ಟಿ20 ವಿಶ್ವಕಪ್ ಗೆಲ್ಲಲು ಬಿಸಿಸಿಐ ಪಣ; ಆಟಗಾರರ ಮೌಲ್ಯಮಾಪನಕ್ಕೆ ದಕ್ಷಿಣ ಆಫ್ರಿಕಾ ತೆರಳಿದ ಟೀಮ್ ಇಂಡಿಯಾ ಆಯ್ಕೆಗಾರರು
Dec 08, 2023 05:53 PM IST
ಡರ್ಬನ್‌ನಲ್ಲಿ ಅಭ್ಯಾಸ ಆರಂಭಿಸಿದ ಭಾರತ ತಂಡ
- India tour of South Africa: ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದ ಪಂದ್ಯಗಳನ್ನು ಮೌಲ್ಯಮಾಪನ ಮಾಡಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣದಿಂದ ಇಬ್ಬರು ಆಯ್ಕೆಗಾರರನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಲು ಸಜ್ಜಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಗಾಗಿ (India tour of South Africa) ಈಗಾಗಾಲೇ ಭಾರತ ತಂಡವು ಹರಿಣಗಳ ನಾಡು ತಲುಪಿದೆ. ಎಲ್ಲಾ ಮೂರು ಮಾದರಿಯ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ದಕ್ಷಿಣ ಆಫ್ರಿಕಾವನ್ನು (IND vs SA) ಎದುರಿಸಲಿದ್ದಾರೆ. ಡಿಸೆಂಬರ್ 10ರಿಂದ ಟಿ20 ಸರಣಿ ಆರಂಭವಾಗುತ್ತಿದ್ದು, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಚುಟುಕು ಸರಣಿಗೆ ಬಿಸಿಸಿಐ ಮಹತ್ವ ಕೊಟ್ಟಿದೆ.
ಮುಂಬರುವ ಚುಟುಕು ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾ ಪಂದ್ಯವನ್ನು ಮೇಲ್ವಿಚಾರಣೆ ಮಾಡಲು ಮುಂದಾಗಿದೆ. ಇದೇ ಕಾರಣದಿಂದ ಬಿಸಿಸಿಐನ ಇಬ್ಬರು ಆಯ್ಕೆಗಾರರನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸುತ್ತಿದೆ. ಆಯ್ಕೆ ಸಮಿತಿಯ ಸದಸ್ಯರಾದ ಎಸ್‌ಎಸ್ ದಾಸ್ ಮತ್ತು ಸಲೀಲ್ ಅಂಕೋಲಾ ಅವರು ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಟಿ20 ಸರಣಿಯ ವೇಳೆ ಹಾಜರಿರಲಿದ್ದಾರೆ. ಈಗಾಗಲೇ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿರುವ ಭಾರತ, ಮುಂದೆ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ | Watch: ದಕ್ಷಿಣ ಆಫ್ರಿಕಾ ತಲುಪಿದ ಟೀಮ್ ಇಂಡಿಯಾಗೆ ಮಳೆಯ ಸ್ವಾಗತ; ಟ್ರಾಲಿಯನ್ನು ಕೊಡೆಯಂತೆ ಬಳಸಿದ ಆಟಗಾರರು
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಎಸ್‌ಎಸ್ ದಾಸ್ ಮತ್ತು ಸಲೀಲ್ ಅಂಕೋಲಾ ಅವರು ಹಾಜರಿರುವ ಕುರಿತು ಕ್ರಿಕ್‌ಬಜ್ ವರದಿ ತಿಳಿಸಿದೆ. ಮುಂಬರುವ ಪಂದ್ಯಗಳಿಂದ ಎದುರಾಗುವ ಸವಾಲುಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ.
ಟಿ20 ವಿಶ್ವಕಪ್ 2024ಕ್ಕೆ ಮಾರ್ಗಸೂಚಿ
ಟಿ20 ವಿಶ್ವಕಪ್‌ಗೆ ಬಿಸಿಸಿಐ ತಂಡದ ಆಯ್ಕೆಗೆ ಪ್ರತ್ಯೇಕ ಮಾನದಂಡ ಅನುಸರಿಸುತ್ತಿದೆ. ಇದಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸವು ಆರಂಭಿಕ ಹಂತ. ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಒಂದಷ್ಟು ಅಂಶಗಳ ಮೇಲೆ ಬಿಸಿಸಿಐ ಗಮನ ಹರಿಸಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ತಂಡವನ್ನು ರೂಪಿಸಲು ಈ ಸರಣಿಯು ಆಯ್ಕೆ ಸಮಿತಿಗೆ ಒಂದು ಅಂದಾಜು ನೀಡಲಿದೆ. ಹೀಗಾಗಿ ಪ್ರವಾಸದಲ್ಲಿ ನಡೆಯಲಿರುವ ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿನ ಆಟಗಾರರ ಪ್ರದರ್ಶನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಅದರ ಮೌಲ್ಯಮಾಪನ ಮಾಡಲಾಗುತ್ತದೆ.
ಇಬ್ಬರು ಆಯ್ಕೆದಾರರು ಆಟಗಾರರ ಸ್ಥಿರತೆಯನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದರ ಜೊತೆಗೆ ಜಾಗತಿಕ ಹಣಾಹಣಿಗೆ ಸೂಕ್ತ ತಂಡವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಇದನ್ನೂ ಓದಿ | ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಯಾವ ಸರಣಿಯನ್ನೂ ಗೆಲ್ಲಲ್ಲ; ಆಕಾಶ್ ಚೋಪ್ರಾ ಭವಿಷ್ಯ
ಭಾನುವಾರದಂದು ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಡಿಸೆಂಬರ್ 14ರಂದು ಚುಟುಕು ಸರಣಿ ಅಂತ್ಯವಾಗಲಿದೆ. ಆ ಬಳಿಕ ಡಿಸೆಂಬರ್ 17ರಿಂದ ಏಕದಿನ ಸರಣಿ ಆರಂಭವಾಗಿ 21ರಂದು ಮುಕ್ತಾಯಗೊಳ್ಳಲಿದೆ. ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ