logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿಯನ್ನು ಹೊಸ ಮಾಲೀಕರಿಗೆ ಮಾರಿ ಬಿಡಿ; ಫಾಫ್‌ ಪಡೆಯ ಕಳಪೆ ಪ್ರದರ್ಶನದಿಂದ ರೊಚ್ಚಿಗೆದ್ದ ಮಹೇಶ್ ಭೂಪತಿ

ಆರ್‌ಸಿಬಿಯನ್ನು ಹೊಸ ಮಾಲೀಕರಿಗೆ ಮಾರಿ ಬಿಡಿ; ಫಾಫ್‌ ಪಡೆಯ ಕಳಪೆ ಪ್ರದರ್ಶನದಿಂದ ರೊಚ್ಚಿಗೆದ್ದ ಮಹೇಶ್ ಭೂಪತಿ

Jayaraj HT Kannada

Apr 16, 2024 05:16 PM IST

google News

ಆರ್‌ಸಿಬಿಯ ಕಳಪೆ ಪ್ರದರ್ಶನದಿಂದ ರೊಚ್ಚಿಗೆದ್ದ ಮಹೇಶ್ ಭೂಪತಿ

    • ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪ್ರದರ್ಶನದಿಂದ ನಿರಾಶೆಗೊಂಡ ಭಾರತದ ಟೆನಿಸ್ ಆಟಗಾರ ಮಹೇಶ್ ಭೂಪತಿ, ಫ್ರಾಂಚೈಸಿಯನ್ನು ಮಾರಾಟ ಮಾಡುವಂತೆ ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಆರ್‌ಸಿಬಿಯ ಕಳಪೆ ಪ್ರದರ್ಶನದಿಂದ ರೊಚ್ಚಿಗೆದ್ದ ಮಹೇಶ್ ಭೂಪತಿ
ಆರ್‌ಸಿಬಿಯ ಕಳಪೆ ಪ್ರದರ್ಶನದಿಂದ ರೊಚ್ಚಿಗೆದ್ದ ಮಹೇಶ್ ಭೂಪತಿ

ಹೆಸರು ಮತ್ತು ಬಣ್ಣ ಬದಲಾದರೂ ಅದೃಷ್ಟ ಮಾತ್ರ ಬದಲಾಗಲಿಲ್ಲ. ಆರ್‌ಸಿಬಿ ತಂಡವು ಐಪಿಎಲ್‌ 2024ರಲ್ಲಿ ನೀಡುತ್ತಿರುವ ಪ್ರದರ್ಶನ ನೋಡಿ ಈ ಮಾತನ್ನು ಹೇಳದ ಅಭಿಮಾನಿಗಳಿರಲು ಸಾಧ್ಯವಿಲ್ಲ. ಟೂರ್ನಿ ಆರಂಭಕ್ಕೂ ಮುನ್ನವೇ ಕಪ್ಪು ಬಣ್ಣದ ಜೆರ್ಸಿಯನ್ನು ನೀಲಿ ಬಣ್ಣಕ್ಕೆ ಬದಲಾಯಿಸಲಾಯ್ತು. ಅಷ್ಟೇ ಅಲ್ಲ, ಇಂಗ್ಲೀಷ್‌ನಲ್ಲಿದ್ದ ಬ್ಯಾಂಗಲೂರ್‌ ಹೆಸರನ್ನು ಬೆಂಗಳೂರು ಆಗಿ ಬದಲಾಯಿಸಲಾಯ್ತು. ಇದು ಆರ್‌ಸಿಬಿಯ ಹೊಸ ಅಧ್ಯಾಯವೆಂದು ಹೇಳಿದರೂ, ಹಳೆ ಚಾಳಿಯೇ ಮುಂದುವರೆಯಿತು. ಪ್ರಸಕ್ತ ಆವೃತ್ತಿಯಲ್ಲಿ ಸೋಲಿನ ಮೇಲೆ ಸೋಲು ಎದುರಿಸುವ ಮೂಲಕ ಅಭಿಮಾನಿಗಳ ನಿರೀಕ್ಷೆಗಳಿಗೆ ತಂಡವು ಕೊಳ್ಳಿ ಇಟ್ಟಿದೆ. ಇದು ಹತಾಶೆ ಮತ್ತು ನಿರಾಶೆಯ ಮತ್ತೊಂದು ಋತುವಾಯಿತೇ ಹೊರತು, ಹೊಸ ಅಧ್ಯಾಯ ಇನ್ನೂ ಆರಂಭವಾಗಿಲ್ಲ.

ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಆರ್‌ಸಿಬಿಯು 6ರಲ್ಲಿ ಸೋತಿದೆ. ಕೇವಲ ಒಂದು ಮಾತ್ರ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಲ್ಲಿದೆ. ಇದರೊಂದಿಗೆ 17ನೇ ಆವೃತ್ತಿಯಿಂದ ಹೊರಬೀಳುವ ಭೀತಿಯಲ್ಲಿದೆ. ಲೆಕ್ಕಾಚಾರಗಳ ಪ್ರಕಾರ, ತಂಡಕ್ಕೆ ಇನ್ನೂ ಪ್ಲೇ ಆಫ್‌ ಪ್ರವೇಶಿಸುವ ಅವಕಾಶಗಳಿವೆ. ಆದರೆ, ಇದಕ್ಕೆ ಮ್ಯಾಜಿಕ್‌ ನಡೆಯಬೇಕಷ್ಟೆ. ತಂಡವು ಸದ್ಯ ನೀಡುತ್ತಿರುವ ಪ್ರದರ್ಶನವನ್ನು ನೋಡಿದರೆ, ಕನಿಷ್ಠ ಒಂದು ಗೆಲುವು ಸಾಧಿಸುವುದು ಕೂಡಾ ಕಷ್ಟ. ಹೀಗಾಗಿ ಉಳಿದಿರುವ ಏಳು ಪಂದ್ಯಗಳಲ್ಲಿ ಕನಿಷ್ಠ ಆರು ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿ ತಂಡವಿದೆ.

ಈ ಬಾರಿಯೂ ಅಭಿಮಾನಿಗಳು ತಂಡದ ಪ್ರದರ್ಶನದಿಂದ ಬೇಸರಗೊಂಡಿದ್ದಾರೆ. ಇದಕ್ಕೂ ಮುಖ್ಯವಾಗಿ ಮ್ಯಾನೇಜ್‌ಮೆಂಟ್‌ ನಿರ್ಧಾರಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಆರ್‌ಸಿಬಿ ತಂಡಕ್ಕೆ ಹಲವು ಅಭಿಮಾನಿಗಳಿದ್ದಾರೆ. ಇದರಲ್ಲಿ ಸೆಲೆಬ್ರಿಟಿ ಫ್ಯಾನ್ಸ್‌ ಸಂಖ್ಯೆ ಕೂಡಾ ದೊಡ್ಡದಿದೆ. ಈ ಬಾರಿ ಆರ್‌ಸಿಬಿ ತಂಡದ ಕಳಪೆ ಪ್ರದರ್ಶನದಿಂದ ಭಾರತದ ದಿಗ್ಗಜ ಟೆನಿಸ್ ಆಟಗಾರ ಮಹೇಶ್ ಭೂಪತಿ ಕೂಡಾ ನಿರಾಶೆಗೊಂಡಿದ್ದಾರೆ. ಹೀಗಾಗಿ ಫ್ರಾಂಚೈಸಿಯನ್ನು ಮಾರುವಂತೆ ಬಿಸಿಸಿಗೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ | 7 ಪಂದ್ಯಗಳಲ್ಲಿ 6 ಸೋತು ಎಲಿಮಿನೇಷನ್ ಭೀತಿಯಲ್ಲಿರುವ ಆರ್​ಸಿಬಿಗೆ ಇನ್ನೂ ಇದೆ ಪ್ಲೇಆಫ್ ಅವಕಾಶ; ಹೇಗಂತೀರಾ?

ಆರ್‌ಸಿಬಿ ಫ್ರಾಂಚೈಸಿಯ ಮಾರಾಟ ಮಾಡುವಂತೆ ಬಿಸಿಸಿಐಗೆ ಭೂಪತಿ ಒತ್ತಾಯಿಸಿದ್ದಾರೆ. ಪುರುಷರ ಟೆನಿಸ್ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸೇರಿದಂತೆ 12 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಭೂಪತಿ, ಆರ್‌ಸಿಬಿ ಪ್ರದರ್ಶನದಿಂದ ನಿರಾಶರಾಗಿದ್ದಾರೆ. 17 ಋತುಗಳಿಂದ ಟ್ರೋಫಿ ಗೆಲ್ಲಲು ಸಾಧ್ಯವಾಗದ ಫ್ರಾಂಚೈಸಿಗೆ, ಹೊಸ ಮಾಲೀಕರು ಬಂದ ಮೇಲಾದರೂ ಒಳ್ಳೆಯದನ್ನು ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಆಟದ ಒಳಿತಿಗಾಗಿ, ಐಪಿಎಲ್‌ಗಾಗಿ, ಅಭಿಮಾನಿಗಳ ಖುಷಿಗಾಗಿ ಮಾತ್ರವಲ್ಲದೆ ಆಟಗಾರರ ಹಿತದೃಷ್ಟಿಯಿಂದ ಆರ್‌ಸಿಬಿಯನ್ನು ಬಿಸಿಸಿಐ ಹೊಸ ಮಾಲೀಕರಿಗೆ ಮಾರಾಟ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ನ ಇತರ ತಂಡಗಳಂತೆ ಹೊಸ ಮಾಲೀಕರು ಆರ್‌ಸಿಬಿ ಫ್ರಾಂಚೈಸಿಯನ್ನು ಪುನರ್ನಿರ್ಮಿಸಲು ನಿಜವಾಗಿಯೂ ಕಾಳಜಿ ವಹಿಸಬಹುದು” ಎಂದು ಭೂಪತಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಆಡಿದ ಕೊನೆಯ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಸೋಲು ಕಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌, ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ 287 ರನ್‌ ಕಲೆ ಹಾಕಿತು. ದಾಖಲೆಯ ಚೇಸಿಂಗ್‌ಗೆ ಕಣಕ್ಕಿಳಿದ ಆರ್‌ಸಿಬಿ, ಅಂತಿಮವಾಗಿ 7 ವಿಕೆಟ್‌ ಕಳೆದುಕೊಂಡು 262 ರನ್‌ ಗಳಿಸಿತು. ಕೇವಲ 25 ರನ್‌ಗಳಿಂದ ಪಂದ್ಯ ಕಳೆದುಕೊಂಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ