ಜಸ್ಪ್ರೀತ್ ಬುಮ್ರಾ ವಿಶ್ವದ 8ನೇ ಅದ್ಭುತ ಮತ್ತು ರಾಷ್ಟ್ರೀಯ ಸಂಪತ್ತು; ವೇಗಿಯನ್ನು ಕೊಂಡಾಡಿದ ವಿರಾಟ್ ಕೊಹ್ಲಿ
Jul 05, 2024 11:30 AM IST
ಜಸ್ಪ್ರೀತ್ ಬುಮ್ರಾ ವಿಶ್ವದ 8ನೇ ಅದ್ಭುತ ಮತ್ತು ರಾಷ್ಟ್ರೀಯ ಸಂಪತ್ತು; ವೇಗಿಯನ್ನು ಕೊಂಡಾಡಿದ ವಿರಾಟ್ ಕೊಹ್ಲಿ
- Virat Kohli on Jasprit Bumrah: ಟಿ20 ವಿಶ್ವಕಪ್ 2024 ಫೈನಲ್ನಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ನೀಡಿದ ಪ್ರದರ್ಶನವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಬುಮ್ರಾರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದು, ವಿಶ್ವದ 8ನೇ ಅದ್ಭುತ ಎಂದು ಬಣ್ಣಿಸಿದ್ದಾರೆ.
ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರು ಯಾರ್ಕರ್ ಸ್ಪೆಷಲಿಸ್ಟ್ ಹಾಗೂ ವಿಶ್ವ ಶ್ರೇಷ್ಠ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಹಾಡಿ ಹೊಗಳಿದ್ದಾರೆ. ಟಿ20 ವಿಶ್ವಕಪ್ ಫೈನಲ್ನಲ್ಲಿ ಸ್ಟಾರ್ ವೇಗಿ ನೀಡಿದ ಪ್ರದರ್ಶನವನ್ನು ಕಿಂಗ್ ಕೊಹ್ಲಿ ಶ್ಲಾಘಿಸಿದ್ದಾರೆ. ಒತ್ತಡ ಮತ್ತು ಸಂಕಷ್ಟವನ್ನು ಭೇದಿಸಿ ದಕ್ಷಿಣ ಆಫ್ರಿಕಾ ಕೈಯಲ್ಲಿದ್ದ ಗೆಲುವನ್ನು ಭಾರತಕ್ಕೆ ತಂದುಕೊಟ್ಟ ಬುಮ್ರಾರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದು, ವಿಶ್ವದ 8ನೇ ಅದ್ಭುತ ಎಂದು ಬಣ್ಣಿಸಿದ್ದಾರೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಹಂತದಲ್ಲಿ ಸೋಲುವುದು ಖಚಿತವಾಗಿತ್ತು. ದಕ್ಷಿಣ ಆಫ್ರಿಕಾ ಕೈಯಲ್ಲಿ 6 ವಿಕೆಟ್ಗಳಿದ್ದವು. 30 ಎಸೆತಗಳಲ್ಲಿ ಕೇವಲ 30 ರನ್ ಬೇಕಿತ್ತು. ಸ್ಫೋಟಕ ಅರ್ಧಶತಕ ಸಿಡಿಸಿ ಸೆಟಲ್ ಆಗಿದ್ದ ಹೆನ್ರಿಚ್ ಕ್ಲಾಸೆನ್ ಮತ್ತು ಫಿನಿಷರ್ ಡೇವಿಡ್ ಮಿಲ್ಲರ್ ಕ್ರೀಸ್ನಲ್ಲಿದ್ದರು. ಈ ವೇಳೆ ಬೌಲಿಂಗ್ ಮಾಡಿದ ಬುಮ್ರಾ, ಹರಿಣಗಳನ್ನು ಒತ್ತಡ ಮತ್ತು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು.
ಬುಮ್ರಾ ಒಂದು ತಲೆಮಾರಿನ ಬೌಲರ್ ಎಂದ ಕೊಹ್ಲಿ
ವಿರಾಟ್ ಕೊಹ್ಲಿ ಮಾತನಾಡಲು ಆಗಮಿಸಿದ ವೇಳೆ ಬುಮ್ರಾ ಅವರನ್ನು ಹಾಡಿ ಹೊಗಳಿದರು. ಬುಮ್ರಾ ಅವರನ್ನು 'ವಿಶ್ವದ ಎಂಟನೇ ಅದ್ಭುತ' ಮತ್ತು 'ರಾಷ್ಟ್ರೀಯ ಸಂಪತ್ತು' ಎಂಬ ಮಾತನ್ನು ಒಪ್ಪುತ್ತೀರಾ ಎಂದು ಕೇಳಿದಾಗ, ಕೊಹ್ಲಿ ಹೌದೆಂದು ಒಪ್ಪಿಕೊಂಡರು. ಇದು ಸತ್ಯವೆಂದು ಹೇಳಲು ನಾನು ಅರ್ಜಿ ಹಾಕಲು ಸಿದ್ಧ. ಜಸ್ಪ್ರೀತ್ ಬುಮ್ರಾ ಅವರು ಒಂದು ತಲೆಮಾರಿನ ಬೌಲರ್ ಎಂದು ವಿಜಯೋತ್ಸವದ ನಂತರ ಭಾರತ ತಂಡದ ಅಭಿನಂದನಾ ಸಮಾರಂಭದಲ್ಲಿ ಹೇಳಿದರು. ಬುಮ್ರಾ ಜೊತೆಗೆ ಕೊನೆಯ ಐದು ಓವರ್‌ಗಳ ಬಗ್ಗೆ ಮಾತನಾಡಿದರು.
ವಾಂಖೆಡೆ ಕ್ರೀಡಾಂಗಣದಲ್ಲಿರುವ ಎಲ್ಲರಂತೆ, ಅಲ್ಲಿ ಬಾರ್ಬಡೋಸ್ ಮೈದಾನದಲ್ಲಿ ನಾವು ಕೂಡ ಒಂದು ಹಂತದಲ್ಲಿ ಪಂದ್ಯ ಕೈ ಜಾರಿ ಹೋಗುವ ಆತಂಕಕ್ಕೆ ಒಳಗಾಗಿದ್ದೆವು. 30 ಎಸೆತಗಳಲ್ಲಿ 30 ರನ್ ಬೇಕಿದ್ದ ಅವಧಿಯಲ್ಲಿ ನಾವು ಕೂಡ ಮೌನವಾಗಿದ್ದೆವು. ಆದರೆ ಆ ಕೊನೆಯ ಐದು ಓವರ್‌ಗಳಲ್ಲಿ ನಡೆದದ್ದು ನಿಜವಾಗಿಯೂ ವಿಶೇಷವಾಗಿದೆ. ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಅದಂತೂ ರೋಚಕ ಸನ್ನಿವೇಶ ಎಂದು ಕೊನೆಯ ಕ್ಷಣವನ್ನು ಕೊಹ್ಲಿ ನೆನಪಿಸಿಕೊಂಡರು.
ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕಿಂಗ್ ಕೊಹ್ಲಿ
ಈ ಟೂರ್ನಿಯಲ್ಲಿ ನಮ್ಮನ್ನು ಕೊನೆಯವರೆಗೂ ಕೊಂಡೊಯ್ಯಲು ಕಾರಣರಾದ ಒಬ್ಬ ವ್ಯಕ್ತಿಯನ್ನು ನಾವೆಲ್ಲರೂ ಶ್ಲಾಘಿಸಬೇಕು. ಆತ ಏನು ಮಾಡಿದ್ದಾರೆ ಎಂಬುದು ನಿಮಗೆ ತಿಳಿದಿದೆ. ಆ ಕೊನೆಯ 5 ಓವರ್‌ಗಳಲ್ಲಿ ಅವನು ಏನು ಮಾಡಿದರು. ಕೊನೆಯ ಐದು ಓವರ್‌ಗಳ ಪೈಕಿ ಎರಡು ಓವರ್‌ಗಳಲ್ಲಿ ಹೇಗೆ ಬೌಲಿಂಗ್ ಮಾಡಿದರು ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ. ದಯವಿಟ್ಟು ಜಸ್ಪ್ರೀತ್ ಬುಮ್ರಾಗೆ ಒಂದು ದೊಡ್ಡ ಚಪ್ಪಾಳೆ ಬರಲಿ ಎಂದು ನೆರದಿದ್ದ ಅಭಿಮಾನಿಗಳಿಗೆ ಸೂಚಿಸಿದರು.
ವಿಜಯೋತ್ಸವದ ಮೆರವಣಿಗೆ ಮತ್ತು ಅಭಿನಂದನಾ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಿಗೆ ಕೊಹ್ಲಿ ಧನ್ಯವಾದ ತಿಳಿಸಿದ್ದಾರೆ. ಕ್ರೀಡಾಂಗಣಕ್ಕೆ ಆಗಮಿಸಿದ ಎಲ್ಲಾ ಜನರಿಗೆ ದೊಡ್ಡ ಧನ್ಯವಾದ. ಇಂದು ರಾತ್ರಿ ನಾವು ಬೀದಿಗಳಲ್ಲಿ ಕಂಡದ್ದು ನನ್ನ ಜೀವನದಲ್ಲಿ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ವೆಸ್ಟ್ ಇಂಡೀಸ್ನಲ್ಲಿ ನಾಲ್ಕು ದಿನಗಳಿಂದ ಸಿಲುಕಿದ್ದ ಘಟನೆಯನ್ನೂ ನೆನೆದಿದ್ದಾರೆ.
ಕಳೆದ ನಾಲ್ಕು ದಿನಗಳು ರೋಲರ್ ಕೋಸ್ಟರ್ ಆಫ್ ರೈಡ್ ಆಗಿವೆ. ನಾವು ವಿಶ್ವಕಪ್ ಗೆದ್ದ ತಕ್ಷಣ, ನಾವು ಬಾರ್ಬಡೋಸ್‌ನಿಂದ ಭಾರತಕ್ಕೆ ಹೊರಡಲು ಬಯಸಿದ್ದೆವು. ಭಾರತಕ್ಕೆ ಹಿಂತಿರುಗಿ ಮತ್ತು ಎಲ್ಲರೊಂದಿಗೆ ಸಂಭ್ರಮಾಚರಣೆ ನಡೆಸುತ್ತೇವೆ ಎಂದುಕೊಂಡಿದ್ದೆವು. ಆದರೆ ಚಂಡಮಾರುತದಲ್ಲಿ ಸಿಲುಕಿಕೊಂಡೆವು. ಇದು ಪರಾಕಾಷ್ಠೆಯ ವಿರೋಧಿ ಭಾವನೆಯಾಗಿದೆ. ನಾವು ಅಲ್ಲಿಂದ ಹಿಂತಿರುಗಿದ ಕ್ಷಣದಿಂದ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ.