ಮೈದಾನದಲ್ಲಿ ಅಭಿಮಾನಿಗಳು ಹಾಡಿದ ‘ಮೈ ನೇಮ್ ಈಸ್ ಲಖನ್’ ಹಾಡಿಗೆ ಹುಕ್ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ, ವಿಡಿಯೋ
Nov 01, 2024 03:50 PM IST
ಅಭಿಮಾನಿಗಳು ಹಾಡಿದ ‘ಮೈ ನೇಮ್ ಈಸ್ ಲಖನ್’ ಹಾಡಿಗೆ ಹುಕ್ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ
- Virat Kohli: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಗಳು ಹಾಡಿದ ‘ಮೈ ನೇಮ್ ಈಸ್ ಲಖನ್’ ಹಾಡಿಗೆ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹುಕ್ ಸ್ಟೆಪ್ ಹಾಕಿದರು. ವಿಡಿಯೋ ವೈರಲ್ ಆಗುತ್ತಿದೆ.
Virat Kohli: ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿದ್ದಾರೆ ಅಂದರೆ ಪಂದ್ಯವನ್ನು ಕಣ್ತುಂಬಿಕೊಳ್ಳಲುವ ಬರುವ ಫ್ಯಾನ್ಸ್ಗೆ ಭರಪೂರ ಮನರಂಜನೆ ಬೋನಸ್ ಆಗಿ ಸಿಗಲಿದೆ. ಟೆಸ್ಟ್, ಏಕದಿನ, ಟಿ20, ಐಪಿಎಲ್ ಹೀಗೆ ಯಾವುದೇ ಇರಲಿ, ಕೊಹ್ಲಿ ಆಡುತ್ತಿದ್ದಾರೆ ಅಂದರೆ ನೆರೆದಿರುವ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಪಕ್ಕಾ ಎಂದರ್ಥ. ಅದೇ ರೀತಿ ಪ್ರಸ್ತುತ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಗಳ ಹಾಡಿಗೆ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಇಂಡೋ-ಕಿವೀಸ್ ನಡುವೆ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ತಂಡವು ಮೈದಾನಕ್ಕೆ ಇಳಿಯುತ್ತಿದ್ದಂತೆ, ಅಭಿಮಾನಿಗಳು ಜನಪ್ರಿಯ ಬಾಲಿವುಡ್ ಸಾಂಗ್ ‘ಮೈ ನೇಮ್ ಈಸ್ ಲಖನ್’ ಅನ್ನು ಹಾಡಲು ಶುರು ಮಾಡಿದರು. ಫ್ಯಾನ್ಸ್ ಹಾಡಿದ ಜನಪ್ರಿಯ ಹಾಡು ಕ್ರೀಡಾಂಗಣದಾದ್ಯಂತ ಪ್ರತಿಧ್ವನಿಸಿತು. ಇದು ಕೊಹ್ಲಿಯನ್ನು ಪ್ರೇರೇಪಿಸಿತು. ಕೊನೆಗೆ ಹುಕ್ ಸ್ಟೆಪ್ ಹಾಕಿದರು. ವಿರಾಟ್ ಸ್ಟೆಪ್ಸ್ ಹಾಕುತ್ತಿದ್ದಂತೆ ಇಡೀ ಮೈದಾನದಲ್ಲಿದ್ದ ಅಭಿಮಾನಿಗಳಲ್ಲೆಲ್ಲಾ ಜೋರಾಗಿ ಕಿರುಚಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲೂ ರನ್ ಗಳಿಸಲು ಹೆಣಗಾಡಿರುವ ಕೊಹ್ಲಿ, ಮುಂಬೈ ಟೆಸ್ಟ್ನಲ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷಿಸಿದ್ದಾರೆ. ಹೀಗಾಗಿ ಅವರ ಮೇಲೆಯೇ ಹೆಚ್ಚು ಕಣ್ಣು ನೆಟ್ಟಿದೆ. ಸರಣಿಯ 2ನೇ ಟೆಸ್ಟ್ನಲ್ಲಿ 35 ವರ್ಷದ ಬ್ಯಾಟರ್ ಮಿಚೆಲ್ ಸ್ಯಾಂಟ್ನರ್ ಅವರ ಬೌಲಿಂಗ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. 2ನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ 40 ಎಸೆತಗಳಲ್ಲಿ ಕೇವಲ 17 ರನ್ ಗಳಿಸಲಷ್ಟೇ ಶಕ್ತರಾದರು. ಇನ್ನು ಬೆಂಗಳೂರು ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಡಕೌಟ್ ಆಗಿದ್ದ ಕಿಂಗ್, ಎರಡನೇ ಇನ್ನಿಂಗ್ಸ್ನಲ್ಲಿ 70 ರನ್ ಬಾರಿಸಿದ್ದರು.
12 ವರ್ಷಗಳ ನಂತರ ತವರಿನಲ್ಲಿ ಸರಣಿ ಸೋಲು
ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಈಗಾಗಲೇ 2-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ. 2012ರ ನಂತರ ಅಂದರೆ 12 ವರ್ಷಗಳ ಬಳಿಕ ತವರಿನಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ಸರಣಿ ಸೋತಿದೆ. ಬೆಂಗಳೂರು ಮತ್ತು ಎಂಸಿಎನಲ್ಲಿ ನಡೆದ ಎರಡೂ ಪಂದ್ಯಗಳನ್ನು ಸೋತಿರುವ ಭಾರತ ಇದೀಗ ಕೊನೆಯ ಟೆಸ್ಟ್ ಪಂದ್ಯ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಹಾದಿಯನ್ನು ಸುಗಮ ಮಾಡಿಕೊಳ್ಳಬೇಕಿದೆ. ಆದರೆ ಟೀಮ್ ಇಂಡಿಯಾ ಬ್ಯಾಟಿಂಗ್ ಆರ್ಡರ್ ದಿಢೀರ್ ಕುಸಿತ ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಏನು ಮಾಡಬೇಕು?
ಭಾರತ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಸ್ತುತ ಆಡುತ್ತಿರುವ ಟೆಸ್ಟ್ ಸೇರಿ ಇನ್ನೂ 6 ಪಂದ್ಯಗಳು ಬಾಕಿ ಉಳಿದಿವೆ. ಈ ಪೈಕಿ 4 ಪಂದ್ಯ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಹೀಗಿದ್ದಾಗ ಮಾತ್ರ ಭಾರತ ತಂಡವು ಡಬ್ಲ್ಯುಟಿಸಿ ಫೈನಲ್ಗೆ ನೇರವಾಗಿ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ರೇಸ್ನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್ ತಂಡಗಳು ಪೈಪೋಟಿ ನಡೆಸುತ್ತಿವೆ. ಭಾರತದ ಫೈನಲ್ ಹಾದಿ ಸುಗಮವಾಗಲು ಉಳಿದ ತಂಡಗಳ ಫಲಿತಾಂಶವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನ್ಯೂಜಿಲೆಂಡ್ ಎದುರಿನ 3ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಟಾಸ್ ಸೋತು ಮೊದಲು ಬೌಲಿಂಗ್ ಮಾಡುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್, 235 ರನ್ ಗಳಿಸಿ ಆಲೌಟ್ ಆಗಿದೆ. ರವೀಂದ್ರ ಜಡೇಜಾ 5 ವಿಕೆಟ್ ಉರುಳಿಸಿದರೆ, ವಾಷಿಂಗ್ಟನ್ 4 ವಿಕೆಟ್ ಕಿತ್ತು ಮಿಂಚಿದರು. ಕಿವೀಸ್ ಪರ ವಿಲ್ ಯಂಗ್ 71 ಮತ್ತು ಡ್ಯಾರಿಲ್ ಮಿಚೆಲ್ 82 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.