ಟ್ರೋಫಿ ಗೆಲ್ಲಲು ವಿರಾಟ್ ಕೊಹ್ಲಿ ಆರ್ಸಿಬಿ ತೊರೆದು ಈ ತಂಡ ಸೇರಬೇಕು; ರೊನಾಲ್ಡೊ, ಮೆಸ್ಸಿ ಉಲ್ಲೇಖಿಸಿದ ಕೆವಿನ್ ಪೀಟರ್ಸನ್
May 23, 2024 05:55 PM IST
ಟ್ರೋಫಿ ಗೆಲ್ಲಲು ವಿರಾಟ್ ಕೊಹ್ಲಿ ಆರ್ಸಿಬಿ ತೊರೆದು ಈ ತಂಡ ಸೇರಬೇಕು; ರೊನಾಲ್ಡೊ, ಮೆಸ್ಸಿ ಉಲ್ಲೇಖಿಸಿದ ಕೆವಿನ್ ಪೀಟರ್ಸನ್
- Kevin Pietersen on Virat Kohli: ಐಪಿಎಲ್ ಟ್ರೋಫಿ ಗೆಲ್ಲಬೇಕೆಂದರೆ ವಿರಾಟ್ ಕೊಹ್ಲಿ ಆರ್ಸಿಬಿ ತಂಡವನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಬೇಕೆಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಸೋಲನುಭವಿಸಿದ ನಂತರ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ನಿರಾಶೆಗೊಂಡಿದ್ದಾರೆ. ಕೊಹ್ಲಿ ಮತ್ತು ಆರ್ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಕಾಯುವಿಕೆ ಮುಂದುವರೆದಿದೆ. ಪಂದ್ಯದ ನಂತರ ಮಾತನಾಡಿದ ಇಂಗ್ಲೆಂಡ್ ದಿಗ್ಗಜ ಆಟಗಾರ ಕೆವಿನ್ ಪೀಟರ್ಸನ್ (Kevin Pietersen), ಕೊಹ್ಲಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. ತಮ್ಮ ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲಬೇಕೆಂದರೆ, ಮತ್ತೊಂದು ಫ್ರಾಂಚೈಸಿಗೆ ಸೇರುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ, ಮತ್ತೊಮ್ಮೆ ಹೇಳುತ್ತೇನೆ. ಬೇರೆ ಬೇರೆ ಕ್ರೀಡೆಗಳಲ್ಲಿ ಸರ್ವಶ್ರೇಷ್ಠ ಆಟಗಾರರೇ ತಮ್ಮ ತಂಡಗಳನ್ನು ತೊರೆದು ಬೇರೆ ತಂಡ ಸೇರಿ ಟ್ರೋಫಿ ಗೆದ್ದಿದ್ದಾರೆ. ಅವರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ, ಪ್ರಯತ್ನಿಸುತ್ತಲೇ ಇದ್ದಾರೆ. ಆರೆಂಜ್ ಕ್ಯಾಪ್ ಗೆಲ್ಲುತ್ತಿದ್ದಾರೆ. ಸಾಕಷ್ಟು ನೆರವಾಗುತ್ತಿದ್ದಾರೆ. ಆದರೆ ಅವರ ಪ್ರಯತ್ನದ ಹೊರತಾಗಿಯೂ ಫ್ರ್ಯಾಂಚೈಸಿ ಮತ್ತೆ ಟ್ರೋಫಿ ಗೆಲ್ಲಲು ವಿಫಲವಾಯಿತು. ತಂಡದ ಬ್ರಾಂಡ್ ಮತ್ತು ಅವರಿಂದ ಸಿಗುವ ವಾಣಿಜ್ಯ ಮೌಲ್ಯ ಸಾಕಷ್ಟಿದೆ ಎಂಬುದು ಗೊತ್ತಿದೆ. ಹಾಗಾಗಿ ವಿರಾಟ್ ಕೊಹ್ಲಿ ಟ್ರೋಫಿಗೆ ಅರ್ಹರು ಎಂದು ಹೇಳಿದ್ದಾರೆ.
‘ವಿರಾಟ್ ಕೊಹ್ಲಿ ಯಾವ ತಂಡಕ್ಕೆ ಹೋಗಬೇಕು’
ಆ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡುವ ತಂಡದಲ್ಲಿ ಆಡಲು ಅವರು ಅರ್ಹರು ಎಂದು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿರುವ ಕೆವಿನ್ ಪೀಟರ್ಸನ್, ಫುಟ್ಬಾಲ್ ಕ್ಷೇತ್ರದಲ್ಲಿ ಇದೇ ರೀತಿ ಫ್ರಾಂಚೈಸಿ ತೊರೆದು ಪ್ರಶಸ್ತಿ ಗೆದ್ದಿರುವ ಡೇವಿಡ್ ಬೆಕ್ಹ್ಯಾಮ್, ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಹ್ಯಾರಿ ಕೇನ್ರನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಕೊಹ್ಲಿ ಯಾವ ತಂಡಕ್ಕೆ ಹೋಗಬೇಕು ಎಂದು ಕೂಡ ಸೂಚಿಸಿದ್ದಾರೆ.
ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಡಿದರೆ ಉತ್ತಮ ಎಂದು ನಾನು ಭಾವಿಸುತ್ತೇನೆ. ವಿರಾಟ್ ಹೋಗಬೇಕಾದ ಸ್ಥಳ ದೆಹಲಿ. ಅವರು ಅದು ಅವರ ತವರಿನ ಸ್ಥಳ. ಹೆಚ್ಚಿನ ಸಮಯ ಮನೆಯಲ್ಲಿಯೇ ಇರಬಹುದು. ಅವರಿಗೆ ದೆಹಲಿಯಲ್ಲಿ ಮನೆ ಇದೆ ಎಂದು ನನಗೆ ತಿಳಿದಿದೆ. ಅವರ ಕುಟುಂಬವೂ ಇಲ್ಲಿದೆ. ಅವರು ಅಲ್ಲಿ ಹೆಚ್ಚು ಸಮಯ ಕಳೆಯಬಹುದು. ಡೆಲ್ಲಿ ತಂಡವೂ ಸಹ ಬೆಂಗಳೂರಿನಂತೆ ಹತಾಶವಾಗಿದೆ. ಟ್ರೋಫಿ ಗೆಲ್ಲಿಸಿಕೊಡಲು ಇದು ಉತ್ತಮ ಅವಕಾಶ ಎಂದಿದ್ದಾರೆ.
‘ಫುಟ್ಬಾಲ್ ದಿಗ್ಗಜರು ಬೇರೆ ತಂಡಕ್ಕೆ ಹೋಗಿದ್ದಾರೆ’
ಬೆಕ್ಹ್ಯಾಮ್, ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಸ್ ಮೆಸ್ಸಿ, ಹ್ಯಾರಿ ಕೇನ್ ಅವರು ಬೇರೆ ಫ್ರಾಂಚೈಸಿಗಳಿಗೆ ಹೋಗಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗಾಗಿ ವಿರಾಟ್ ದೀರ್ಘ ಮತ್ತು ಕಠಿಣವಾಗಿ ಯೋಚಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಕೆವಿನ್ ಪೀಟರ್ಸನ್ ಮಾತಲ್ಲಿ ವಿರಾಟ್ ಕೊಹ್ಲಿ ಅವರ ಆರ್ಸಿಬಿ ತಂಡದಲ್ಲಿ ಇದ್ದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲ್ಲ ಎಂಬರ್ಥ ನೀಡುತ್ತದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ರಜತ್ ಪಾಟಿದಾರ್ (34), ವಿರಾಟ್ ಕೊಹ್ಲಿ (33) ಮತ್ತು ಮಹಿಪಾಲ್ ಲೊಮ್ರೊರ್ (32) ಅವರ ಆಟದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 45 ರನ್ ಗಳಿಸಿದರು. ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)