Watch: ದಕ್ಷಿಣ ಆಫ್ರಿಕಾ ತಲುಪಿದ ಟೀಮ್ ಇಂಡಿಯಾಗೆ ಮಳೆಯ ಸ್ವಾಗತ; ಟ್ರಾಲಿಯನ್ನು ಕೊಡೆಯಂತೆ ಬಳಸಿದ ಆಟಗಾರರು
India vs South Africa: ದಕ್ಷಿಣ ಆಫ್ರಿಕಾದ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತ ತಂಡವು ಡರ್ಬನ್‌ಗೆ ತಲುಪಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆದ್ದ ಭಾರತ ತಂಡ ಇದೀಗ ದಕ್ಷಿಣ ಆಫ್ರಿಕಾ ತಲುಪಿದೆ. ಡಿಸೆಂಬರ್ 10ರ ಭಾನುವಾರದಿಂದ ಆರಂಭವಾಗಲಿರುವ ಟಿ20 ಸರಣಿಗಾಗಿ ಟೀಮ್ ಇಂಡಿಯಾ ಆಟಗಾರರು ಆಫ್ರಿಕಾದ ಡರ್ಬನ್ ನಗರ ತಲುಪಿದ್ದಾರೆ. ಹರಿಣಗಳ ನಾಡಿಗೆ ಕಾಲಿಡುತ್ತಿದ್ದಂತೆಯೇ ಭಾರತೀಯ ಆಟಗಾರರನ್ನು ಮಳೆ ಅದ್ಧೂರಿಯಾಗಿ ಸ್ವಾಗತಿಸಿದೆ.
ವಿಮಾನ ನಿಲ್ದಾಣದಿಂದ ಹೋಟೆಲ್ ರೂಮ್‌ಗೆ ಹೋಗುವ ಬಸ್ ಹತ್ತುವ ವೇಳೆ ಟೀಮ್ ಇಂಡಿಯಾ ಆಟಗಾರರನ್ನು ಮಳೆ ಹನಿಗಳು ಸುತ್ತುವರಿದವು. ಬಸ್ಸಿನತ್ತ ಓಡುವಾಗ ವರುಣನಿಂದ ರಕ್ಷಣೆ ಪಡೆಯಲು ಆಟಗಾರರು ತಮ್ಮ ಲಗೇಜ್ ಟ್ರಾಲಿಗಳನ್ನು ಕೊಡೆಯಂತೆ ಬಳಸಿದ್ದಾರೆ. ಮಳೆಯಲ್ಲಿ ಅರೆಬರೆ ನೆನೆಯುತ್ತಾ ಹೋಟೆಲ್ ತಲುಪಿದ ಆಟಗಾರರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಇದನ್ನೂ ಓದಿ | ಇಂಡೋ-ಆಫ್ರಿಕಾ ಟಿ20 ಸರಣಿ: ಮುಖಾಮುಖಿ ದಾಖಲೆ, ಅತ್ಯಧಿಕ ರನ್, ವಿಕೆಟ್, ಗರಿಷ್ಠ ಸ್ಕೋರ್; ಸಂಪೂರ್ಣ ವಿವರ ಇಲ್ಲಿದೆ
ದಕ್ಷಿಣ ಆಫ್ರಿಕಾ ಪ್ರವಾಸದ ವಿಡಿಯೋ ತುಣುಕನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಆಟಗಾರರನ್ನು ಹೋಟೆಲ್ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಎಲ್ಲಾ ಮಾದರಿಯ ಸರಣಿ ನಡೆಯಲಿದೆ. ಇದೇ ಭಾನುವಾರದಂದು ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಡಿಸೆಂಬರ್ 14ರಂದು ಚುಟುಕು ಸರಣಿ ಅಂತ್ಯವಾಗಲಿದೆ. ಆ ಬಳಿಕ ಡಿಸೆಂಬರ್ 17ರಿಂದ ಏಕದಿನ ಸರಣಿ ಆರಂಭವಾಗಿ 21ರಂದು ಮುಕ್ತಾಯಗೊಳ್ಳಲಿದೆ. ಟೀಮ್ ಇಂಡಿಯಾದ ನಿಯಮಿತ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂಥ ಹಿರಿಯರು ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ.
ಏಕದಿನ ಸರಣಿ ಬಳಿಕ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಹಿರಿಯ ಆಟಗಾರರು ಮರಳಲಿದ್ದಾರೆ. ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಮುಂದಿನ ವರ್ಷ ಜನವರಿ 3ರಿಂದ ಕೇಪ್ ಟೌನ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ಇದುವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಸರಣಿ ಗೆದ್ದು ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿ ಭಾರತವಿದೆ.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ಕೊಹ್ಲಿ ಮೊದಲ ಆಯ್ಕೆ ಅಲ್ಲ, 3ನೇ ಸ್ಥಾನಕ್ಕೆ ಕಿಶನ್ ಫಿಕ್ಸ್; ಶೀಘ್ರದಲ್ಲೇ ವಿರಾಟ್ ಜೊತೆ ಬಿಸಿಸಿಐ ಸಭೆ
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.
ಏಕದಿನ ಸರಣಿಗೆ ಭಾರತ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ದೀಪಕ್ ಚಾಹರ್.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.