ತಾನೇ ತೋಡಿದ ಹಳ್ಳಕ್ಕೆ ಬಿದ್ದ ಆಸ್ಟ್ರೇಲಿಯಾ 100ರೊಳಗೆ ಆಲೌಟ್ ಸಾಧ್ಯತೆ; ಭಾರತೀಯ ಬ್ಯಾಟರ್ಸ್ ಕೈಕೊಟ್ಟರೂ ಬೌಲರ್ಸ್ ಮಿಂಚು
India Vs Australia 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೆ, ಬೌಲರ್ಸ್ ಮಿಂಚಿದ್ದಾರೆ. ಆದರೆ ಆಸೀಸ್ ತಾನೇ ತೋಡಿದ ಹಳ್ಳಕ್ಕೆ ಬಿದ್ದು ಸಂಕಷ್ಟಕ್ಕೆ ಸಿಲುಕಿದೆ.
ಬಹುನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ (Border-Gavaskar Trophy 2024/25) ಆರಂಭಗೊಂಡಿದ್ದು, ಆಸ್ಟ್ರೇಲಿಯಾ ಮತ್ತು ಭಾರತ (India Vs Australia 1st Test) ನಡುವಿನ ಮೊದಲ ಟೆಸ್ಟ್ ಪಂದ್ಯ ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಆದರೆ ಆಸ್ಟ್ರೇಲಿಯಾ ತಾನೇ ತೋಡಿದ ಹಳ್ಳಕ್ಕೆ ಬಿತ್ತು. ಭಾರತ ತಂಡ ಟಾಸ್ ಮೊದಲು ಬ್ಯಾಟಿಂಗ್ ನಡೆಸಿ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಆದರೆ ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ, ತವರಿನ ಪಿಚ್ನಲ್ಲಿ ರನ್ ಗಳಿಸಲು ಪರದಾಡಿತು. ಇದೀಗ ನೂರರೊಳಗೆ ಕುಸಿದು ಹಿನ್ನಡೆ ಅನುಭವಿಸುವ ಭೀತಿಗೆ ಸಿಲುಕಿದೆ. ಎರಡೂ ತಂಡಗಳ ಬೌಲರ್ಗಳು ಪಾರಮ್ಯ ಮೆರೆದಿರುವುದು ವಿಶೇಷ.
ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಮುಂದಾಳತ್ವದೊಂದಿಗೆ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸುವ ಮೂಲಕ ತೀವ್ರ ನಿರಾಸೆ ಮೂಡಿಸಿದರು. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಪ್ರವಾಸಿಗರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಖುಷಿಯಲ್ಲಿದ್ದ ಆತಿಥೇಯರಿಗೆ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಭಾರತದ ವಿರುದ್ಧ ಮೇಲುಗೈ ಸಾಧಿಸುವ ನಿರೀಕ್ಷೆಯಲ್ಲಿದ್ದ ಆಸೀಸ್, ಮೊದಲ ದಿನದ ಅಂತ್ಯಕ್ಕೆ ಪ್ರಮುಖ 7 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಇನ್ನೂ 83 ರನ್ಗಳ ಹಿನ್ನಡೆಯಲ್ಲಿದೆ.
ಭಾರತೀಯ ಬ್ಯಾಟರ್ಸ್ ವೈಫಲ್ಯ, ಆಸೀಸ್ ವೇಗಿಗಳು ಮಿಂಚು
ಯಶಸ್ವಿ ಜೈಸ್ವಾಲ್ ಅವರೊಂದಿಗೆ ರೋಹಿತ್ ಅಲಭ್ಯತೆಯಲ್ಲಿ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಉತ್ತಮ ಲಯದಲ್ಲಿದ್ದ ಜೈಸ್ವಾಲ್ ಆಸೀಸ್ ನೆಲದಲ್ಲೂ ಮಿಂಚುವ ವಿಶ್ವಾಸ ಇತ್ತು. ಆದರೆ ನಿರಾಸೆ ಮೂಡಿಸಿಬಿಟ್ಟರು. 8 ಎಸೆತಗಳನ್ನು ಎದುರಿಸಿ ಸ್ಟಾರ್ಕ್ ಬೌಲಿಂಗ್ನಲ್ಲಿ ಡಕೌಟ್ಗೆ ಬಲಿಯಾದರು. ಮತ್ತೊಂದೆಡೆ ದೇವದತ್ ಪಡಿಕ್ಕಲ್ ಸಿಕ್ಕ ಅವಕಾಶವನ್ನು ಮತ್ತೆ ಕೈಚೆಲ್ಲಿದರು. 23 ಎಸೆತಗಳನ್ನು ಆಡಿದರೂ ರನ್ ಗಳಿಸದೆ ಹೊರ ನಡೆದರು. ಮತ್ತೊಂದೆಡೆ ಹಿರಿಯ ಆಟಗಾರ ವಿರಾಟ್ ಕೊಹ್ಲಿ, ಇಲ್ಲಿನ ಪಿಚ್ಗಳ ಮರ್ಮ ಅರಿತಿದ್ದರೂ ಅನಗತ್ಯವಾಗಿ ವಿಕೆಟ್ ಒಪ್ಪಿಸಿ ಕಳಪೆ ಫಾರ್ಮ್ ಮುಂದುವರೆಸಿದರು.
ಪ್ರಮುಖ ಮೂರು ವಿಕೆಟ್ ಕಳೆದುಕೊಂಡರೂ ಕೆಎಲ್ ರಾಹುಲ್ ಉತ್ತಮ ಹೊಡೆತಗಳ ಮೂಲಕ ಗಮನ ಸೆಳೆದರು. ಆದರೆ 26 ರನ್ ಗಳಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಧ್ರುವ್ ಜುರೆಲ್ 11, ವಾಷಿಂಗ್ಟನ್ ಸುಂದರ್ 5 ಕೂಡ ವೈಫಲ್ಯ ಅನುಭವಿಸಿದರು. ಆ ಮೂಲಕ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್ ತಮ್ಮ ಖದರ್ ತೋರಿದರು. ಇದರ ನಡುವೆಯೂ ರಿಷಭ್ ಪಂತ್ ಮತ್ತು ನಿತೀಶ್ ರೆಡ್ಡಿ ಅವರು ತಂಡಕ್ಕೆ ನೆರವಾದರು. 7ನೇ ವಿಕೆಟ್ಗೆ 48 ರನ್ಗಳ ಪಾಲುದಾರಿಕೆ ನೀಡಿತು. ಪಂತ್ 37, ನಿತೀಶ್ 41 ರನ್ ಸಿಡಿಸಿ ಔಟಾದರು. ಆದರೆ, ಆ ಬಳಿಕ ಮತ್ತೆ ಕುಸಿಯಿತು. ಪ್ಯಾಟ್ ಕಮಿನ್ಸ್, ಮಿಚೆಲ್ ಮಾರ್ಷ್ ಬೌಲಿಂಗ್ನಲ್ಲಿ ಸಾಥ್ ಕೊಟ್ಟರು. ಹೇಜಲ್ವುಡ್ 4, ಮಾರ್ಷ್, ಸ್ಟಾರ್ಕ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು.
ಬುಮ್ರಾ ಮಿಂಚು, ಆಸೀಸ್ 67ಕ್ಕೆ 7 ವಿಕೆಟ್
150 ರನ್ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಆಸೀಸ್, ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಯಿತು. ಜಸ್ಪ್ರೀತ್ ಬುಮ್ರಾ ದಾಳಿಗೆ ಕಾಂಗರೂ ಬ್ಯಾಟರ್ಸ್ ಹಿಂದಿದೆಯೇ ಪೆವಿಲಿಯನ್ ಸೇರಿದರು. ಉಸ್ಮಾನ್ ಖವಾಜ 8, ನಾಥನ್ ಮೆಕ್‌ಸ್ವೀನಿ 10, ಮಾರ್ನಸ್ ಲಬುಶೇನ್ 2, ಸ್ಟೀವ್ ಸ್ಮಿತ್ 0, ಟ್ರಾವಿಸ್ ಹೆಡ್ 11, ಮಿಚೆಲ್ ಮಾರ್ಷ್ 6, ಪ್ಯಾಟ್ ಕಮಿನ್ಸ್ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಸದ್ಯ ಅಲೆಕ್ಸ್ ಕೇರಿ ಅಜೇಯ 19, ಮಿಚೆಲ್ ಸ್ಟಾರ್ಕ್ ಅಜೇಯ 6 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನಾಯಕ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2, ಯುವ ವೇಗಿ ಹರ್ಷಿತ್ ರಾಣಾ 1 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಭಾರತೀಯ ಬೌಲರ್ ಇದೇ ಅಬ್ಬರ ಮುಂದುವರೆದರೆ 100 ರೊಳಗೆ ಆಲೌಟ್ ಮಾಡಬಹುದು. ಏಕೆಂದರೆ ಉಳಿದಿರುವುದು ಬೌಲರ್ಗಳು ಮಾತ್ರ. ಎಚ್ಚರಿಕೆಯೂ ಅಗತ್ಯ. ಮತ್ತೊಂದೆಡೆ ಭಾರತದ ಸ್ಕೋರ್ಗೆ ಪ್ರತ್ಯುತ್ತರವಾಗಿ ಬೃಹತ್ ಗುರಿ ನೀಡುವ ಕನಸು ಕಂಡಿದ್ದ ಆಸೀಸ್ ತಾನೇ ತೋಡಿದ್ದ ಹಳ್ಳಕ್ಕೆ ಬಿದ್ದಿದೆ. ನಮ್ಮ ಪಿಚ್ಗಳಲ್ಲಿ ಭಾರತದ ಬೌಲರ್ಗಳು ಉತ್ತಮ ಪ್ರದರ್ಶನ ನೀಡೋದಿಲ್ಲ ಎಂದು ಮಾಜಿ ಕ್ರಿಕೆಟರ್ಗಳು ಹೇಳಿದ್ದರು. ಭಾರತದ ಬ್ಯಾಟರ್ಸ್ ಕೈಕೊಟ್ಟರೂ ಬೌಲರ್ಸ್ ಧಮಾಕ ಸೃಷ್ಟಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ