆ ತಿಳಿಸಿದ್ದಾರೆ.

ಇದನ್ನೂ ಒದಿ | Brother's Day 2024: ಪಠಾಣ್‌ ಸಹೋದರರಿಂದ ಪಾಂಡ್ಯವರೆಗೆ; ಭಾರತೀಯ ಕ್ರಿಕೆಟ್‌ನ ಸ್ಟಾರ್‌ ಅಣ್ಣ-ತಮ್ಮಂದಿರಿವರು

ಈ ಬಾರಿ ಕೂಡಾ ಭಾರತದ ಹಲವು ದಿಗ್ಗಜರು ಕಾಮೆಂಟರಿ ಮೂಲಕ ಪಂದ್ಯದ ಆಕರ್ಷಣೆ ಹೆಚ್ಚಿಸಲಿದ್ದಾರೆ. ರವಿಶಾಸ್ತ್ರಿ, ಹರ್ಷಾ ಭೋಗ್ಲೆ, ಸುನಿಲ್ ಗವಾಸ್ಕರ್ ಅವರಂಥ ಅನುಭವಿ ವೀಕ್ಷಕ ವಿವರಣೆಕಾರರು ಪಾಲು ಪಡೆದಿದ್ದಾರೆ. ನಾಸರ್ ಹುಸೇನ್, ಇಯಾನ್ ಬಿಷಪ್ ಮತ್ತು ಮೆಲ್ ಜೋನ್ಸ್ ಕಾಮೆಂಟರಿ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ಯಾನೆಲ್‌ನಲ್ಲಿ ಹಲವು ದಿಗ್ಗಜರು

ಅನೇಕ ಮಾಜಿ ಕ್ರಿಕೆಟಿಗರು ಮತ್ತು ವಿಶ್ವಕಪ್ ವಿಜೇತ ಆಟಗಾರರು ಪಂದ್ಯಾವಳಿಯ ಸಮಯದಲ್ಲಿ ತಮ್ಮ ಅನುಭವ ಹಾಗೂ ಅಭಿಪ್ರಾಯವನ್ನು ವೀಕ್ಷಕ ವಿವರಣೆಯ ಮೂಲಕ ಹೇಳಲಿದ್ದಾರೆ. ಎಬೊನಿ ರೈನ್‌ಫೋರ್ಡ್-ಬ್ರೆಂಟ್, ಸ್ಯಾಮ್ಯುಯೆಲ್ ಬದ್ರಿ, ಕಾರ್ಲೋಸ್ ಬ್ರಾಥ್‌ವೈಟ್, ಸ್ಟೀವ್ ಸ್ಮಿತ್, ಆರನ್ ಫಿಂಚ್ ಮತ್ತು ಲಿಸಾ ಸ್ಥಾಲೇಕರ್ ಈ ತಂಡದಲ್ಲಿದ್ದಾರೆ.

ಆಸೀಸ್‌ ದಿಗ್ಗಜ ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಂ ಕೂಡ ಐಸಿಸಿ ಪಂದ್ಯಾವಳಿಯಲ್ಲಿ ವಿಶ್ಲೇಷಣೆ ಮಾಡಲಿದ್ದಾರೆ. ಅಮೆರಿಕದ ವೀಕ್ಷಕ ವಿವರಣೆಗಾರ ಜೇಮ್ ಒ'ಬ್ರೇನ್ ತಮ್ಮ ದೇಶದ ಅಭಿಮಾನಿಗಳನ್ನು ರಂಜಿಸಲು ವಿಶ್ವಕಪ್‌ಗೆ ಧುಮುಕಲಿದ್ದಾರೆ. ಉಳಿದಂತೆ ಡೇಲ್ ಸ್ಟೇಯ್ನ್, ಗ್ರೇಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೌಲ್, ಶಾನ್ ಪೊಲಾಕ್ ಮತ್ತು ಕೇಟಿ ಮಾರ್ಟಿನ್ ಕೂಡಾ ಈ ತಂಡದಲ್ಲಿದ್ದಾರೆ.

ಇದನ್ನೂ ಓದಿ | SRH vs RR live score IPL 2024: ಸನ್‌ರೈಸರ್ಸ್‌ ಹೈದರಾಬಾದ್‌ vs ರಾಜಸ್ಥಾನ್‌ ರಾಯಲ್ಸ್‌ ಪಂದ್ಯದ ಲೇಟೆಸ್ಟ್‌ ಅಪ್ಡೇಟ್‌

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ