ಟೀಮ್ ಇಂಡಿಯಾ ಅಭ್ಯಾಸ ವೇಳೆ ಆಟಗಾರರಿಗೆ ಬಾಡಿ ಶೇಮಿಂಗ್, ಪ್ರಾಕ್ಟೀಸ್‌ಗೆ ಅಡ್ಡಿ; ಫ್ಯಾನ್ಸ್ ನಡೆಗೆ ಬಿಸಿಸಿಐ ಕ್ರಮ
Dec 04, 2024 04:46 PM IST
ಟೀಮ್ ಇಂಡಿಯಾ ಅಭ್ಯಾಸ ವೇಳೆ ಆಟಗಾರರಿಗೆ ಬಾಡಿ ಶೇಮಿಂಗ್, ಪ್ರಾಕ್ಟೀಸ್‌ಗೆ ಅಡ್ಡಿ
- ಅಡಿಲೇಡ್‌ನಲ್ಲಿ ಟೀಮ್ ಇಂಡಿಯಾ ಆಟಗಾರರ ಅಭ್ಯಾಸದ ವೇಳೆ ಅಭಿಮಾನಿಗಳು ಅಡ್ಡಿಪಡಿಸಿದ್ದಾರೆ. ಭಾರತೀಯ ಕ್ರಿಕೆಟಿಗರ ಮೇಲೆ ಫ್ಯಾನ್ಸ್ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಜೋರಾಗಿ ಕಾಮೆಂಟ್, ಬಾಡಿ ಶೇಮಿಂಗ್ ಕೂಡಾ ನಡೆದಿದೆ. ಹೀಗಾಗಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯವು ಅಡಿಲೇಡ್‌ನಲ್ಲಿ ನಿಗದಿಯಾಗಿದೆ. ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದು, ಈವರೆಗೂ ಅಭ್ಯಾಸದ ವೇಳೆ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಆಟಗಾರರ ಅಭ್ಯಾಸಕ್ಕೆ ಅಭಿಮಾನಿಗಳು ವಿವಿಧ ರೀತಿಯಿಂದ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ, ಉಳಿದ ಪಂದ್ಯಗಳಿಗೆ ಅಭ್ಯಾಸ ಅವಧಿ ವೇಳೆ ಅಭಿಮಾನಿಗಳ ಪ್ರವೇಶವನ್ನು ರದ್ದುಗೊಳಿಸಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ಭಾರತದ ಎರಡನೇ ಅಭ್ಯಾಸ ಅವಧಿ ಮಂಗಳವಾರ ನಿಗದಿಯಾಗಿತ್ತು. ಅಭ್ಯಾಸದ ಸಮಯದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಭಾಗಿಯಾಗಿದ್ದರು. ಈ ಬಾರಿ ಅಭ್ಯಾಸವನ್ನು ನೋಡಲು ಅಭಿಮಾನಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಅಭಿಮಾನಿಗಳು ಜೋರಾಗಿ ಬೊಬ್ಬೆ ಹಾಕುತ್ತಾ ವಿವಿಧ ರೀತಿಯಲ್ಲಿ ಅಡ್ಡಿಪಡಿಸಿದ್ದಾರೆ.
ಡಿಸೆಂಬರ್ 6ರ ಶುಕ್ರವಾರದಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಹೀಗಾಗಿ ಭಾರತೀಯ ಕ್ರಿಕೆಟಿಗರು ಗುಲಾಬಿ ಚೆಂಡಿನೊಂದಿಗೆ ತರಬೇತಿ ಪಡೆಯುತ್ತಿರುವ ದೃಶ್ಯವನ್ನು ನೋಡಲು ಸುಮಾರು 3000ಕ್ಕೂ ಹೆಚ್ಚು ಅಭಿಮಾನಿಗಳು ನೆಟ್ಸ್ ಸುತ್ತಲೂ ಜಮಾಯಿಸಿದ್ದರು. ಸಾಮಾನ್ಯವಾಗಿ, ಅಂತಾರಾಷ್ಟ್ರೀಯ ಪಂದ್ಯಕ್ಕೆ ಮುಂಚಿತವಾಗಿ ನಡೆಯುವ ಅಭ್ಯಾಸ ಅವಧಿ ಸಮಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಆದರೆ, ಈ ಬಾರಿ ಸ್ಥಳೀಯ ಅಡಿಲೇಡ್ ಪ್ರೇಕ್ಷಕರಿಗೆ ಅಭ್ಯಾಸ ನೋಡುವ ಅವಕಾಶ ನೀಡಲಾಗಿತ್ತು.
ಸೆಲ್ಫಿಗಾಗಿ ಮನವಿ, ಅನಗತ್ಯ ಕಾಮೆಂಟ್
ಪ್ರೇಕ್ಷಕರು ಮೌನವಾಗಿ ಅಭ್ಯಾಸ ನೋಡುವ ಬದಲಿಗೆ, ಸಾಕಷ್ಟು ಶಬ್ದ ಮಾಡಿದ್ದಾರೆ. ಆ ಮೂಲಕ ತಂಡದ ನಾಲ್ಕು ಗಂಟೆಗಳ ಸುದೀರ್ಘ ಅಭ್ಯಾಸಕ್ಕೆ ಅಡ್ಡಿಪಡಿಸಿದ್ದಾರೆ. ಆಟಗಾರರೊಂದಿಗೆ ಸೆಲ್ಫಿ ಪಡೆಯಲು ಅನೇಕರು ಸತತ ಮನವಿ ಮಾಡಿದ್ದಾರೆ. ಈ ನಡುವೆ ಕೆಲವು ಪ್ರೇಕ್ಷಕರ ಅಸಂಬದ್ಧ ಕಾಮೆಂಟ್‌ಗಳಿಂದ ಕ್ರಿಕೆಟಿಗರ ಅಭ್ಯಾಸಕ್ಕೆ ಅಡ್ಡಿಯಾಯ್ತು.
“ಮಂಗಳವಾರ ನಡೆದ ಬಹಿರಂಗ ಅಭ್ಯಾಸ ಸಮಯದಲ್ಲಿ ಸೆಲ್ಫಿಗಾಗಿ ಅನೇಕ ವಿನಂತಿಗಳು ಬಂದವು. ಆಟಗಾರ ಬಗ್ಗೆ ಅನಗತ್ಯ ಕಾಮೆಂಟ್‌ಗಳು ಹರಿಬಂದವು. ಮುಂದೆ ಸಾರ್ವಜನಿಕರಿಗೆ ತರಬೇತಿ ನೋಡಲು ಅವಕಾಶ ನೀಡಲಾಗುವುದಿಲ್ಲ. ಆದರೆ, ಮಾಧ್ಯಮಗಳು ಬಂದು ಆಟಗಾರರ ತರಬೇತಿಯನ್ನು ನೋಡಬಹುದು” ಎಂದು ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿವೆ.
ಭಾರತದ ಅಭ್ಯಾಸ ನೋಡಲು 3000ಕ್ಕೂ ಹೆಚ್ಚು ಜನರು
ಇದೇ ವೇಳೆ ಟೀಮ್ ಇಂಡಿಯಾ ಕ್ರಿಕೆಟಿಗರ ಬಗ್ಗೆ ಅಸಭ್ಯ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. “ಆಸ್ಟ್ರೇಲಿಯಾದ ತರಬೇತಿ ಸಮಯಲ್ಲಿ, 70ಕ್ಕಿಂತ ಹೆಚ್ಚು ಜನರು ಬಂದಿರಲಿಲ್ಲ. ಆದರೆ ಭಾರತದ ಅಭ್ಯಾಸ ಸಮಯದಲ್ಲಿ 3000ಕ್ಕೂ ಹೆಚ್ಚು ಜನರು ಬಂದರು. ಇಷ್ಟು ಅಭಿಮಾನಿಗಳು ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಸಿಕ್ಸರ್ ಬಾರಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಇನ್ನೊಬ್ಬ ಆಟಗಾರನ ಫಿಟ್ನೆಸ್ ಬಗ್ಗೆ ಕಾಮೆಂಟ್ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಹೆಚ್ಚು ತೊಂದರೆಗೊಳಗಾದರು. ಕೆಲವರು ಸ್ನೇಹಿತರೊಂದಿಗೆ ಫೇಸ್‌ಬುಕ್ ಲೈವ್ ಮಾಡಿ ಜೋರಾಗಿ ಮಾತನಾಡುತ್ತಿದ್ದರು. ಇವೆಲ್ಲಾ ಆಟಗಾರರಿಗೆ ಅಡ್ಡಿಪಡಿಸಿದೆ.