ಎಲ್ಲೋಯ್ತು ವಿರಾಟ್ ಕೊಹ್ಲಿ ಖದರ್? ನಾಲ್ಕೇ ಪಂದ್ಯಗಳಲ್ಲಿ 692 ರನ್ ಗಳಿಸಿದ್ದ ಕಿಂಗ್, 2024ರಲ್ಲಿ ವರ್ಷಪೂರ್ತಿ ಗಳಿಸಿರೋದೇ 493!
Nov 22, 2024 08:00 PM IST
ಎಲ್ಲೋಯ್ತು ವಿರಾಟ್ ಕೊಹ್ಲಿ ಖದರ್? ನಾಲ್ಕೇ ಪಂದ್ಯಗಳಲ್ಲಿ 692 ರನ್ ಗಳಿಸಿದ್ದ ಕಿಂಗ್, 2024ರಲ್ಲಿ ವರ್ಷಪೂರ್ತಿ ಗಳಿಸಿರೋದೇ 493!
- Virat Kohli: ಎಲ್ಲೋಯ್ತು ವಿರಾಟ್ ಕೊಹ್ಲಿ ಮೊದಲು ಆಡುತ್ತಿದ್ದ ಆಟ..? ಒಂದೇ ಸಿರೀಸ್ನಲ್ಲಿ ಹತತ್ರ 700 ರನ್ ಗಳಿಸಿದ್ದ ಕೊಹ್ಲಿ ಇದೀಗ ವರ್ಷ ಪೂರ್ತಿ ಟಿ20, ಏಕದಿನ, ಟೆಸ್ಟ್ ಆಡಿದರೂ 500 ರನ್ (ನವೆಂಬರ್ 22ರ ಅಂತ್ಯಕ್ಕೆ) ದಾಟಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.
ವಿರಾಟ್ ಕೊಹ್ಲಿ... ವಿಶ್ವ ಕ್ರಿಕೆಟ್ನಲ್ಲಿ ರನ್ ಬೇಟೆಗಾರ, ಶತಕಗಳ ವೀರ, ದಾಖಲೆಗಳ ಸರದಾರ. ಪಿಚ್ ಯಾವುದೇ ಇರಲಿ, ಬೌಲರ್ ಯಾರೇ ಆಗಲಿ ವಿರಾಟ ರೂಪ ತೋರಿರುವ ವಿರಾಟ್, ಕ್ರಿಕೆಟ್ ಜಗತ್ತಿನಲ್ಲಿ ರಾಜನಾಗಿ ಮೆರದಾಡಿದ್ದಾರೆ. ರನ್ ಸಾಮ್ರಾಟನಾಗಿ ಅದೆಷ್ಟೋ ವಿಶ್ವದಾಖಲೆಗಳನ್ನು ಮುರಿದಿರುವ ಕಿಂಗ್, ಪ್ರಸ್ತುತ ಕ್ರಿಕೆಟ್ಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೌದು, ಕ್ರಿಕೆಟ್ ಮರೆತವರಂತೆ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಯಾವುದೋ ಒಂದೆರಡು ಸರಣಿ ಬಿಟ್ಟರೆ ಬಹುತೇಕ ಸರಣಿಗಳಲ್ಲಿ ರನ್ ಗುಡ್ಡೆ ಹಾಕಿದ್ದಾರೆ. ಆದರೆ ಎಲ್ಲೋಯ್ತು ವಿರಾಟ್ ಕೊಹ್ಲಿ ಮೊದಲು ಆಡುತ್ತಿದ್ದ ಆಟ..? ಒಂದೇ ಸಿರೀಸ್ನಲ್ಲಿ ಹತತ್ರ 700 ರನ್ ಗಳಿಸಿದ್ದ ಕೊಹ್ಲಿ ಇದೀಗ ವರ್ಷ ಪೂರ್ತಿ ಟಿ20, ಏಕದಿನ, ಟೆಸ್ಟ್ ಆಡಿದರೂ 500 ರನ್ (ನವೆಂಬರ್ 22ರ ಅಂತ್ಯಕ್ಕೆ) ದಾಟಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. 2024ರಲ್ಲಿ ಮೂರು ಫಾರ್ಮೆಟ್ ಆಡಿರುವ ಕೊಹ್ಲಿ, ಮಿಂಚಿನ ಪ್ರದರ್ಶನ ನೀಡಲು ಸಂಪೂರ್ಣ ವಿಫಲರಾಗಿದ್ದಾರೆ.
2024ರಲ್ಲಿ ಕೊಹ್ಲಿ ಕಳಪೆ ಪ್ರದರ್ಶನ
ವಿರಾಟ್ ಈ ವರ್ಷ ಮೂರು ಫಾರ್ಮೆಟ್ ಸೇರಿ 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 26 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, ಒಮ್ಮೆ ಮಾತ್ರ ನಾಟೌಟ್, ನಾಲ್ಕು ಸಲ ಡಕೌಟ್ ಆಗಿದ್ದಾರೆ. 19.72 ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಕೊಹ್ಲಿ, ಒಂದೇ ಒಂದು ಶತಕ ಸಿಡಿಸಿಲ್ಲ ಎಂಬುದು ವಿಪರ್ಯಾಸ. ಕೇವಲ ಎರಡು ಅರ್ಧಶತಕ ಸಿಡಿಸಿದ್ದಾರೆ. 50 ಬೌಂಡರಿ, 10 ಸಿಕ್ಸರ್ ಸಿಡಿಸಿದ್ದಾರೆ. ಗರಿಷ್ಠ ಸ್ಕೋರ್ 76. ಸ್ಟ್ರೈಕ್ರೇಟ್ 83.55. ಈ ಎಲ್ಲಾ ಅಂಕಿಅಂಶ ನವೆಂಬರ್ 22 ಅಂತ್ಯಕ್ಕೆ ಒಳಗೊಂಡಿದೆ. ಡಿಸೆಂಬರ್ ಅಂತ್ಯದೊಳಗೆ ಈ ಅಂಕಿ-ಅಂಶ ಬದಲಾವಣೆ ಕಾಣಲಿದೆ.
2024ರಲ್ಲಿ ಟಿ20ಐ ದಾಖಲೆ: 10 ಪಂದ್ಯ, 180 ರನ್, 18.00 ಸರಾಸರಿ, 1 ಅರ್ಧಶತಕ, ಗರಿಷ್ಠ ಸ್ಕೋರ್ 76.
2024ರಲ್ಲಿ ಏಕದಿನ ದಾಖಲೆ: 3 ಪಂದ್ಯ, 58 ರನ್, 19.33 ಸರಾಸರಿ, 0 ಅರ್ಧಶತಕ, ಗರಿಷ್ಠ ಸ್ಕೋರ್ 24.
2024ರಲ್ಲಿ ಟೆಸ್ಟ್ ದಾಖಲೆ: 7 ಟೆಸ್ಟ್, 13 ಇನ್ನಿಂಗ್ಸ್, 255 ರನ್, 21.25 ಸರಾಸರಿ, 1 ಅರ್ಧಶತಕ, ಗರಿಷ್ಠ ಸ್ಕೋರ್ 70.
2019ರ ನಂತರ ಸತತ ಮೂರು ವರ್ಷಗಳ ವೈಫಲ್ಯ ಅನುಭವಿಸಿದ್ದ ವಿರಾಟ್ ಕಳೆದ 2022ರಲ್ಲಿ ಫಾರ್ಮ್ಗೆ ಮರಳಿದ್ದರು. ಆದರೆ ಈ ಮೂರು ವರ್ಷಗಳಲ್ಲಿ ಒಂದೇ ಒಂದು ಶತಕ ಸಿಡಿಸಲು ಪರದಾಡಿದ್ದರು. ಲಯಕ್ಕೆ ಮರಳಿದ ಬಳಿಕ ರನ್ ಶಿಖರ ನಿರ್ಮಿಸಿದ ವಿರಾಟ್, ಇದೀಗ ಮತ್ತೆ ಕಳಪೆ ಪ್ರದರ್ಶನ ನೀಡುವ ತನ್ನ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ವೈಫಲ್ಯ ಮುಂದುವರೆದರೆ ಅವರ ವೃತ್ತಿಜೀವನ ಅಂತ್ಯವಾದರೂ ಅಚ್ಚರಿ ಇಲ್ಲ.
ಒಂದೇ ಸಿರೀಸ್ನಲ್ಲಿ 692 ರನ್ ಚಚ್ಚಿದ್ದ ಕೊಹ್ಲಿ
ಹೌದು, ಕೊಹ್ಲಿ 2014-15ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಈ ಸರಣಿಯಲ್ಲಿ 692 ರನ್ ಚಚ್ಚಿ ದಾಖಲೆ ಬರೆದಿದ್ದರು. ಅಂದು 4 ಪಂದ್ಯಗಳ 8 ಇನ್ನಿಂಗ್ಸ್ಗಳಲ್ಲಿ 86.50ರ ಬ್ಯಾಟಿಂಗ್ ಸರಾಸರಿಯಲ್ಲಿ 692 ರನ್ ಗಳಿಸಿದ್ದ ಕೊಹ್ಲಿ, 4 ಶತಕ, ಒಂದು ಅರ್ಧಶತಕ ಸಿಡಿಸಿದ್ದರು. ಇನ್ನೊಂದು ಉದಾಹರಣೆ ಎಂದರೆ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ವಿರಾಟ್ 11 ಇನ್ನಿಂಗ್ಸ್ಗಳಲ್ಲಿ 765 ರನ್ ಬಾರಿಸಿದ್ದರು. ಅದು ಕೂಡ 95.62ರ ಸರಾಸರಿ. ಹೀಗಿದ್ದ ಕೊಹ್ಲಿ 2024ರಲ್ಲಿ 20 ಪಂದ್ಯವಾಡಿದ್ದರೂ 500 ರನ್ ಗಳಿಸಿಲ್ಲ.
ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ನಿರತರಾಗಿರುವ ಕೊಹ್ಲಿ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 5 ರನ್ ಗಳಿಸಿ ಮತ್ತೆ ನಿರಾಸೆ ಮೂಡಿಸಿದ್ದಾರೆ. ಈ ಟೆಸ್ಟ್ನ ಎರಡನೇ ಇನ್ನಿಂಗ್ಸ್ ಸೇರಿ 9 ಇನ್ನಿಂಗ್ಸ್ಗಳು ಬಾಕಿ ಉಳಿದಿದ್ದು, ಅಬ್ಬರಿಸುವ ಮೂಲಕ ತನ್ನ ಸ್ಕೋರ್ ಗ್ರಾಫ್ ಅನ್ನು ಏರಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ. ಅದು ಅಲ್ಲದೆ, ವಿರಾಟ್ ಕೊಹ್ಲಿ ಆಡುವುದು ಮಹತ್ವವಾಗಿದೆ. ಇದು ಭಾರತ ತಂಡದ ಗೆಲುವನ್ನು ನಿರ್ಧರಿಸುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲಿದೆ.