ಭಾರತದ ವಿರುದ್ಧ 4 ಟೆಸ್ಟ್ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100 ಸಮೀಪಿಸಿದ ಬ್ಯಾಟಿಂಗ್ ಸರಾಸರಿ
Dec 15, 2024 02:40 PM IST
ಭಾರತದ ವಿರುದ್ಧ 4 ಟೆಸ್ಟ್ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100ರ ಗಡಿ ದಾಟಿದ ಬ್ಯಾಟಿಂಗ್ ಸರಾಸರಿ
- Travis Head: ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಅವರು ಸತತ 2ನೇ ಶತಕ ಸಿಡಿಸಿ ಮಿಂಚಿದ್ದಾರೆ. 160 ಎಸೆತಗಳಲ್ಲಿ 18 ಬೌಂಡರಿ ಸಹಿತ 152 ರನ್ ಬಾರಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್, ಶತಕ ಸಿಡಿಸಿ ಭಾರತ ತಂಡಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಿದ್ದಾರೆ. ಪಿಂಕ್ ಬಾಲ್ ಟೆಸ್ಟ್ನಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್ ಪಡೆಯ ಸೋಲಿಗೆ ಕಾರಣಕರ್ತರಾಗಿದ್ದ ಹೆಡ್, ಬ್ರಿಸ್ಬೇನ್ ಟೆಸ್ಟ್ನಲ್ಲೂ ಮೂರಂಕಿ ದಾಟಿದ್ದು, ಪ್ರಥಮ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆ ಹಾಕಲು ನೆರವಾಗಿದ್ದಾರೆ. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬಿರುಗಾಳಿ ಬ್ಯಾಟಿಂಗ್ ನಡೆಸಿದ ಹೆಡ್, 160 ಎಸೆತಗಳಲ್ಲಿ 18 ಬೌಂಡರಿ ಸಹಿತ 152 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಕೊನೆಯ 4 ಟೆಸ್ಟ್ ಪಂದ್ಯಗಳಲ್ಲಿ ಹೆಡ್, ಮೂರನೇ ಶತಕ ಸಿಡಿಸಿದ್ದಾರೆ. ಇದು ಭಾರತದ ವಿರುದ್ಧ ಸತತ 2ನೇ ಹಾಗೂ ಒಟ್ಟು 3ನೇ ಟೆಸ್ಟ್ ಶತಕ.
ವೃತ್ತಿಜೀವನದಲ್ಲಿ 9ನೇ ಟೆಸ್ಟ್ ಶತಕ ಸಿಡಿಸಿದ ಹೆಡ್, ಇಂದು (ಡಿಸೆಂಬರ್ 15) 115 ಎಸೆತಗಳಲ್ಲಿ 100ರ ಗಡಿ ದಾಟಿದರು. ಈ ಹಿಂದೆ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ 163 ರನ್ ಬಾರಿಸಿ ಪ್ರಶಸ್ತಿ ಗೆಲುವಿಗೆ ಸಹಾಯ ಮಾಡಿದ್ದ ಹೆಡ್, ಆ ಬಳಿಕ ಭಾರತದ ವಿರುದ್ಧ ಕಣಕ್ಕಿಳಿದಿದ್ದೇ ಪರ್ತ್ ಟೆಸ್ಟ್ನಲ್ಲಿ. ಈ ಪಂದ್ಯದಲ್ಲಿ ಶತಕ ಸಿಡಿಸಲು ವಿಫಲವಾಗಿದ್ದರು. ಆದರೆ ಇದೀಗ ಅಡಿಲೇಡ್, ಬ್ರಿಸ್ಬೇನ್ ಟೆಸ್ಟ್ನಲ್ಲಿ ಶತಕ ಬಾರಿಸಿದ್ದಾರೆ. ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ 141 ಎಸೆತಗಳಲ್ಲಿ 140 ರನ್ ಗಳಿಸಿದ್ದ ಹೆಡ್, ಆಸೀಸ್ಗೆ 10 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು. ಅಚ್ಚರಿ ಏನೆಂದರೆ ಹೆಡ್ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಗಬ್ಬಾ ಟೆಸ್ಟ್ನಲ್ಲೂ ಭಾರತ ತಂಡಕ್ಕೆ ಆತಂಕ ಮೂಡಿಸಿದೆ.
ಬಿಜಿಟಿಯಲ್ಲಿ 100+ ಬ್ಯಾಟಿಂಗ್ ಸರಾಸರಿ
ಅಲ್ಲದೆ, ಹೆಡ್ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಸೋತ ಇತಿಹಾಸ ಹೊಂದಿಲ್ಲ. ಒಂದು ವೇಳೆ ಈ ಪಂದ್ಯ ಸೋತರೆ ಟೀಮ್ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಕನಸು ಬಹುತೇಕ ಭಗ್ನಗೊಳ್ಳಲಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಹೆಡ್, 98ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಪರ್ತ್ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ 89 ರನ್ ಸಿಡಿಸಿದ್ದ ಹೆಡ್, ಇದೀಗ ಸತತ ಶತಕ ಬಾರಿಸಿದ್ದಾರೆ. ಭಾರತದ ವಿರುದ್ಧ ತಮ್ಮ ವೃತ್ತಿಜೀವನದಲ್ಲಿ 59.20ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದೀಗ ಮುಂದಿನ ಎರಡು ಟೆಸ್ಟ್ಗಳಲ್ಲೂ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.
ಸ್ಮಿತ್-ಹೆಡ್ ದ್ವಿಶತಕದ ಜೊತೆಯಾಟ
ಟ್ರಾವಿಸ್ ಹೆಡ್ ಜೊತೆಗೆ ಸ್ಟೀವ್ ಸ್ಮಿತ್ ಕೂಡ ಶತಕ ಬಾರಿಸಿದ್ದಾರೆ. 190 ಎಸೆತಗಳಲ್ಲಿ 12 ಬೌಂಡರಿ ಸಹಿತ 101 ರನ್ ಬಾರಿಸಿ ಔಟಾದರು. ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 75 ರನ್ ಆಗಿದ್ದಾಗ ಒಂದಾದ ಸ್ಮಿತ್-ಹೆಡ್ ಜೋಡಿ, 4ನೇ ವಿಕೆಟ್ಗೆ 241 ರನ್ ಪಾಲುದಾರಿಕೆ ಒದಗಿಸಿತು. ಇಬ್ಬರ ಅಬ್ಬರಕ್ಕೆ ಸುಸ್ತಾದ ಭಾರತೀಯ ಬೌಲರ್ಗಳು ವಿಕೆಟ್ ಪಡೆಯಲು ಹೆಣಗಾಡಿದರು. ಹೆಡ್-ಸ್ಮಿತ್ ಅಬ್ಬರದ ನಡುವೆಯೂ ಮಿಂಚಿದ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಉರುಳಿಸಿದರು. ಮೊದಲ ದಿನದಾಟದಂದು ಮಳೆಯ ಕಾರಣ 13.2 ಓವರ್ಗಳಿಗೆ ಸ್ಥಗಿತಗೊಂಡಿತ್ತು. ಆದರೆ ಎರಡನೇ ದಿನದಾಟದಂದು ಮಳೆ ಬಿಡುವು ನೀಡಿದೆ. ಎರಡನೇ ದಿನದ ಅಂತ್ಯಕ್ಕೆ 101 ಓವರ್ ಆಡಿರುವ ಆಸೀಸ್ 7 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿದೆ.