ಕಳಪೆ ಫಾರ್ಮ್ ಬೆನ್ನಲ್ಲೇ ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾದೊಂದಿಗೆ ತೆರಳದ ವಿರಾಟ್ ಕೊಹ್ಲಿ; ಕಾರಣ ಕೂಡ ಬಹಿರಂಗ
Nov 12, 2024 11:15 AM IST
India's Virat Kohli in action
- Virat Kohli: ನವೆಂಬರ್ 22ರಿಂದ ಪ್ರಾರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ವಿರಾಟ್ ಕೊಹ್ಲಿ ನೇರವಾಗಿ ಪರ್ತ್‌ಗೆ ತೆರಳಿದ್ದಾರೆ. ಟೀಮ್ ಇಂಡಿಯಾ ಎರಡು ಬ್ಯಾಚ್‌ಗಳಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಅವರಿಗಿಂತ ಮೊದಲು ವಿರಾಟ್ ತಲುಪಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮಹತ್ವದ ಹೆಜ್ಜೆಯ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಕೊಹ್ಲಿ ಈಗಾಗಲೇ ಭಾರತ ತಂಡದ ಇತರೆ ಆಟಗಾರರಿಗಿಂತ ಮೊದಲು ಆಸ್ಟ್ರೇಲಿಯಾ ತಲುಪಿದ್ದಾರೆ. ಇವರು ಕಾಂಗರೂಗಳ ನಾಡಿಗೆ ತಲುಪಿದ ಮೊದಲ ಭಾರತೀಯ ಆಟಗಾರ. ಮಾಧ್ಯಮ ವರದಿಗಳನ್ನು ನಂಬುವುದಾದರೆ, ವಿರಾಟ್ ಕೊಹ್ಲಿ ಭಾನುವಾರ ಸಂಜೆಯೇ ಆಸ್ಟ್ರೇಲಿಯಾ ತಲುಪಿದ್ದರು.
ವರದಿಗಳ ಪ್ರಕಾರ, ನವೆಂಬರ್ 22 ರಿಂದ ಪ್ರಾರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಕೊಹ್ಲಿ ನೇರವಾಗಿ ಪರ್ತ್‌ಗೆ ತೆರಳಿದ್ದಾರೆ. ಟೀಮ್ ಇಂಡಿಯಾ ಎರಡು ಬ್ಯಾಚ್‌ಗಳಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಅವರಿಗಿಂತ ಮೊದಲು ವಿರಾಟ್ ತಲುಪಿದ್ದಾರೆ. ಶನಿವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಅವರು ಪತ್ನಿ ಅನುಷ್ಕಾ ಮತ್ತು ಇಬ್ಬರು ಮಕ್ಕಳು ಕೂಡ ಇದ್ದರು.
ತೂಗುಯ್ಯಾಲೆಯಲ್ಲಿ ವಿರಾಟ್ ಟೆಸ್ಟ್ ಭವಿಷ್ಯ
ವಿರಾಟ್ ಕೊಹ್ಲಿ ಗಂಭೀರ ಗಾಯಗೊಂಡು ಆಸ್ಟ್ರೇಲಿಯಾ ತಲುಪಿದ್ದಾರೆ. ಈ ಆಳವಾದ ಗಾಯವು ದೈಹಿಕವಾಗಿ ಅಲ್ಲ. ಅದು ಅವರ ವೃತ್ತಿಜೀವನದ ಮೇಲಾಗಿದೆ. ಕಿಂಗ್ ಕೊಹ್ಲಿ ಕೆಲ ಸಮಯದಿಂದ ತೀರಾ ಕಳಪೆ ಫಾರ್ಮ್‌ನಲ್ಲಿದ್ದಾರೆ. ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ, ವಿರಾಟ್ ಕೇವಲ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಯಿತಷ್ಟೆ.
ಕೊನೆಯ ಟೆಸ್ಟ್ ಸರಣಿಯಲ್ಲಿ, ಟೀಮ್ ಇಂಡಿಯಾ ತನ್ನದೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಸೋತಿದೆ. ಈ ಸೋಲಿನ ಬಳಿಕ ವಿರಾಟ್ ಕೊಹ್ಲಿ ಮೇಲೂ ಪ್ರಶ್ನೆಗಳು ಎದ್ದಿವೆ. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ವಿರಾಟ್ ಅವರಂತೆ ಇತರ ಯಾವುದೇ ಆಟಗಾರ ಈ ರೀತಿ ಪ್ರದರ್ಶನ ನೀಡಿದ್ದರೆ ಅವರು ತಂಡದಲ್ಲಿ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದೀಗ ವಿರಾಟ್ ಈ ಗಾಯಗಳೊಂದಿಗೆ ಆಸ್ಟ್ರೇಲಿಯಾ ತಲುಪಿದ್ದು, ಟೀಕಾಕಾರರ ಬಾಯಿ ಮುಚ್ಚಿಸುವುದು ಮತ್ತು ಟೀಮ್ ಇಂಡಿಯಾವನ್ನು ಗೆಲ್ಲಿಸುವುದು ಅವರ ಏಕೈಕ ಗುರಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ ಸಾಕಷ್ಟು ರನ್ ಗಳಿಸಿದೆ. ಈ ಆಟಗಾರ ಆಸ್ಟ್ರೇಲಿಯಾ ನೆಲದಲ್ಲಿ 8 ಶತಕ ಬಾರಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 47.48. ವಿರಾಟ್ 25 ಪಂದ್ಯಗಳಲ್ಲಿ 2042 ರನ್ ಗಳಿಸಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಮತ್ತು ಅಭ್ಯಾಸ ನಡೆಸಲು ಎಲ್ಲರಿಗಿಂತ ಮುಂಚಿತವಾಗಿ ವಿರಾಟ್ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಿದ್ದಾರೆ.
ರೋಹಿತ್ ಶರ್ಮಾ ಎರಡನೇ ಟೆಸ್ಟ್ಗೆ ಅನುಮಾನ
ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಎರಡೂ ಬ್ಯಾಚ್‌ಗಳೊಂದಿಗೆ ಆಸೀಸ್ಗೆ ತೆರಳಿಲ್ಲ. ಅವರು ಎರಡನೇ ಬಾರಿಗೆ ತಂದೆಯಾಗಲಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಹೀಗಾಗಿ ಸದ್ಯಕ್ಕೆ ಅವರು ಭಾರತದಲ್ಲಿಯೇ ಇರಲು ನಿರ್ಧರಿಸಿದ್ದಾರೆ.
ಆದರೆ, ಇತ್ತೀಚಿನ ಮಾಹಿತಿಯ ಪ್ರಕಾರ, ಅವರು 2ನೇ ಟೆಸ್ಟ್ ಪಂದ್ಯವನ್ನು ಕೂಡ ಕಳೆದುಕೊಳ್ಳಲಿದ್ದಾರೆ. ಇದು ಟೀಮ್ ಇಂಡಿಯಾದ ಆತಂಕವನ್ನು ಕೂಡ ಹೆಚ್ಚಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮೊದಲು ಅವರು ಪರ್ತ್ ಟೆಸ್ಟ್ನಿಂದ ಮಾತ್ರ ಹಿಂದೆ ಸರಿದಿದ್ದರು. ಆದರೆ ಇದೀಗ ಎರಡನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ರೋಹಿತ್ ಅನುಪಸ್ಥಿತಿಯಲ್ಲಿ, ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ವರದಿ: ವಿನಯ್ ಭಟ್.
ಇದನ್ನೂ ಓದಿ | ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ಗೆ ಜಸ್ಪ್ರೀತ್ ಬುಮ್ರಾ ನಾಯಕ; ರೋಹಿತ್ ಆಡದಿದ್ದರೆ ಕೆಎಲ್ ರಾಹುಲ್ ಓಪನಿಂಗ್