logo
ಕನ್ನಡ ಸುದ್ದಿ  /  ಕ್ರಿಕೆಟ್  /  19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ಯಾರು; ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಇದ್ದಕ್ಕಿದ್ದಂತೆ ಅವಕಾಶ ಪಡೆದಿದ್ದು ಹೇಗೆ?

19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ಯಾರು; ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಇದ್ದಕ್ಕಿದ್ದಂತೆ ಅವಕಾಶ ಪಡೆದಿದ್ದು ಹೇಗೆ?

Prasanna Kumar P N HT Kannada

Dec 20, 2024 09:59 PM IST

google News

19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ಯಾರು; ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಇದ್ದಕ್ಕಿದ್ದಂತೆ ಅವಕಾಶ ಪಡೆದಿದ್ದು ಹೇಗೆ?

  • Who is Sam Konstas?: ಬಾರ್ಡರ್ ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಈ ಪೈಕಿ ಸ್ಯಾಮ್ ಕೊನ್​ಸ್ಟಾಸ್​ ಅವರಿಗೂ ಅವಕಾಶ ಸಿಕ್ಕಿರುವುದು ವಿಶೇಷ. ಹಾಗಾದರೆ ಈತ ಯಾರು? ಇಲ್ಲಿದೆ ವಿವರ.

19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ಯಾರು; ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಇದ್ದಕ್ಕಿದ್ದಂತೆ ಅವಕಾಶ ಪಡೆದಿದ್ದು ಹೇಗೆ?
19 ವರ್ಷದ ಸ್ಯಾಮ್ ಕೊನ್‌ಸ್ಟಾಸ್ ಯಾರು; ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಇದ್ದಕ್ಕಿದ್ದಂತೆ ಅವಕಾಶ ಪಡೆದಿದ್ದು ಹೇಗೆ?

ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ತಂಡವನ್ನು ಬದಲಾಯಿಸಿದೆ. ನಾಥನ್ ಮೆಕ್​​ಸ್ವೀನಿ ಬದಲಿಗೆ ಸ್ಯಾಮ್ ಕೊನ್​ಸ್ಟಾಸ್ ಅವರಿಗೆ ಮಣೆ ಹಾಕಲಾಗಿದ್ದು, ಪ್ಲೇಯಿಂಗ್ 11ನಲ್ಲೂ ಅವಕಾಶ ಪಡೆಯುವುದು ಖಚಿತವಾಗಿದೆ. ಮತ್ತೊಂದೆಡೆ ಗಾಯಗೊಂಡ ಜೋಶ್ ಹೇಜಲ್​ವುಡ್ ಬದಲಿಗೆ ಜೇ ರಿಚರ್ಡ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ಸೀನ್ ಅಬಾಟ್ ಸಹ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ 19 ವರ್ಷದ ಸ್ಯಾಮ್ ಕೊನ್​ಸ್ಟಾಸ್ ಯಾರು? ಅವರು ಇದ್ದಕ್ಕಿದ್ದಂತೆ ಆಸ್ಟ್ರೇಲಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು ಹೇಗೆ? ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಸ್ಯಾಮ್​ಗೆ ಮಣೆ ಹಾಕಿದ್ದು ಏಕೆ?

19 ವರ್ಷ ವಯಸ್ಸಿನವರಾದ ಸ್ಯಾಮ್ ಕೊನ್​ಸ್ಟಾಸ್ ಅವರು ಈವರೆಗೆ ಆಸ್ಟ್ರೇಲಿಯಾ ಪರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಆದರೆ, ಅವರು ಪ್ರಥಮ ದರ್ಜೆ ಕ್ರಿಕೆಟ್, ಲೀಗ್ ಮತ್ತು ಟಿ20 ಕ್ರಿಕೆಟ್​ನಲ್ಲಿ ತಮ್ಮ ಪ್ರದರ್ಶನದಿಂದ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅಷ್ಟೇ ಅಲ್ಲ, ಇಂಡೋ-ಆಸೀಸ್ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ಮತ್ತು ಪ್ರೈಮ್ ಮಿನಿಸ್ಟರ್ ಇಲೆವೆನ್​ ಪಂದ್ಯದಲ್ಲಿ ಕಣಕ್ಕಿಳಿದು ಭಾರತೀಯ ಬೌಲರ್​​ಗಳನ್ನು ದೃಢವಾಗಿ ಎದುರಿಸಿದ್ದಾರೆ. ಡೇವಿಡ್ ವಾರ್ನರ್ ನಿವೃತ್ತಿಯ ನಂತರ ಸ್ಟೀವ್ ಸ್ಮಿತ್ ಆಸೀಸ್ ಪರ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದರು. ಆದರೆ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಈ ಜವಾಬ್ದಾರಿಯನ್ನು ನಾಥನ್ ಮೆಕ್​ಸ್ವೀನಿ ವಹಿಸಿಕೊಂಡಿದ್ದರು.

ಕೊನ್​ಸ್ಟಾಸ್ ಪ್ರದರ್ಶನ ಹೇಗಿದೆ?

ಆದರೆ ಮೊದಲ 3 ಟೆಸ್ಟ್​​​ಗಳಲ್ಲಿ ಮೆಕ್​ಸ್ವೀನಿ ಅವರ ಪ್ರದರ್ಶನ ತೀವ್ರ ಕಳಪೆಯಾಗಿತ್ತು. ಮೆಕ್​ಸ್ವೀನಿ ಮೂರು ಟೆಸ್ಟ್​ಗಳ ಆರು ಇನ್ನಿಂಗ್ಸ್​​ಗಳಲ್ಲಿ 14.40 ಸರಾಸರಿಯಲ್ಲಿ ಕೇವಲ 72 ರನ್ ಗಳಿಸಿದ್ದಾರೆ. ಈ ಪೈಕಿ 39 ರನ್​ ಅತ್ಯುತ್ತಮ ಸ್ಕೋರ್ ಆಗಿದೆ. ಹೀಗಾಗಿ, 4ನೇ ಟೆಸ್ಟ್​ಗೂ ಮುನ್ನ ಅವರನ್ನು ಕೈಬಿಡಲಾಯಿತು. ಮೆಕ್​ಸ್ವೀನಿ ಸ್ಥಾನ ತುಂಬಿರುವ ಕೊನ್​​ಸ್ಟಾಸ್ ಬಗ್ಗೆ ಹೇಳುವುದಾದರೆ, 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 42.23 ಸರಾಸರಿಯಲ್ಲಿ ಒಟ್ಟು 718 ರನ್ ಗಳಿಸಿದ್ದಾರೆ. ಭಾರತ ವಿರುದ್ಧದ ಅಡಿಲೇಡ್ ಟೆಸ್ಟ್​​ಗೂ ಮುನ್ನ ಪ್ರಧಾನಿ ಇಲೆವೆನ್ ಪರ ಅಭ್ಯಾಸ ಪಂದ್ಯದಲ್ಲಿ ಕೊನ್​​ಸ್ಟಾಸ್ 97 ಎಸೆತಗಳಲ್ಲಿ 107 ರನ್ ಗಳಿಸಿ ಗಮನ ಸೆಳೆದಿದ್ದರು. ಅಂದು ಉಳಿದ ಬ್ಯಾಟರ್ಸ್ ಭಾರತೀಯ ಬೌಲಿಂಗ್ ವಿರುದ್ಧ ಹೆಣಗಾಡುತ್ತಿದ್ದರೆ, ಕೊನ್​​ಸ್ಟಾಸ್ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದರು.

ಸ್ಯಾಮ್ ಕಾನ್​ಸ್ಟಾಸ್​ ಆಯ್ಕೆ ಮಾಡಿದ್ದೇಕೆ?

ಅಲ್ಲದೆ, ಸ್ಯಾಮ್ ಇತ್ತೀಚೆಗೆ ಬಿಗ್ ಬ್ಯಾಷ್ ಲೀಗ್​ (BBL) ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಕೊನ್​​ಸ್ಟಾಸ್ ಸಿಡ್ನಿ ಥಂಡರ್ ಪರ ಚೊಚ್ಚಲ ಪಂದ್ಯವನ್ನಾಡಿದ್ದು, ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು, ಈ ತಿಂಗಳ ಆರಂಭದಲ್ಲಿ ಶೆಫೀಲ್ಡ್ ಶೀಲ್ಡ್​​ನಲ್ಲಿ ನ್ಯೂ ಸೌತ್ ವೇಲ್ಸ್ ಪರ 88 ರನ್ ಚಚ್ಚಿದ್ದರು. ಕೊನ್​​ಸ್ಟಾಸ್ ಇತ್ತೀಚಿನ ಫಾರ್ಮ್ ಅದ್ಭುತವಾಗಿರುವ ಕಾರಣ ಅವರನ್ನು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿದೆ. ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಆಡುವ ಅವಕಾಶ ಪಡೆದರೆ ಕಳೆದ 70 ವರ್ಷಗಳಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಡಿಸೆಂಬರ್ 21 ರಂದು ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಲ್ಲಿ ಕೊನ್​​ಸ್ಟಾಸ್ ಸಿಡ್ನಿ ಥಂಡರ್ ಪರ ಆಡಲಿದ್ದಾರೆ. ಈ ಪಂದ್ಯದ ನಂತರ ಅವರು ಆಸ್ಟ್ರೇಲಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ