ನಮ್ಮ ತುಳುನಾಡು ಎಷ್ಟು ಚಂದ; ತುಳುವರ ಅಕ್ಕರೆ‌ ಮಾತುಗಳಿಗೆ ಮನಸೋತ ಸುನಿಲ್‌ ಶೆಟ್ಟಿ, ಕೆಎಲ್‌ ರಾಹುಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ನಮ್ಮ ತುಳುನಾಡು ಎಷ್ಟು ಚಂದ; ತುಳುವರ ಅಕ್ಕರೆ‌ ಮಾತುಗಳಿಗೆ ಮನಸೋತ ಸುನಿಲ್‌ ಶೆಟ್ಟಿ, ಕೆಎಲ್‌ ರಾಹುಲ್

ನಮ್ಮ ತುಳುನಾಡು ಎಷ್ಟು ಚಂದ; ತುಳುವರ ಅಕ್ಕರೆ‌ ಮಾತುಗಳಿಗೆ ಮನಸೋತ ಸುನಿಲ್‌ ಶೆಟ್ಟಿ, ಕೆಎಲ್‌ ರಾಹುಲ್

ಕರ್ನಾಟಕದ ಕರಾವಳಿ ತುಳುನಾಡಿನ ಜನರ ಆಚಾರ-ವಿಚಾರ, ಸಂಸ್ಕಾರ ಭಾರಿ ಚೆಂದ ಎಂದು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಹೇಳಿಕೊಂಡಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್ ಅನ್ನು ಅಳಿಯ ಕೆಎಲ್ ರಾಹುಲ್ ಕೂಡಾ ರಿಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

ತುಳುವರ ಅಕ್ಕರೆ‌ ಮಾತುಗಳಿಗೆ ಮನಸೋತ ಸುನಿಲ್‌ ಶೆಟ್ಟಿ, ಕೆಎಲ್‌ ರಾಹುಲ್
ತುಳುವರ ಅಕ್ಕರೆ‌ ಮಾತುಗಳಿಗೆ ಮನಸೋತ ಸುನಿಲ್‌ ಶೆಟ್ಟಿ, ಕೆಎಲ್‌ ರಾಹುಲ್

ಬಾಲಿವುಡ್ ನಟ ಸುನಿಲ್ ಶೆಟ್ಟಿ ನಮ್ಮ ಕರ್ನಾಟಕದ ಕರಾವಳಿ ಮೂಲದವರು ಎಂಬುದು ಗೊತ್ತೇ ಇದೆ. ಇವರ ಅಳಿಯ, ಅಂದರೆ ಟೀಮ್‌ ಇಂಡಿಯಾ ಜನಪ್ರಿಯ ಕ್ರಿಕೆಟಿಗ ಕೆಎಲ್‌ ರಾಹುಲ್‌ ಕೂಡಾ ತಮ್ಮ ಬಾಲ್ಯದ ದಿನಗಳನ್ನು ತುಳುನಾಡಿನಲ್ಲಿ ಕಳೆದವರು. ಮಂಗಳೂರೆಂದರೆ ಈ ಮಾವ ಮತ್ತು ಅಳಿಯನಿಗೆ ಭಾರಿ ಪ್ರೀತಿ. ಈ ಬಗ್ಗೆ ಹಲವು ಬಾರಿ ಇವರು ಹೇಳಿಕೊಂಡಿದ್ದರು. ತುಳುನಾಡು ಭಾಗದಲ್ಲಿ ನಡೆಯುವ ಭೂತಕೋಲ ಸೇರಿದಂತೆ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಸುನಿಲ್‌ ಶೆಟ್ಟಿ ಹಾಜರಿರುತ್ತಾರೆ. ಇದೇ ವೇಳೆ ಬಿಡುವಿನ ಸಮಯದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗಗಳ ದೇವಸ್ಥಾನ ಮತ್ತು ದೈವಸ್ಥಾನಗಳಿಗೆ ಕ್ರಿಕೆಟಿಗ ಬರುತ್ತಿರುತ್ತಾರೆ. ಇದು ಕರಾವಳಿಯೊಂದಿಗಿನ ಇವರ ನಂಟು. ಇದೀಗ ತುಳುನಾಡಿನ ಜನರ ಆತ್ಮೀಯತೆಯ ಕುರಿತು ಈ ಮಾವ ಮತ್ತು ಅಳಿಯ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಟ ಸುನಿಲ್‌ ಶೆಟ್ಟಿ ತುಳುನಾಡಿನ ಜನರು ಅಕ್ಕರೆಯಿಂದ ಸ್ನೇಹಪರವಾಗಿ ಮಾತನಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ. ಈ ಕುರಿರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ತುಳುನಾಡು ಮತ್ತು ಇಲ್ಲಿನ ಸಂಸ್ಕಾರ ಎಷ್ಟು ಸುಂದರ ಅನ್ನೋ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಅನ್ನು ಅವರ ಅಳಿಯ ಕೆಎಲ್ ರಾಹುಲ್ ರಿಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಾವ ಮತ್ತು ಅಳಿಯ ಇಬ್ಬರೂ ತುಳುನಾಡು ಮೂಲದವರಾಗಿದ್ದು, ಕರಾವಳಿಯ ಆಚಾರ-ವಿಚಾರ, ಸಂಪ್ರಾದಾಯಗಳನ್ನು ಗೌರವಿಸುತ್ತಾರೆ. ಇಲ್ಲಿ ನಡೆಯುವ ಭೂತಾರಾಧನೆ ಸಂದರ್ಭದಲ್ಲಿ ಸುನಿಲ್‌ ಕಾಣಿಸಿಕೊಳ್ಳುತ್ತಾರೆ. ಸುನಿಲ್‌ ಶೆಟ್ಟಿ ಮಾತ್ರವಲ್ಲದೆ ಕರಾವಳಿ ಮೂಲದ ನಟಿಮಣಿಯರು ಕೂಡಾ ಹಾಜರಿರುತ್ತಾರೆ. ಬಾಲಿವುಡ್‌ನಲ್ಲಿ ಬೇರೂರಿರುವ ಸ್ಟಾರ್‌ಗಳು ಮುಂಬೈನಲ್ಲಿ ನೆಲೆಸಿದ್ದರೂ, ತುಳುನಾಡಿದ ಬಗೆಗಿನ ಅಭಿಮಾನ, ಅಕ್ಕರೆ ಈಗಲೂ ಇದೆ.

ಇನ್‌ಸ್ಟಾ ಸೋರಿಯಲ್ಲಿ ಏನಿದೆ?

ಕೆಎಲ್‌ ರಾಹುಲ್‌ ಇನ್‌ಸ್ಟಾ ಸೋರಿ
ಕೆಎಲ್‌ ರಾಹುಲ್‌ ಇನ್‌ಸ್ಟಾ ಸೋರಿ

ಸುನಿಲ್ ಶೆಟ್ಟಿ ಹಾಕಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದಿದ್ದಾರೆ. “ನಮ್ಮ ತುಳುನಾಡು ಎಷ್ಟು ಸುಂದರ. ನಾನು ಹೋಟೆಲ್‌ಗೆ ಹೋದಾಗ, ಅಲ್ಲಿನ ವೈಟರ್ ‌ಅನ್ನು ಧಣಿ (boss) ಎಂದು ಕರೆಯುತ್ತೇನೆ. ಆಗ ವೈಟರ್‌ ನನ್ನ ಬಳಿ ಬಂದು, ‘ಹೇಳಿ ಧಣಿ’ ಎಂದು ಹೇಳುತ್ತಾರೆ. ಹಾಗಂತಾ ನಾವಿಬ್ಬರೂ ಶ್ರೀಮಂತರಲ್ಲ. ನಾನು ಒಂದು ಅಂಗಡಿಗೆ ಹೋಗುತ್ತೇನೆ, ಅಂಗಡಿಯವರನ್ನು ಅಣ್ಣಾ ಎಂದು ಕರೆಯುತ್ತೇನೆ. ಅವರು ಅದಕ್ಕೆ ‘ಹೇಳಿ ಅಣ್ಣಾ’ ಎಂದು ಜವಾಬು ನೀಡುತ್ತಾರೆ. ಆದರೆ, ನಾವಿಬ್ಬರೂ ಸಹೋದರರಲ್ಲ. ಮೀನಿನ ಮಾರ್ಕೆಟ್‌ಗೆ ಹೋಗಿ, ಅಲ್ಲಿ ಮೀನು ಮಾರುವ ಮಹಿಳೆಯನ್ನು ಅಮ್ಮ ಎಂದು ಕರೆದರೆ, ಅವರು ಪ್ರತಿಯಾಗಿ 'ಹೇಳು ಮಗ' ಎಂದು ಪ್ರತಿಕ್ರಿಯಿಸುತ್ತಾರೆ. ಹಾಗಂತಾ ಅವರು ನನ್ನ ಹೆತ್ತಮ್ಮ ಅಲ್ಲ. ಇದು ಇವೆಲ್ಲಕ್ಕಿಂತ ಹೆಚ್ಚು. ನಮ್ಮ ತುಳುನಾಡಿನ ಶ್ರೀಮಂತ ಸಂಸ್ಕೃತಿ” ಎಂದು ಸುನಿಲ್‌ ಶೆಟ್ಟಿ ಬರೆದುಕೊಂಡಿದ್ದಾರೆ. ಇದನ್ನೇ ಕೆಎಲ್‌ ರಾಹುಲ್‌ ಕೂಡಾ ಹಂಚಿಕೊಂಡಿದ್ದಾರೆ.

ಸುನಿಲ್‌ ಅವರು ತಮ್ಮ ಮಗಳು ಆಥಿಯಾ ಶೆಟ್ಟಿ ಅವರನ್ನು ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅದರೊಂದಿಗೆ ಕರ್ನಾಟಕ ಹಾಗೂ ತುಳುನಾಡಿನ ಬಾಂಧವ್ಯ ಬೆಳೆಸಿದ್ದಾರೆ.

ಇದನ್ನೂ ಓದಿ | ಶಹಬಾಜ್‌ ಸ್ಥಾನ ನಿರ್ಣಾಯಕ; ಕೆಕೆಆರ್‌ ‌ವಿರುದ್ಧದ ಫೈನಲ್‌ ಪಂದ್ಯಕ್ಕೆ ಸನ್‌ರೈಸರ್ಸ್‌ ಸಂಭಾವ್ಯ ತಂಡ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner