ಅಗ್ರೆಸ್ಸಿವ್ ಸೆಲೆಬ್ರೇಷನ್ನಿಂದ ಟ್ರೋಫಿ ಗೆಲ್ಲಲ್ಲ; ಆರ್‌ಸಿಬಿ ವಿರುದ್ಧ ಅಂಬಾಟಿ ರಾಯುಡು ಮತ್ತೆ ಕ್ರೂರ ವಾಗ್ದಾಳಿ
Ambati Rayudu: ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಂಬಾಟಿ ರಾಯುಡು ವಾಗ್ದಾಳಿ ನಡೆಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಕ್ರೂರವಾಗಿ ವಾಗ್ದಾಳಿ ನಡೆಸಿದ್ದಾರೆ. ಲೀಗ್ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಸಂದರ್ಭದಲ್ಲಿ ಫೈನಲ್ ಗೆದ್ದಂತೆ ಹಾರಾಡುತ್ತಿದೆ ಎಂದು ಟೀಕಿಸಿದ್ದ ರಾಯುಡು, ಈಗ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಆರ್ಸಿಬಿಯ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೆಟ್ಟದಾಗಿದ್ದ ಕಾರಣ ಸ್ಪರ್ಧಾತ್ಮಕ ಮೊತ್ತಕ್ಕೆ ಕುಸಿಯಿತು. ಆರ್ಆರ್ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ರಾಜಸ್ಥಾನ್ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಲಗ್ಗೆ ಹಾಕಿತು. ಮತ್ತೊಂದೆಡೆ ಸೋತ ರಾಯಲ್ ಚಾಲೆಂಜರ್ಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಆರ್‌ಸಿಬಿ ವಿರುದ್ಧ ರಾಯುಡು ವಾಗ್ದಾಳಿ
ಈ ಸೋಲಿನ ಬೆನ್ನಲ್ಲೇ ಆರ್‌ಸಿಬಿ ತಂಡವನ್ನು ರಾಯುಡು ಟೀಕಿಸಿದ್ದಾರೆ. ಸಿಎಸ್‌ಕೆ ತಂಡವನ್ನು ಸೋಲಿಸಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಅಂಬಾಟಿ, ಆರ್‌ಸಿಬಿ ಸೋಲುತ್ತಿದ್ದಂತೆ ಖುಷಿಯಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕುರಿತು ಮಾತನಾಡಿದ ರಾಯುಡು, 'ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ ಮಾತ್ರ ಐಪಿಎಲ್ ಟ್ರೋಫಿ ಗೆಲ್ಲೋಕೆ ಸಾಧ್ಯವಿಲ್ಲ ಎಂಬುದನ್ನು ಆರ್‌ಸಿಬಿ ಅರ್ಥಮಾಡಿಕೊಳ್ಳಬೇಕು. ಸಿಎಸ್‌ಕೆ ಸೋಲಿಸಿದ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಿಮಗೆ ಸರಿಯಾದ ತಂಡ ಬೇಕಿದೆ. ಪ್ಲೇಆಫ್ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಟ್ರೋಫಿ ಪಡೆಯಲು ಸಾಧ್ಯ ಎಂದಿರುವ ರಾಯುಡು, ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡುವುದರ ಬದಲಿಗೆ ತಂಡದ ಸ್ಥಿರತೆ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಗೆ ಒತ್ತು ನೀಡುವಂತೆ ಸೂಚಿಸಿದ್ದಾರೆ. ಈ ಮಾತುಗಳು ವಿರಾಟ್ ಕೊಹ್ಲಿಗೆ ಪರೋಕ್ಷವಾಗಿ ಹೇಳಿದಂತಿದೆ. ಇದೇ ವೇಳೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡುವಂತೆ ಒತ್ತಿ ಹೇಳಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದ ಅಂಬಾಟಿ
ಬೆಂಗಳೂರು ತಂಡವು ಭಾರತೀಯ ಆಟಗಾರರು ಮತ್ತು ಸ್ಥಳೀಯ ತರಬೇತುದಾರರನ್ನು ನಂಬಬೇಕು. ಭಾರತೀಯ ಪ್ರತಿಭೆಗಳನ್ನು ನಿರ್ಲಕ್ಷಿಸುತ್ತಿರುವುದೇ ದೊಡ್ಡ ಪ್ರಮಾದವಾಗಿದೆ. ಸಿಎಸ್‌ಕೆ, ಎಂಐ ಮತ್ತು ಕೆಕೆಆರ್‌ಗಳು ಇದರ ಮಹತ್ವವನ್ನು ಅರ್ಥಮಾಡಿಕೊಂಡಿವೆ. ಭಾರತೀಯ ಆಟಗಾರರು ಮತ್ತು ಅದಕ್ಕಾಗಿಯೇ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಘಟಕಗಳಲ್ಲಿದ್ದಾರೆ ಎಂದು ಹೇಳಿದ್ದಾರೆ.
ಪ್ಲೇಆಫ್ ಡಿಸೈಡರ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗಮನಾರ್ಹ ಗೆಲುವು ಸಾಧಿಸಿತ್ತು. ಇದರ ನಂತರ ಆಟಗಾರರು ಸಿಕ್ಕಾಪಟ್ಟೆ ಸಂಭ್ರಮಿಸಿದ್ದರು. ಇದನ್ನು ಸಹಿಸದ ರಾಯುಡು, ಐಪಿಎಲ್ ಟ್ರೋಫಿಗಳನ್ನು ಮೈದಾನದಲ್ಲಿ ಸಂಭ್ರಮಾಚರಣೆಯಿಂದ ಗೆಲ್ಲಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಇತ್ತೀಚೆಗೆ ಸಿಎಸ್‌ಕೆ ಗೆದ್ದಿರುವ ಐದು ಟ್ರೋಫಿಗಳಲ್ಲಿ ಒಂದನ್ನು ನಿಮಗೆ ನೀಡುತ್ತದೆ. ಅದನ್ನು ಮೆರವಣಿಗೆ ಮಾಡಿ ಎಂದು ಆರ್‌ಸಿಬಿ ಆಟಗಾರರಿಗೆ ಗೇಲಿ ಮಾಡಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)