ವಿರಾಟ್ ಕೊಹ್ಲಿ ಮೊಣಕಾಲಿನಲ್ಲಿ ಬ್ಯಾಂಡೇಜ್; ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಗಾಯದ ಭೀತಿ
ವಿರಾಟ್ ಕೊಹ್ಲಿ ಮೊಣಕಾಲಿಗೆ ಬ್ಯಾಂಡೇಜ್ ಹಾಕಿ ಫೀಲ್ಡಿಂಗ್ ಅಭ್ಯಾಸ ಮಾಡುತ್ತಿದ್ದರು. ಇದು ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ಅಡಿಲೇಡ್‌ನಲ್ಲಿ ಮಹತ್ವದ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಭಾರತ ತಂಡಕ್ಕೆ ವಿರಾಟ್ ಆಟ ನಿರ್ಣಾಯಕವಾಗಿದೆ.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ಅಭ್ಯಾಸದ ಸಮಯದಲ್ಲಿ ಟೀಮ್ ಇಂಡಿಯಾ ಭಾರಿ ಗಾಯದ ಭೀತಿಯನ್ನು ಅನುಭವಿಸಿದೆ. ಭಾರತ ತಂಡದ ಬ್ಯಾಟಿಂಗ್ ದೈತ್ಯ ವಿರಾಟ್ ಕೊಹ್ಲಿ ತಮ್ಮ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದು ಕಂಡುಬಂದಿದೆ. ಆದರೆ, ಕೊಹ್ಲಿ ಹೆಚ್ಚು ಸಮಸ್ಯೆ ಇಲ್ಲದೆ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದ್ದಾರೆ.
ಕೊಹ್ಲಿ ಮೊಣಕಾಲಿಗೆ ಬ್ಯಾಂಡೇಜ್ ಹಾಕಿಯೇ ಫೀಲ್ಡಿಂಗ್ ಅಭ್ಯಾಸ ಮಾಡುತ್ತಿದ್ದರು. ಆದರೆ ಯಾವುದೇ ರೀತಿಯ ಹೆಚ್ಚಿನ ಸಮಸ್ಯೆ ಅನುಭವಿಸಿಲ್ಲ. ಅಡಿಲೇಡ್‌ನಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್‌ನಲ್ಲಿ ಭಾರತದ ಮುಂದೆ ದೊಡ್ಡ ಸವಾಲಿದೆ. ಇದಕ್ಕಾಗಿ ತಯಾರಿ ನಡೆಸಲು ನೆಟ್ಸ್ ಸೆಷನ್‌ನಲ್ಲಿ ಭಾಗವಹಿಸಿದರು. ಗುಲಾಬಿ ಚೆಂಡುಗಳನ್ನು ಸಮರ್ಥವಾಗಿ ಎದುರಿಸಿ ಬ್ಯಾಟಿಂಗ್ ಮಾಡಿದರು. ಎರಡನೇ ಟೆಸ್ಟ್ ವೇಳೆಗೆ ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿರಬೇಕೆಂದು ಮ್ಯಾನೇಜ್ಮೆಂಟ್ ಬಯಸುತ್ತದೆ. ಹೀಗಾಗಿ ಕೊಹ್ಲಿ ಗಾಯವು ಉಲ್ಬಣಗೊಳ್ಳದಂತೆ ಎಚ್ಚರ ವಹಿಸುತ್ತಿದೆ.
ಭಾರತದ ಮಾಜಿ ನಾಯಕ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ಬದಲಿಗೆ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಆಟಗಾರರ ಎಸೆತಗಳಿಗೆ ನೆಟ್ ಸೆಷನ್‌ನಲ್ಲಿ ಅಭ್ಯಾಸ ಮಾಡಿದರು. ಸದ್ಯ ವಿರಾಟ್ ಗಾಯಾಳುವಂತೆ ಕಂಡರೂ ಹೆಚ್ಚಿನ ಭೀತಿ ಇಲ್ಲ.
ಅಡಿಲೇಡ್‌ನಲ್ಲಿ ವಿರಾಟ್ ಬ್ಯಾಟಿಂಗ್ ಅಬ್ಬರ
ಅಡಿಲೇಡ್‌ನಲ್ಲಿ 8 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ, 63.62ರ ಭರ್ಜರಿ ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. 36ರ ಹರೆಯದ ಆಟಗಾರ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದಾರೆ. ಅಡಿಲೇಡ್‌ನಲ್ಲಿ 3 ಶತಕಗಳನ್ನು ಸಿಡಿಸಿರುವ ಆಟಗಾರ ಈ ಮೈದಾನದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಇಂಗ್ಲೆಂಡ್‌ನ ಜ್ಯಾಕ್ ಹಾಬ್ಸ್ ಅವರ ದಾಖಲೆ ಹಿಂದಿಕ್ಕಲು ಇನ್ನೊಂದು ಸೆಂಚುರಿ ಬಾರಿಸಬೇಕಿದೆ.
ಪಿಂಕ್-ಬಾಲ್ ಟೆಸ್ಟ್‌ನಲ್ಲಿ ವಿರಾಟ್ ಉತ್ತಮ ದಾಖಲೆ ಹೊಂದಿದ್ದಾರೆ. ಇಲ್ಲಿಯವರೆಗೆ ಭಾರತದ ಎಲ್ಲಾ ಹಗಲು-ರಾತ್ರಿ ಟೆಸ್ಟ್‌ಗಳನ್ನು ಆಡಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ 46.16 ಸರಾಸರಿಯಲ್ಲಿ 277 ರನ್ ಗಳಿಸಿದ್ದಾರೆ. 2019ರಲ್ಲಿ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಜೇಯ 136 ರನ್ ಗಳಿಸಿದ್ದರು. ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತೀಯರ ಪೈಕಿ ಏಕೈಕ ಶತಕ ಇದಾಗಿದೆ.
ಶುಭ್ಮನ್ ಗಿಲ್ ಕಂಬ್ಯಾಕ್
ಅತ್ತ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ, ಶುಭ್ಮನ್ ಗಿಲ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗಾಯದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಅವರು ಆಡುವ ಸಾಧ್ಯತೆ ಇದೆ.
ಪರ್ತ್ ಟೆಸ್ಟ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಗೆಲುವಿನತ್ತ ಮುನ್ನಡೆಯಲು ಎರಡನೇ ಟೆಸ್ಟ್ ಜಯದತ್ತ ಎದುರು ನೋಡುತ್ತಿದೆ. ಆಸೀಸ್ ವಿರುದ್ಧ ಈ ಹಿಂದೆ ಒಂದು ಬಾರಿ ಪಿಂಕ್ ಬಾಲ್ ಟೆಸ್ಟ್ ಆಡಿದ್ದ ಭಾರತ ಅದರಲ್ಲಿ ಮುಗ್ಗರಿಸಿತ್ತು. ಉಳಿದಂತೆ ಇತರ ಮೂರು ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಗೆದ್ದಿದೆ.