logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ಗಾಗಿ ಅಮೆರಿಕ ಹಾರಿದ ಟೀಮ್ ಇಂಡಿಯಾ ಆಟಗಾರರು; ವಿಚ್ಛೇದನ ವದಂತಿ ನಡುವೆ ಹಾರ್ದಿಕ್ ಪಾಂಡ್ಯ ಗೈರು

ಟಿ20 ವಿಶ್ವಕಪ್‌ಗಾಗಿ ಅಮೆರಿಕ ಹಾರಿದ ಟೀಮ್ ಇಂಡಿಯಾ ಆಟಗಾರರು; ವಿಚ್ಛೇದನ ವದಂತಿ ನಡುವೆ ಹಾರ್ದಿಕ್ ಪಾಂಡ್ಯ ಗೈರು

Jayaraj HT Kannada

May 26, 2024 11:29 AM IST

google News

ಟಿ20 ವಿಶ್ವಕಪ್‌ಗಾಗಿ ಅಮೆರಿಕ ಹಾರಿದ ಟೀಮ್ ಇಂಡಿಯಾ ಆಟಗಾರರು

    • ICC T20 World Cup 2024: ಟಿ20 ವಿಶ್ವಕಪ್‌ ಪಂದ್ಯಾವಳಿಗಾಗಿ ಟೀಮ್ ಇಂಡಿಯಾ ಆಟಗಾರರರ ಮೊದಲ ಬ್ಯಾಚ್‌ ನ್ಯೂಯಾರ್ಕ್‌ಗೆ ತೆರಳಿದೆ. ಆದರೆ, ತಂಡದೊಂದಿಗೆ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ.
ಟಿ20 ವಿಶ್ವಕಪ್‌ಗಾಗಿ ಅಮೆರಿಕ ಹಾರಿದ ಟೀಮ್ ಇಂಡಿಯಾ ಆಟಗಾರರು
ಟಿ20 ವಿಶ್ವಕಪ್‌ಗಾಗಿ ಅಮೆರಿಕ ಹಾರಿದ ಟೀಮ್ ಇಂಡಿಯಾ ಆಟಗಾರರು

ಐಪಿಎಲ್‌ ಅಭಿಯಾನ ಅಂತ್ಯಗೊಳಿಸಿದ ಟೀಮ್‌ ಇಂಡಿಯಾದ ಕ್ರಿಕೆಟಿಗರು, ಇದೀಗ ಟಿ20 ವಿಶ್ವಕಪ್‌ ಮೂಡ್‌ನಲ್ಲಿದ್ದಾರೆ. ವಿಶ್ವಸಮರಕ್ಕಾಗಿ ಭಾರತ ತಂಡವು ಅಮೆರಿಕ ವಿಮಾನ ಹತ್ತಿದೆ. ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಭಾರತೀಯ ಕ್ರಿಕೆಟಿಗರ ಮೊದಲ ತಂಡವು ಯುಎಸ್ಎಗೆ ಪ್ರಯಾಣಿಸಿದೆ. ಮುಂಬೈ ವಿಮಾನ ನಿಲ್ದಾಣದಿಂದ ದುಬೈ ಮೂಲಕ ನ್ಯೂಯಾರ್ಕ್‌ಗೆ ಹಾರಿದೆ. ಜೂನ್ 2ರಿಂದ ಟಿ20 ವಿಶ್ವಕಪ್ 2024ರ ಪಂದ್ಯಾವಳಿ ನಡೆಯುತ್ತಿದ್ದು, ರವೀಂದ್ರ ಜಡೇಜಾ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಮೊದಲ ಹಂತದಲ್ಲಿ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಇವರೊಂದಿಗೆ ಸಹಾಯಕ ಸಿಬ್ಬಂದಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡಾ ಸೇರಿದ್ದಾರೆ.

ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಯಾವುದೇ ಆಟಗಾರ ಐಪಿಎಲ್‌ ಆಡುವ ಸಲುವಾಗಿ ತವರಲ್ಲಿ ಉಳಿಯಬೇಕಾಗಿಲ್ಲ. ಆದರೆ, ಇನ್ನೂ ಕೆಲವು ಆಟಗಾರರು ಮೊದಲ ಹಂತದಲ್ಲಿ ಭಾರತ ತೊರೆದಿಲ್ಲ. ಮೊದಲ ಬ್ಯಾಚ್‌ನಲ್ಲೇ ರೋಹಿತ್ ಮತ್ತು ವಿರಾಟ್ ಕೊಹ್ಲಿ ಕೂಡಾ ಪ್ರಯಾಣಿಸಲಿದ್ದಾರೆ ಎಂದು ಈ ಹಿಂದೆ ವರದಿಗಳು ಸೂಚಿಸಿದ್ದವು. ಆದಾರೂ, ಕೊಹ್ಲಿ ಈ ಗುಂಪಿನೊಂದಿಗೆ ಕಾಣಿಸಿಕೊಂಡಿಲ್ಲ.

ಭಾರತ ತಂಡವು ಒಟ್ಟಾಗಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಟೀಮ್‌ ಇಂಡಿಯಾ ಆಟಗಾರರು ತಮ್ಮ ವಿಮಾನಕ್ಕಾಗಿ ಕಾಯುತ್ತಿರುವ ಚಿತ್ರವನ್ನು ಬಿಸಿಸಿಐ ಪೋಸ್ಟ್ ಹಂಚಿಕೊಂಡಿದೆ

ಕೊಹ್ಲಿ ಮಾತ್ರವಲ್ಲದೆ, ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಮೊದಲ ಬ್ಯಾಚ್‌ನೊಂದಿಗೆ ಗೈರು ಹಾಜರಾಗಿದ್ದರು. ಹಾರ್ದಿಕ್ ಕೂಡಾ ಮೊದಲ ಬ್ಯಾಚ್‌ನಲ್ಲೇ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಏಕೆಂದರೆ, ಮುಂಬೈ ಇಂಡಿಯನ್ಸ್‌ ಮೊದಲ ತಂಡವಾಗಿ ಐಪಿಎಲ್‌ನಿಂದ ಹೊರಬಿದ್ದಿತ್ತು. ಎಂಐ ತಂಡದ ಇತರ ಮೂವರು ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಮಾತ್ರ ತಂಡದ ಬಸ್‌ನಿಂದ ಇಳಿದು ಫೋಟೋಗಳಿಗೆ ಪೋಸ್ ನೀಡಿದರು. ಆದರೆ ಹಾರ್ದಿಕ್‌ ಮಾತ್ರ ಇರಲಿಲ್ಲ.

ಕಳೆದ ಕೆಲವು ತಿಂಗಳುಗಳಿಂದ ಹಲವಾರು ವಿವಾದಗಳನ್ನು ಹಾರ್ದಿಕ್ ಎದುರಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾದ ಬಳಿಕ ಸಾಕಷ್ಟು ಟೀಕೆ ಹಾಗೂ ತಮ್ಮದೇ ಅಭಿಮಾನಿಗಳಿಂದ ಆಕ್ರೋಶ ಎದುರಿಸಿದ ಅವರು, ತಂಡದೊಂದಿಗೆ ಕಠಿಣ ಆವೃತ್ತಿಯನ್ನು ಸಹಿಸಿಕೊಂಡರು. ಹಾರ್ದಿಕ್ ನಾಯಕತ್ವದಲ್ಲಿ ತಂಡವು ಲೀಗ್ ಹಂತದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಈ ನಡುವೆ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಏರುಪೇರಾಗಿದೆ.

ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ಸಂಬಂಧ ಮುರಿದುಬಿದ್ದಿದೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ. ಆದರೆ ಊಹಾಪೋಹಗಳಿಗೆ ಈ ಇಬ್ಬರಲ್ಲಿ ಯಾರೂ ಕೂಡಾ ಉತ್ತರ ನೀಡಿಲ್ಲ. ಹಾರ್ದಿಕ್ ಪ್ರಸ್ತುತ ತರಬೇತಿ ವಿಚಾರವಾಗಿ ಲಂಡನ್‌ನಲ್ಲಿದ್ದಾರೆ ಎಂಬ ವರದಿಗಳಿವೆ. ಅಲ್ಲಿಂದ ನೇರವಾಗಿ ರಾಷ್ಟ್ರೀಯ ತಂಡದೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸಿವೆ.

ಭಾರತ ವಿಶ್ವಕಪ್‌ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯುಜ್ವೇದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ | ನಮ್ಮ ತುಳುನಾಡು ಎಷ್ಟು ಚಂದ; ತುಳುವರ ಅಕ್ಕರೆ‌ ಮಾತುಗಳಿಗೆ ಮನಸೋತ ಸುನಿಲ್‌ ಶೆಟ್ಟಿ, ಕೆಎಲ್‌ ರಾಹುಲ್

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ