ಅಣ್ಣಾ, ಮೂರು ಇಡ್ಲಿ ಅಂತ ಆರ್ಡರ್ ಮಾಡಿದ ಅಭಿನಯ ಚಕ್ರವರ್ತಿ; ಆದರೆ ಕಿಚ್ಚ ಸುದೀಪ್ ಆ ಇಡ್ಲಿ ಮಾತ್ರ ಯಾಕ್ ಬೇಡ ಅಂದ್ರು!
Mar 17, 2024 04:29 PM IST
ಅಣ್ಣಾ, ಮೂರು ಇಡ್ಲಿ ಅಂತ ಆರ್ಡರ್ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.
- RCB Unbox event - Kiccha Sudeep : ಆರ್‌ಸಿಬಿ ಅನ್ಬಾಕ್ಸ್ ಈವೆಂಟ್ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದ್ದೀಪ್, ಹೆಸರು ಬದಲಾವಣೆ ಕುರಿತು ಸುಳಿವು ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ಕುಮಾರ್, ಮಿಸ್ಟರ್ ನ್ಯಾಗ್ಸ್, ಶಿವರಾಜ್ಕುಮಾರ್ ಬಳಿಕ ಕಿಚ್ಚ ಸುದೀಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾವಣೆ ಕುರಿತು ಸುಳಿವು ನೀಡುವ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಸಿಬಿ ಲೋಗೋ ಇರುವ ಬಾಕ್ಸ್ವೊಂದು ವೈರಲ್ ಆಗಿದ್ದು, ಅದರಲ್ಲಿ Royal Challengers Bangalore ಬದಲಿಗೆ Royal Challengers Bengaluru ಎಂದಿದೆ.
ಹೋಟೆಲ್ವೊಂದಕ್ಕೆ ಹೋಗಿರುವ ಕಿಚ್ಚ ಸುದೀಪ್, ಅಣ್ಣಾ ಮೂರು ಇಡ್ಲಿ ಎಂದು ಆರ್ಡರ್ ಮಾಡುತ್ತಾರೆ. ಮೂರು ಇಡ್ಲಿಗಳ ಮೇಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನ ಒಂದೊಂದು ಪದವನ್ನು ಬರೆಯಲಾಗಿದೆ. ಹೋಟೆಲ್ ಸಿಬ್ಬಂದಿ ತಂದ ಇಡ್ಲಿಗಳನ್ನು ಬಡಿಸುವಾಗ ರಾಯಲ್ ಮತ್ತು ಚಾಲೆಂಜರ್ಸ್ ಇಡ್ಲಿಯನ್ನು ಮಾತ್ರ ಸುದೀಪ್ ಹಾಕಿಸಿಕೊಳ್ಳುತ್ತಾರೆ. ಬೆಂಗಳೂರು (Bangalore) ಇರುವ ಇಡ್ಲಿಯನ್ನು ಬೇಡ ಎನ್ನುವುದಲ್ಲದೆ, ಬೇರೆ ತಗೊಂಡ್ ಬಾ ಅಂತಾರೆ.
ಹೀಗೆ ಹೇಳಿದ ಬಳಿಕ ಅಭಿನಯ ಚಕ್ರವರ್ತಿ ನಗುತ್ತಾ, ಅರ್ಥ ಆಯ್ತಾ ಎಂದು ಹೇಳುತ್ತಾರೆ. ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಸುದೀಪ್, ಮಾರ್ಚ್ 19ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗುವ ‘ಆರ್‌ಸಿಬಿ ಅನ್ಬಾಕ್ಸ್ ಈವೆಂಟ್‘ನಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಸುದೀಪ್, ಈಗಾಗಲೇ ಪ್ರೋಮೋದಲ್ಲಿ ಕಾಣಿಸಿಕೊಂಡ ರಿಷಬ್, ಅಶ್ವಿನಿ ಮತ್ತು ಶಿವಣ್ಣ ಅವರು ಅತಿಥಿಗಳಾಗಿ ಬರಲಿದ್ದಾರೆ. ಈ ಬಾರಿಯೂ ಕಾರ್ಯಕ್ರಮದ ದೊಡ್ಡಮಟ್ಟದಲ್ಲಿ ಇರಲಿದೆ.
ವಿರಾಟ್ ಕೊಹ್ಲಿ ಭಾಗಿ
ಅನ್ಬಾಕ್ಸ್ ಈವೆಂಟ್ನಲ್ಲಿ ಕೊಹ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ವರದಿಯಾಗಿತ್ತು. ಆದರೀಗ ಅವರು ಐಪಿಎಲ್ ಆಡಲು ಲಂಡನ್ನಿಂದ ಭಾರತಕ್ಕೆ ಬಂದಿಳಿದಿದ್ದಾರೆ. ಶೀಘ್ರವೇ ಅವರು ಆರ್‌ಸಿಬಿ ಕ್ಯಾಂಪ್ ಸೇರಲಿದ್ದು, ಅನ್ಬಾಕ್ಸ್ ಈವೆಂಟ್ನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಮಗ ಅಕಾಯ್ ಜನಿಸಿದ ನಂತರ ಅವರು ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಗಡ್ಡವೂ ಬಿಳಿಯಾಗಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಟಿಕೆಟ್ಗಳು ಅನ್ಸೋಲ್ಡ್
ಎಂ ಚಿನ್ನಸ್ವಾಮಿ ಮೈದಾನದಲ್ಲಿ ಮಾರ್ಚ್ 19ರ ಸಂಜೆ ನಡೆಯುವ ಈ ಕಾರ್ಯಕ್ರಮದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಕಾರ್ಯಕ್ರಮದ ಟಿಕೆಟ್ಗಳನ್ನು ಬುಕ್ ಮಾಡಿಕೊಳ್ಳಲು ಬುಕ್ ಮೈ ಶೋನಲ್ಲಿ ಆನ್ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆನ್ಲೈನ್ಗೆ ಬಿಟ್ಟ ಕೆಲವೇ ಗಂಟೆಗಳಲ್ಲಿ ಟಿಕೆಟ್ಗಳು ಬುಕ್ ಆಗಿದ್ದವು. ಅಲ್ಲದೆ, ಆಫ್ಲೈನ್ ಟಿಕೆಟ್ಗಳೂ ಸಹ ಬಿಕರಿಯಾಗಿವೆ.
ಸಿಎಸ್ಕೆ vs ಆರ್‌ಸಿಬಿ ಸೆಣಸಾಟ
17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22ರಿಂದ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಮುಖಾಮುಖಿಯಾಗಲಿವೆ. ಸದ್ಯ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಬಿಸಿಸಿಐ ಮೊದಲ ಹಂತದ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಮಾರ್ಚ್ 22ರಿಂದ ಏಪ್ರಿಲ್ 7ರ ತನಕ ಮೊದಲಾರ್ಧ 21 ಪಂದ್ಯಗಳು ನಡೆಯಲಿದೆ. ಶೀಘ್ರದಲ್ಲೇ ದ್ವಿತೀಯಾರ್ಧ ವೇಳಾಪಟ್ಟಿಯೂ ಪ್ರಕಟವಾಗಲಿದೆ.
ಭಾರತದಲ್ಲೇ ಸಂಪೂರ್ಣ ಐಪಿಎಲ್
ಲೋಕಸಭಾ ಚುನಾವಣೆಯು ಏಪ್ರಿಲ್ 19ರಿಂದ ಆರಂಭವಾಗಲಿದ್ದು 7 ಹಂತಗಳಲ್ಲಿ ನಡೆಯಲಿದೆ. ಹಾಗಾಗಿ ಭದ್ರತಾ ವಿಚಾರವಾಗಿ 7 ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಇದರ ಬೆನ್ನಲ್ಲೇ ಐಪಿಎಲ್ ಭಾರತದಿಂದ ದುಬೈಗೆ ಶಿಫ್ಟ್ ಆಗುತ್ತದೆ ಎಂದು ವರದಿಯಾಗಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಂಪೂರ್ಣ ಐಪಿಎಲ್ ಭಾರತದಲ್ಲೇ ನಡೆಯಲಿದೆ. ವಿದೇಶಕ್ಕೆ ಹೋಗುವುದಿಲ್ಲ ಎಂದಿದ್ದಾರೆ.