ಚೇಸಿಂಗ್‌ನಲ್ಲಿ 262 ರನ್ ಗಳಿಸಿ 25 ರನ್‌ಗಳಿಂದ ಸೋತ ಆರ್‌ಸಿಬಿ; ವಿಶ್ವದಾಖಲೆಯ ಪಂದ್ಯದಲ್ಲಿ ಗೆದ್ದು ಬೀಗಿದ ಸನ್‌ರೈಸರ್ಸ್
ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತೊಂದು ಪ್ರಚಂಡ ಗೆಲುವು ದಾಖಲಿಸಿದೆ. ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲೆ ನಿರ್ಮಿಸಿದೆ. ಅತ್ತ ಪಂದ್ಯದಲ್ಲಿ ಆರ್‌ಸಿಬಿ ತಂಡವು ದಾಖಲೆಯ ಚೇಸಿಂಗ್‌ನಲ್ಲಿ ಎಡವಿದರೂ, ಇನ್ನಿಂಗ್ಸ್‌ನಲ್ಲಿ ದಾಖಲೆಯ ಆಟವಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರ ಆವೃತ್ತಿಯಲ್ಲಿ ಆರನೇ ಸೋಲು ಕಂಡಿದೆ. ದಾಖಲೆಯ ಮೊತ್ತ ಒಟ್ಟಾದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 25 ರನ್‌ಗಳ ರೋಚಕ ಜಯ ಸಾಧಿಸಿದೆ. ಐಪಿಎಲ್ ಹಾಗೂ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ದಾಖಲಾದ ಪಂದ್ಯದಲ್ಲಿ ಗೆಲುವು ಮತ್ತೆ ಎಸ್‌ಆರ್‌ಎಚ್ ಪಾಲಾಗಿದೆ. ಆದರೂ, ಚೇಸಿಂಗ್ ವೇಳೆ ಆರ್‌ಸಿಬಿ ದಾಖಲಿಸಿದ 262 ರನ್ ಕೂಡಾ ದಾಖಲೆಯ ಪಟ್ಟಿ ಸೇರಿದೆ. ಸೋಲಿನ ನಡುವೆಯೂ, ತಂಡದ ಗೆಲುವಿಗಾಗಿ ಶತಾಯ ಗತಾಯ ಪ್ರಯತ್ನ ಹಾಕಿದ ದಿನೇಶ್ ಕಾರ್ತಿಕ್ ಸಿಡಿಸಿದ 83 ರನ್ ಅಭಿಮಾನಿಗಳ ಮನಗೆದ್ದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ 287 ರನ್ ಕಲೆ ಹಾಕಿತು. ದಾಖಲೆಯ ಚೇಸಿಂಗ್‌ಗೆ ಕಣಕ್ಕಿಳಿದ ಆರ್‌ಸಿಬಿ, ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತು. ಕೇವಲ 25 ರನ್‌ಗಳಿಂದ ಪಂದ್ಯ ಕಳೆದುಕೊಂಡಿತು.
ಚಿನ್ನಸ್ವಾಮಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್, ಆರಂಭದಿಂದಲೂ ಅಬ್ಬರದಾಟಕ್ಕೆ ಕೈ ಹಾಕಿತು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 108 ರನ್‌ಗಳೊಂದಿಗೆ ಶತಕದ ಜೊತೆಯಾಟವಾಡಿದರು. 34 ರನ್ ಗಳಿಸಿದ್ದ ಅಭಿಷೇಕ್, ಟಾಪ್ಲಿ ಎಸೆತದಲ್ಲಿ ಔಟಾದರು. ಈ ವೇಳೆ ಹೆಡ್ ಜೊತೆಗೂಡಿದ ಕ್ಲಾಸೆನ್ ಕೂಡಾ ವೇಗದ ಆಟವಾಡಿದರು. ಇವರಿಬ್ಬರೂ ಅರ್ಧಶತಕದ ಜೊತೆಯಾಟವಾಡಿದರು.
ಇದನ್ನೂ ಓದಿ | ಐಪಿಎಲ್‌ನಲ್ಲಿ 4ನೇ ಅತಿ ವೇಗದ ಶತಕ ಸಿಡಿಸಿದ ಟ್ರಾವಿಸ್ ಹೆಡ್; ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ಎಸ್‌ಆರ್‌ಎಚ್ ಆಟಗಾರ
ನೋಡ ನೋಡುತ್ತಲೇ ಟ್ರಾವಿಸ್ ಹೆಡ್ ಶತಕ ಸಿಡಿಸಿದರು. ಅಂತಿಮವಾಗಿ 41 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 102 ರನ್ ಗಳಿಸಿ ಔಟಾದರು. ಅತ್ತ ಕ್ಲಾಸೆನ್ 31 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 67 ರನ್ ಒಟ್ಟುಗೂಡಿಸಿದರು. ಡೆತ್ ಓವರ್‌ಗಳಲ್ಲಿ ಐಡೆನ್ ಮರ್ಕ್ರಾಮ್ ಮತ್ತು ಅಬ್ದುಲ್ ಸಮದ್ ಮತ್ತಷ್ಟು ಆಕ್ರಮಣಕಾರಿಯಾದರು. ಐಡೆನ್ 32 ರನ್ ಗಳಿಸಿದರೆ, ಸಮದ್ 370ರ ಸ್ಟ್ರೈಕ್ ರೇಟ್‌ನಲ್ಲಿ 37 ರನ್ ಪೇರಿಸಿದರು. ಬ್ಯಾಟಿಂಗ್‌ನಲ್ಲಿ ಸಮೂಹಿಕವಾಗಿ ಸಿಡಿದ ತಂಡವು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ನಿರ್ಮಿಸಿತು.
ಆರ್‌ಸಿಬಿ ದಾಖಲೆಯ ಆಟ
ಚೇಸಿಂಗ್ ನಡೆಸಿದ ಆರ್‌ಸಿಬಿ ಕೂಡಾ ಆರಂಭದಿಂದಲೇ ದೊಡ್ಡ ಹೊಡೆತಗಳಿಗೆ ಕೈ ಹಾಕಿತು. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಮೊದಲ ವಿಕೆಟ್‌ಗೆ 80 ರನ್ ಕಲೆ ಹಾಕಿದರು. ಆಕರ್ಷಕ ಹೊಡೆತಗಳೊಂದಿಗೆ ತವರಿನ ಅಭಿಮಾನಿಗಳನ್ನು ರಂಜಿಸಿದರು. 20 ಎಸೆತಗಳಲ್ಲಿ 42 ರನ್ ಗಳಿಸಿ ವಿರಾಟ್ ಕೊಹ್ಲಿ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಬಂದ ವಿಲ್ ಜ್ಯಾಕ್ಸ್ ದುರದೃಷ್ಟಕರ ರೀತಿಯಲ್ಲಿ ರನೌಟ್ ಆದರು. ಬಂದಂತೆಯೇ ದೊಡ್ಡ ಹೊಡೆತಗಳಿಗೆ ಕೈ ಹಾಕಿದ ರಜತ್ ಪಾಟೀದಾರ್ 9 ರನ್ ಗಳಿಸಿ ಮಾರ್ಕಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಒಂದು ಕಡೆ ವಿಕೆಟ್‌ಗಳು ಉದುರುತ್ತಿದ್ದರೂ ಅಬ್ಬರ ಮುಂದುವರೆಸಿದ ನಾಯಕ ಫಾಫ್, 28 ಎಸೆತಗಳಲ್ಲಿ 7 ಫೋರ್ ಹಾಗೂ 4 ಸಿಕ್ಸರ್ ಸಹಿತ 62 ರನ್ ಗಳಿಸಿದರು. ಈ ವೇಳೆ ಎದುರಾಳಿ ತಂಡದ ನಾಯಕ ಕಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು. ಅವರ ಬೆನ್ನಲ್ಲೇ ಸೌರವ್ ಚೌಹಾಣ್ ಎದುರಿಸಿದ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ದಿನೇಶ್ ಕಾರ್ತಿಕ್ ಆಟ ಮೆಚ್ಚಿದ ಚಿನ್ನಸ್ವಾಮಿ ಪ್ರೇಕ್ಷಕರು
ಈ ವೇಳೆ ಒಂದಾದ ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲೋಮ್ರರ್ ಸ್ಫೋಟಕ ಆಟವಾಡಿದರು. ಇವರಿಬ್ಬರೂ ಅರ್ಧಶತಕದ ಜೊತೆಯಾಟವಾಡಿದರು. ಎಲ್ಲದರ ನಡುವೆ ಅಭಿಮಾನಿಗಳ ಮನಗೆದ್ದಿದ್ದು, ದಿನೇಶ್ ಕಾರ್ತಿಕ್ ಆಟ. ತಂಡದ ರನ್ ಹೆಚ್ಚಿಸಲು ಶತಾಯ ಗತಾಯ ಪ್ರಯತ್ನಿಸಿದ ಡಿಕೆ, 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್‌ಗಳೊಂದಿಗೆ 83 ರನ್ ಗಳಿಸಿದರು. 19ನೇ ಓವರ್ ಅಂತ್ಯದಲ್ಲಿ ಔಟಾದಾಗ ಚಿನ್ನಸ್ವಾಮಿ ಮೈದಾನವೇ ಎದ್ದು ನಿಂತು ಅನುಭವಿ ಆಟಗಾರನಿಗೆ ಗೌರವ ಸಲ್ಲಿಸಿತು. ಪಂದ್ಯದಲ್ಲಿ ಆರ್‌ಸಿಬಿ ಸೋತರೂ, ಚೇಸಿಂಗ್ ವೇಳೆ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆಯನ್ನು ನಿರ್ಮಿಸಿತು.